ಪ್ರೇಮಿಗಳಿಗೆ ಶಾಕ್ ಜೊತೆ ನಿರಾಸೆಯನ್ನೂ ಮೂಡಿಸಿದ ಕೇಂದ್ರ ಸರ್ಕಾರ! ಫೆಬ್ರವರಿ 14 ಇನ್ಮುಂದೆ ಪ್ರೇಮಿಗಳ ದಿನವಲ್ಲ, ದನಗಳ ಅಪ್ಪುಗೆ ದಿನ!

ಪ್ರೇಮಿಗಳೇ ನಿಮಗೆಲ್ಲರಿಗೂ ನಿರಾಶೆಯಾಗುವಂತಹ ಒಂದು ಸುದ್ಧಿ ಈಗ ದೇಶಾದ್ಯಂತ ಹರಿದಾಡುತ್ತಿದ್ದೆ. ಇದನ್ನು ಕೇಳಿದ್ರೆ ನಿಜಕ್ಕೂ ನಿಮಗೆಲ್ಲ ಶಾಕ್ ಆಗ್ಬೋದು. ಕೇಂದ್ರದಿಂದ ಬಂದ ಪ್ರಕಟಣೆಯೊಂದು ಇದೀಗ ನಿಮ್ಮೆಲ್ಲರ ಆಸೆಗೆ ತಣ್ಣೀರೆರಚಬಹುದು. ನಿಮಗಾಗಿಯೇ ಇದ್ದ ವಿಶೇಷ ದಿನವೊಂದು ಇನ್ನು ಮುಂಬರುವ ವರ್ಷಗಳಲ್ಲಿ ಇರುವುದಿಲ್ಲ. ಅದೇನಪ್ಪಾ ಅಂದ್ರೆ ನಿಮ್ಮ ಪ್ರೇಮವನ್ನು ಸಂಭ್ರಮಿಸಲು ಮೀಸಲಾಗಿದ್ದಂತಹ ದಿನವನ್ನು ಬೇರೆ ಒಂದು ವಿಶೇಷ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅಯ್ಯೋ ದೇವ್ರೇ ಇದೇನಪ್ಪಾ ವಿಚಿತ್ರವಾದ ಬದಲಾವಣೆಗಳು ಅಂತ ವ್ಯಥೆ ಪಡುತ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ.

ಹೌದು, ಫೆಬ್ರವರಿ 14 ಅಂದರೆ ಪ್ರೇಮಿಗಳಲ್ಲಿ ಏನೋ ಒಂದು ಸಂಚಲನ. ಅವರ ಪಾಲಿಗದು, ತಮಗಾಗಿ ಕಾಯ್ದಿರಿಸಿದ ವಿಶೇಷ ದಿನವೆಂದು ಭಾವಿಸುವ ಸುದಿನ. ಅದು ವಿಶ್ವಾದ್ಯಂತ ಪ್ರೇಮಿಗಳ ದಿನವೆಂದೇ ಜನಪ್ರಿಯ. ಆದರೆ ಇದೀಗ ಪ್ರೇಮಿಗಳಿಗೆ ಶಾಕ್ ನೀಡಿರುವ ಕೇಂದ್ರ ಸರ್ಕಾರ ಫೆಬ್ರವರಿ 14ನ್ನು ಅಪ್ಪಿಕೋ ದನ ದಿನವನ್ನಾಗಿ ಆಚರಿಸಿಲು ತೀರ್ಮಾನಿಸಿದೆ. ಅಷ್ಟು ಮಾತ್ರವಲ್ಲದೆ ಎಲ್ಲರೂ ಎಲ್ಲರೂ ಅಂದು ಹಸುವನ್ನು ಅಪ್ಪಿಕೊಳ್ಳುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು ಎಂದು ಕೇಂದ್ರ ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ಮನವಿ ಮಾಡಿದೆ.

