ಈ ಬಾರೊಂದರ ಮೆನು ಬಿಲ್ ನೋಡಿದ್ರೆ ಸುರಪಾನ ಪ್ರಿಯರಿಗಾಗುತ್ತೆ ಶಾಕ್! ಇಲ್ಲಿ ನೀರಿಗಿಂತಲೂ ಕಡಿಮೆ ಬೆಲೆಗೆ ಸಿಗುತ್ತೆ ಪ್ರೀಮಿಯಂ ವಿಸ್ಕಿ ಮತ್ತು ಬಿಯರ್!!

ಈ ಬಾರೊಂದರ ಮೆನು ಬಿಲ್ ನೋಡಿದರೆ ಸುರಪಾನ ಪ್ರಿಯರ ಕಣ್ಣಲ್ಲಿ ನೀರು ಬರೋದು ಪಕ್ಕಾ. ಏಕೆಂದರೆ ಬೇರೆ ಬಾರುಗಳಲ್ಲಿ ಕಿಂಗ್​ಫಿಷರ್​​, ಬೀರ್​, ವಿಸ್ಕಿ, ಬಿಯರ್ ಗಳು ಹಾಗೂ ಇತರ ಮದ್ಯಗಳ ಬೆಲೆ ಕೈ ಸುಡುವಂತಿದ್ದರೆ ,ಇಲ್ಲಿ ಮಾತ್ರ ಅವೆಲ್ಲವೂ ನೀರಿಗಿಂತ ಕಡಿಮೆ ಬೆಲೆಗೆ ಸಿಗುತ್ತದೆ. ಸದ್ಯ ಈ ಬಾರಿನ ಮೆನು ಕಾರ್ಡ್ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದುಮಾಡುತ್ತಿದ್ದು, ಆ ಮೆನು ನೋಡಿ ನೋಡಿ ನೆಟ್ಟಿಗರಿಗೆ, ಮಧ್ಯಪ್ರಿಯರಿಗೆ ಸಕ್ಕತ್ ಶಾಕ್ ಆಗಿದೆ. ಹಾಗಿದ್ರೆ ಅಷ್ಟು ಕಡಿಮೆ ರೇಟಿಗೆ ಮಧ್ಯ ನೀಡೋ ಆ ಬಾರ್ ಯಾವುದು? ಯಾವೆಲ್ಲಾ ಬೆಲೆಗೆ ಸುರಪಾನ ಕೈಗೆ ಸಿಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಬಾರ್‌, ಪಬ್‌ ಮತ್ತು ಹೋಟೆಲ್‌ಗಳಲ್ಲಿ ಪ್ರೀಮಿಯಂ ವಿಸ್ಕಿ ಅಥವಾ ಬಿಯರ್‌ಗೆ ಸಾಕಷ್ಟು ವೆಚ್ಚವಾಗುತ್ತದೆ. ಕನಿಷ್ಠ ಅಂದ್ರೂ ಸಾವಿರ-ಎರಡು ಸಾವಿರ ರೂಪಾಯಿವರೆಗೆ ಬಿಲ್ ಮಾಡಲಾಗುತ್ತದೆ. ಹೀಗಿರುವಾಗ ನೀರಿಗಿಂತ ಕಡಿಮೆ ಬೆಲೆಗೆ ಒಂದು ಪೆಗ್ ಮದ್ಯ ಸಿಕ್ಕರೆ ಪಾನಪ್ರಿಯರಿಗೆ ಎಷ್ಟು ಖುಷಿ ಆಗ್ಬೋದು ಅಲ್ವಾ? ಹೌದು, ಹೊರಗಿನ ಮಾರುಕಟ್ಟೆಯಲ್ಲಿ ನೂರಾರು, ಸಾವಿರಾರು ಬೆಲೆ ಬಾಳುವ ಬಿಯರ್ ಗಳು ಮತ್ತು ತಿಂಡಿಗಳು ಈ ಬಾರಲ್ಲಿ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತವೆ. ಹಾಗಿದ್ರೆ ಈ ಬಾರ್ ಯಾವ್ದು ಅಂತೀರಾ?

