‘ವೇದ’ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಅಪ್ಪು ನೆನೆದು ಗಳ ಗಳನೆ ಅತ್ತ ಶಿವಣ್ಣ! ತಬ್ಬಿಕೊಂಡು ಸಮಾಧಾನ ಮಾಡಿದ ಬಾಲಯ್ಯ

Share the Article

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ಕನ್ನಡದಲ್ಲಿ ಭರ್ಜರಿಯಾಗಿ ತೆರೆ ಕಂಡು, ಸಕ್ಸಸ್ ಕೂಡ ಆಗಿ ಇದೀಗ ತೆಲುಗಿನಲ್ಲಿ ಅಬ್ಬರಿಸಲು ಮುಂದಡಿ ಇಡುತ್ತಿದೆ. ಪ್ರಚಾರದ ಕಾರ್ಯವೂ ಭರದಿಂದ ಸಾಗುತ್ತಿದ್ದೆ. ಇದೀಗ ಹೈದರಾಬಾದ್​ನಲ್ಲಿ ನಡೆದ ‘ವೇದ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಪಾಲ್ಗೊಂಡಿದ್ದ ಶಿವಣ್ಣ, ತಮ್ಮ ಪ್ರೀತಿಯ ತಮ್ಮ ‘ಅಪ್ಪು’ನ ನೆನೆದು ಭಾವುಕರಾದರಾಗಿದ್ದಾರೆ. ಪಕ್ಕದಲ್ಲಿದ್ದ ನಂದಮೂರಿ ಬಾಲಕೃಷ್ಣ ಅವರು ಶಿವರಾಜ್​ಕುಮಾರ್ ಅವರನ್ನು ಸಮಾಧಾನ ಮಾಡಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸ್ಯಾಂಡಲ್ ವುಡ್ ನ ದೊಡ್ಡ ಮನೆಯ ಬ್ರದರ್ಸ್ ಅಂದ್ರೆ ಎಲ್ಲರಿಗೂ ಒಂದು ಗೌರವ. ಅವರ ನಡುವಿನ ಭಾಂದವ್ಯಕ್ಕೆ ಎಂತವರೂ ಮನಸೋಲುತ್ತಾರೆ. ಅದರಲ್ಲೂ ಶಿವರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರು ಅಣ್ಣ ತಮ್ಮ ಅನ್ನುವುದಕ್ಕಿಂತ ಸ್ನೇಹಿತರಂತಿದ್ದವರು. ಅವರ ನಡುವೆ ಎಷ್ಟು ಆಪ್ತತೆ ಇತ್ತು ಅನ್ನೋದನ್ನು ಮತ್ತೆ ವಿವರಿಸಿ ಹೇಳಬೇಕಿಲ್ಲ. ಅಪ್ಪುನ ಕಳೆದುಕೊಂಡ ನಂತರದಲ್ಲಿ ಶಿವರಾಜ್​ಕುಮಾರ್ ತುಂಬಾನೇ ದುಃಖಿತರಾಗಿದ್ದಾರೆ. ಪ್ರತಿ ವೇದಿಕೆ ಮೇಲೆ ಅಪ್ಪುನ ನೆನಪಿಸಿಕೊಂಡು ಶಿವಣ್ಣ ಭಾವುಕರಾಗುತ್ತಾರೆ. ಆ ನೋವಿನಿಂದ ಅವರಿನ್ನು ಹೊರಬಂದಿಲ್ಲ. ಇದೀಗ ಹೈದರಾಬಾದಿನಲ್ಲೂ ತಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

‘ವೆದ’ ತೆಲುಗು ವರ್ಷನ್​ನ ಪ್ರೀ ರಿಲೀಸ್ ಇವೆಂಟ್ ಫೆಬ್ರವರಿ 7ರಂದು ಹೈದರಾಬಾದ್​ನಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಾಲಯ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಮಯದಲ್ಲಿ ವೇದಿಕೆ ಮೇಲೆ ಪುನೀತ್ ಅವರ ವಿಡಿಯೋ ಪ್ರಸಾರ ಮಾಡಲಾಯಿತು. ಇದನ್ನು ನೋಡುತ್ತಿದ್ದಂತೆ ಶಿವಣ್ಣ ಅವರಿಗೆ ದುಃಖ ತಡೆಯಲು ಆಗಲೇ ಇಲ್ಲ. ಒಂದೇ ಸಮನೆ ಕಣ್ಣೀರು ಹಾಕಿದರು. ಪಕ್ಕದಲ್ಲೇ ಇದ್ದ ಬಾಲಯ್ಯ ಅವರು ಸಮಾಧಾನ ಮಾಡಲು ಪ್ರಯತ್ನಿಸಿದರು.

ಶಿವರಾಜ್​ಕುಮಾರ್ ಅವರ ‘ವೇದ’ ಹಲವು ಕಾರಣಗಳಿಂದ ವಿಶೇಷ ಎನಿಸಿಕೊಂಡಿದೆ. ಇದು ಶಿವರಾಜ್​ಕುಮಾರ್ ಅವರ 125ನೇ ಚಿತ್ರ. ಗೀತಾ ಶಿವರಾಜ್​ಕುಮಾರ್ ನಿರ್ಮಾಣದ ಮೊದಲ ಸಿನಿಮಾ. ಎ. ಹರ್ಷ ಹಾಗೂ ಶಿವರಾಜ್​ಕುಮಾರ್ ಅವರದ್ದು ಹಿಟ್ ಕಾಂಬಿನೇಷನ್. ‘ಭಜರಂಗಿ’ ಅಂತಹ ಹಿಟ್ ಚಿತ್ರಗಳನ್ನು ಈ ಜೋಡಿ ನೀಡಿದೆ. ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್​ನಲ್ಲಿ ಮೂಡಿಬಂದ 4ನೇ ಚಿತ್ರ ಇದಾಗಿದೆ. ಈ ಎಲ್ಲಾ ಕಾರಣದಿಂದಲೂ ಚಿತ್ರಕ್ಕೆ ಸಾಕಷ್ಟು ಹೈಪ್ ಸಿಕ್ಕಿತ್ತು. ಈಗ ಈ ಚಿತ್ರ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.

‘ವೇದ’ ಸಿನಿಮಾ ಕಳೆದ ವರ್ಷಾಂತ್ಯದಲ್ಲಿ ತೆರೆಗೆ ಬಂದು ಎಲ್ಲರ ಮೆಚ್ಚುಗೆ ಪಾತ್ರವಾಗಿತ್ತು. ಇದೀಗ ಈ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗುತ್ತಿದೆ. ವಿಶೇಷ ಎಂದರೆ ಈ ಚಿತ್ರ ತೆಲುಗಿನಲ್ಲೂ ತೆರೆಗೆ ಬರುತ್ತಿದೆ. ಫೆಬ್ರವರಿ 9ಕ್ಕೆ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ತೆಲುಗಿನಲ್ಲಿ ಅಬ್ಬರದ ಪ್ರಚಾರ ಕೂಡ ಸಿಗುತ್ತಿದೆ.

https://twitter.com/MadhPRKBOSSCult/status/1623128575259078662?t=lDDKAwgDNMCO_Aomng6k1Q&s=08
Leave A Reply