ಇಲ್ಲಿಯ ವರೆಗೆ ಫೆಬ್ರವರಿ 14ರಂದು ವಿಶ್ವದಾದ್ಯಂದ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಈ ವರ್ಷದಿಂದ ಆ ದಿನವನ್ನು ‘ಗೋವು ಅಪ್ಪುಗೆ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಬಗ್ಗೆ ಮಂಡಳಿಯು ಬುಧವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು ಇದರಿಂದ ಧನಾತ್ಮಕ ಶಕ್ತಿಯ ಸಂಚಲನವುಂಟಾಗುತ್ತದೆ ಎಂದು ತಿಳಿಸಿದೆ. ದನವನ್ನು ಅಪ್ಪಿಕೊಳ್ಳುವುದು ಭಾವನಾತ್ಮಕ ಶ್ರೀಮಂತಿಕೆಯ ವಿಷಯವಾಗಿದ್ದು, ಹೀಗೆ ಮಾಡುವುದರಿಂದ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷ ವೃದ್ಧಿಸುತ್ತದೆ ಎಂದು ಮಂಡಳಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಡಳಿಯು ‘ದನವು ಭಾರತೀಯ ಸಂಸ್ಕೃತಿ ಮತ್ತು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂಬುದು ನಮಗೆಲ್ಲ ತಿಳಿದಿರುವ ಸಂಗತಿಯಾಗಿದೆ. ಗೋಸಂಪತ್ತು ಮತ್ತು ಜೀವ ವೈವಿಧ್ಯತೆಗಳ ಮೇಲೆ ನಮ್ಮ ಉಳಿವು ನಿಂತಿದೆ. ಕಾಮಧೇನು,ರೈತರ ಸಂಗಾತಿ, ರೈತರ ಗೆಳೆಯ, ಸಿರಿ ಸಮೃದ್ಧಿ ಪ್ರತೀಕ ಎಂಬೆಲ್ಲಾ ಹೆಸರಿನಿಂದ ಕರೆಯುವ ಹಸುವನ್ನು ಅಪ್ಪಿಕೊಳ್ಳುವುದರಿಂದ ಹಸುವಿನ ಬಗ್ಗೆ ಕಳಕಳಿ,ಕಾಳಜಿ,ಮಮತೆ ಮೂಡಲಿದೆ. ಇದು ಭಾವನಾತ್ಮಕ ಶ್ರೀಮಂತಿಕೆಯ ಸಂಕೇತವಾಗಿರುವುದು ಮಾತ್ರವಲ್ಲದೆ ಇದರಿಂದ ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷ ವೃದ್ಧಿಯಾಗುತ್ತದೆ’ ಎಂದು ಹೇಳಿದೆ.

ಅಲ್ಲದೆ, ನಮ್ಮ ದೇಶದ ಯುವ ಜನತೆ ಪಾಶ್ಮಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಪರಿಣಾಮ ವೇದಕಾಲದ ಸಂಪ್ರದಾಯಗಳು ಬಹುತೇಕ ಅಳಿವಿನಂಚಿಗೆ ತಲುಪಿದೆ. ಪಾಶ್ಮಿಮಾತ್ಯ ಶೈಲಿ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯುವಂತೆ ಮಾಡಿದೆ. ಗೋವುಗಳನ್ನು ಅಪ್ಪಿಕೊಳ್ಳುವುದು ಭಾವನಾತ್ಮ ಸಿರಿವಂತಿಕೆ ತರುತ್ತದೆ ಎಂದು ಮಂಡಳಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ಫೆ 14‌ರಂದು ಪ್ರೇಮಿಗಳು, ಯುವಕ ಯುವತಿಯರಿಗೆ ಪ್ರೇಮ ನಿವೇದನೆ ಮಾಡುವ ಬದಲಿಗೆ ಪ್ರಾಣಿಗಳನ್ನು ಅಪ್ಪಿಕೊಳ್ಳಿ , ಹಸುವಿನ ಬಗ್ಗೆ ಕಳಕಳಿ, ಕಾಳಜಿ, ಮಮತೆ ಮೂಡಲಿದೆ ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ.