ಹೀಗೆ ಅಗ್ಗದ ಬೆಲೆಯಲ್ಲಿ ಮದ್ಯ ಸಿಗ್ತಾ ಇರುವ ಬಗ್ಗೆ ಬಿಲ್‌ ಒಂದು ಆನ್‌ಲೈನ್‌ನಲ್ಲಿ ವೈರಲ್‌ ಆಗಿದ್ದು, ಇದು ಬೇರಾವ ಹೊರಗಿನ ಬಾರ್ ಮೆನು ಅಲ್ಲ. ನಮ್ಮ ನೌಕಾಪಡೆಯ ಅಧಿಕಾರಿಗಳ ಮೆಸ್‌ನ ಮೆನು! ಸದ್ಯ ಇದರಲ್ಲಿನ ಮದ್ಯದ ಬೆಲೆಗಳು ಇಂಟರ್ನೆಟ್ ಬಳಕೆದಾರರನ್ನು ಅಚ್ಚರಿಯಲ್ಲಿ ಮುಳುಗಿಸಿವೆ. ಏಕೆಂದರೆ ಈ ರೆಸ್ಟೊರೆಂಟ್‌ನಲ್ಲಿ ಕಿಂಗ್‌ಫಿಶರ್ (beer) 44 ರೂ. ಗೆ ಸಿಗುತ್ತಿದ್ದು, ವಿಸ್ಕಿ ದರವೂ ಅತ್ಯಂತ ಅಗ್ಗವಾಗಿದೆ. ಅಲ್ಲದೆ ಬ್ರಾಂಡೆಟ್‌ ವಿಸ್ಕಿ ಮತ್ತು ಬಿಯರ್‌ ಅತ್ಯಂತ ಕಡಿಮೆ ಬೆಲೆಗೆ ಇಲ್ಲಿ ಲಭ್ಯವಿದೆ. ಬಹುತೇಕ ಮದ್ಯದ ಬೆಲೆ 100 ರೂಪಾಯಿಗಿಂತಲೂ ಕಡಿಮೆಯಿದೆ.

ಸಾಮಾನ್ಯವಾಗಿ ನಾವು ಡ್ರಿಂಕ್ಸ್ , ಫುಡ್, ಸ್ನ್ಯಾಕ್ಸ್ ಗಳಿಗೆ ರೆಸ್ಟೊರೆಂಟ್ ಗೆ ಹೋದಾಗಲೆಲ್ಲ, ನಮಗೆ ಗೊತ್ತಿಲ್ಲದೆ ನಮ್ಮ ಕಣ್ಣುಗಳು ಮೆನುವಿನಲ್ಲಿರುವ ದರ ಪಟ್ಟಿಯತ್ತ ಸಾಗುತ್ತದೆ. ನಮ್ಮ ಬಜೆಟ್‌ಗೆ ಸರಿಹೊಂದುವ ವಸ್ತುವನ್ನು ಹುಡುಕಿ, ಆಯ್ಕೆ ಮಾಡುವುದು ವಾಡಿಕೆ. ಆದರೆ ನಮ್ಮ ನೌಕಾಪಡೆ ಅಧಿಕಾರಿಗಳ ಮೆಸ್ ನಲ್ಲಿ ಮಾತ್ರ ಮದ್ಯ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಅದನ್ನು ಕಂಡು ಆನಂದತುಂದಲಿತರಾದ ಪಾನ ಪ್ರಿಯರು ಆನಂದಬಾಷ್ಪ ಸುರಿಸುತ್ತಿದ್ದಾರೆ.

ಅನಂತ್ ಎಂಬ ಟ್ವಿಟರ್ ಬಳಕೆದಾರರೊಬ್ಬರು ಮೆನುವಿನ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದು, ಸದ್ಯ ಅದೀಗ ಎಲ್ಲೆಡೆ ವೈರಲ್ ಆಗಿ, ಜನರು ಹುಬ್ಬೇರಿಸುವಂತೆ ಮಾಡಿದೆ. ವಿಸ್ಕಿ ಮತ್ತು ಬಿಯರ್‌ನಂತಹ ವಿವಿಧ ಬ್ರಾಂಡ್‌ಗಳ ದುಬಾರಿ ಪಾನೀಯಗಳನ್ನು ಬಜೆಟ್ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಈ ಬಿಲ್ ತೋರಿಸುತ್ತದೆ. ಅನಂತ್ ಅವರು ತಮ್ಮ ಪೋಸ್ಟ್‌ಗೆ “ನನ್ನ ಬೆಂಗಳೂರಿನ ಮೆದುಳಿಗೆ ಈ ಬೆಲೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಈ ಪೋಸ್ಟ್ ಶೇರ್ ಮಾಡಿರುವುದು ಇನ್ನೂ ವಿಶೇಷ.

ಇನ್ನು ಈ ಪೋಸ್ಟ್ ನೋಡಿದ ಅನೇಕರು ವಿವಿಧ ರೀತಿಯ ರಸವತ್ತಾದ ಕಮೆಂಟ್ ಗಳನ್ನು ಕಮಂಟಿಸುತ್ತಿದ್ದು, ‘ಎಲ್ಲಿ, ಈ ಬೆಲೆಗಳನ್ನು ಯಾವಾಗ ನೋಡಿದೆ ಬ್ರೋ? ಎಂದು ಒಬ್ಬರು ಕುತೂಹಲದಿಂದ ಕೇಳಿದ್ದಾರೆ. ‘ಹಹ್ಹ, ಇದು ಡಿಎಸ್ಒಐ ಮೆನುವಿನಂತಿದೆ. ಬಟ್ ಇಷ್ಟ ಪಡುತ್ತೇನೆ! ಏಕೆಂದರೆ ನಾನು ಬೆಂಗಳೂರಿನಲ್ಲಿ 500 ರೂ.ಗೆ ಕಿಂಗ್ ಫಿಶರ್ ಖರೀದಿಸಿದೆ ಎಂದು ಇನ್ನೊಬ್ಬರು ಹೇಳಿಕೊಂಡಿದ್ದಾರೆ. ನಾನು ಮುಂಬೈನಲ್ಲಿ ಮೊನ್ನೆ ಬಾರ್ ಮತ್ತು ರೆಸ್ಟೋರೆಂಟ್‌ಗೆ ಹೋಗಿದ್ದೆ. ಅಲ್ಲಿನ ಬೆಲೆಗಳನ್ನು ನೋಡಿ ಬೆಚ್ಚಿಬಿದ್ದಿದ್ದೆ. 60 ML ಗೆ ನಂಬಲಾಗದ ದರಗಳನ್ನು ಹೇಳಿಕೊಂಡಿದ್ದಾರೆ. ಆದರೆ ಅದೆಲ್ಲಾ ಸರಿ ಈ ಅಗ್ಗದ ರೆಸ್ಟೋರೆಂಟ್ ಎಲ್ಲಿದೆ? ಎಂದೂ ಅನೇಕ ಮದ್ಯ ಪ್ರಿಯರು ಪ್ರಶ್ನಾರ್ಥಕ ಚಿಹ್ನೆಯನ್ನು ಮುಂದಿಟ್ಟಿದ್ದಾರೆ. ಬಹುಶಃ ಇದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸೇನಾ ಮೆಸ್​​ ಒಂದರಲ್ಲಿ ಇರಬಹುದು ಎಂದು ಮತ್ತೊಬ್ಬರು ಸಮಾಧಾನ ಮಾಡಿಕೊಂಡಿದ್ದಾರೆ.

ವಾಸ್ತವವಾಗಿ ಸೇನಾ ಸಿಬ್ಬಂದಿ ಕೇಂದ್ರ ಸರ್ಕಾರದ ಅಧಿಕಾರಿಗಳಾಗಿರುವುದರಿಂದ ಅವರಿಗೆ ಕೇಂದ್ರ ಅಬಕಾರಿ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಅದಕ್ಕಾಗಿಯೇ ಮಿಲಿಟರಿ ಕ್ಯಾಂಟೀನ್‌ಗಳಲ್ಲಿ ಮದ್ಯ ಮತ್ತು ವಿವಿಧ ರೀತಿಯ ದಿನಸಿ ವಸ್ತುಗಳು ಹೊರಗಿನ ಮಾರುಕಟ್ಟೆಗಳಿಗಿಂತ ಕೇವಲ 10 ರಿಂದ 15 ಪ್ರತಿಶತದಷ್ಟು ಅಗ್ಗವಾಗಿ ಲಭ್ಯವಿರುತ್ತವೆ.

Leave A Reply

Your email address will not be published.