ಇನ್ನು ಮಂಡಳಿಯ ಸಹಾಯಕ ಕಾರ್ಯದರ್ಶಿ ಪ್ರಾಚಿ ಜೈನ್ ಈ ಕುರಿತು ಮಾತನಾಡಿ ‘ಸಾರ್ವಜನಿಕರಿಗೆ ಈ ಮನವಿ ಮಾಡಲು ನಮಗೆ ಕೇಂದ್ರ ಸಚಿವಾಲಯದಿಂದ ನಿರ್ದೇಶನ ಬಂದಿದೆ. ಅದಕ್ಕಾಗಿ ನಾವು ಕೆಲವು ಪ್ರಾತಿನಿಧ್ಯಗಳನ್ನು ಸ್ವೀಕರಿಸಿದ್ದೇವೆ. ಈ ಬಾರಿ ಸಮಯವು ತುಂಬಾ ಸೀಮಿತವಾಗಿದೆ, ಇದರಿಂದಾಗಿ ಫೆಬ್ರವರಿ 14ರಂದು ಯಾವುದೇ ಕಾರ್ಯಕ್ರಮವನ್ನು ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಆದರೆ ನಾವು ಜನರಿಗೆ ಮನವಿ ಮಾಡಿಕೊಂಡಿದ್ದೇವೆ. ಈ ಮನವಿಯನ್ನು ನಾವು ಎಲ್ಲಾ ರಾಜ್ಯಗಳಿಗೆ ಸೇರಿ ಮಾಡಿದ್ದೇವೆ. ಪ್ರಾಣಿ ಕಲ್ಯಾಣ ಎಲ್ಲಾ ರಾಜ್ಯಗಳಿಗೆ ಸಂಬಂಧಿಸಿದ್ದು. ಗುಜರಾತ್ ಮತ್ತು ಇತರ ರಾಜ್ಯಗಳು ಫೆಬ್ರವರಿ 14 ಅನ್ನು ಗೋ ಅಪ್ಪುಗೆಯ ದಿನವನ್ನಾಗಿ ಆಚರಿಸುತ್ತವೆ’ ಎಂದು ತಿಳಿಸಿದ್ದಾರೆ.

ಏನೇ ಆಗಲಿ ಪಾಪ, ವರ್ಷಕ್ಕೊಮ್ಮೆಯಾದರೂ ತಮಗಾಗಿ ಮೀಸಲಿದ್ದ ಈ ದಿನದ ಕುರಿತು ಪ್ರೇಮಿಗಳು, ಇನ್ನು ಮುಂದೆ ಪ್ರೇಮಿಸಬೇಕು ಅಂದುಕೊಂಡವರು ಸಾಕಷ್ಟು ಕನಸು ಇಟ್ಟುಕೊಂಡಿರುತ್ತಾರೆ. ಜೋಡಿ ಹಕ್ಕಿಗಳು ಏನೇ ವಿಷಯ ಮಾತನಾಡುವುದಾದರೂ ಫೆ. 14 ಇದ್ಯಲ್ಲಾ ಅವತ್ತು ಇದನ್ನ ಮಾಡೋಣ, ಅಲ್ಲಿಗೆ ಹೋಗೋಣ, ಇಲ್ಲಿಗೆ ಹೋಗೋಣ, ಆ ಗಿಫ್ಟ್ ಕೊಡಿಸೋಣ ಎಂದಕೊಂಡಿರುತ್ತಾರೆ. ಇದರಿಂದ ತಮ್ಮ ಪ್ರಿಯತಮೆಯನ್ನೋ, ಪ್ರಿಯತಮನನ್ನೋ ಸಂತೋಷ ಪಡಿಸಬಹುದೆಂಬ ಆಸೆಯೂ ಅವರಲ್ಲಿರುತ್ತದೆ. ಅಲ್ಲದೆ ಇನ್ನು ಕೆಲವರು ಈ ದಿನವೇ ಪ್ರೇಮ ನಿವೇದನೆ ಮಾಡಬೇಕು ಅಂದುಕೊಂಡಿರುತ್ತಾರೆ. ಆದರೆ ಸರ್ಕಾರದ ಈ ಹೊಸ ನಿಯಮ, ಅದೆಲ್ಲದಕ್ಕೂ ಒಂದು ಬ್ರೇಕ್ ಹಾಕಿದಂತಾಗಿದೆ. ಇವೆಲ್ಲವನ್ನು ಅವರು ಮಾಡಲು ಯಾರ ಅಡ್ಡಿ ಇಲ್ಲವಾದರೂ ಅದೊಂದು ಭಾವನಾತ್ಮಕ ದಿನ ಇನ್ನುಮುಂದೆ ತಮ್ಮ ದಿನವಾಗಿರುವುದೆಲ್ಲ ಎಂಬ ಅಳುಕು ಇದ್ದೇ ಇರುತ್ತದೆ.

Leave A Reply

Your email address will not be published.