ಬೆಂಗಳೂರಲ್ಲಿ ವಿಮಾನ ಹತ್ತಬೇಕಾದವಳು, ವಿಮಾನಕ್ಕೇ ಬಾಂಬ್ ಇಡ್ತೀನಿ ಅಂದ್ಲು! ಕೊನೆಗೆ ಬಾಂಬು ಇಲ್ದೆ, ಪ್ರಯಾಣಾನೂ ಇಲ್ದೆ ಜೈಲುಪಾಲಾದ್ಲು!

ಇದುವರೆಗೂ ವಿಮಾನಗಳು ಜನರಿಗೆ ತೊಂದರೆ ಉಂಟು ಮಾಡಿದ ಘಟನೆಗಳನ್ನು ನಾವು ಕೇಳುತ್ತಾ ಬಂದಿದ್ದೇವೆ. ಆದರೆ ಇದೀಗ ಇಲ್ಲೊಬ್ಬಳು ಮಹಿಳೆ ವಿಮಾನಕ್ಕೇ ಬೆದರಿಕೆ ಹಾಕಿ, ವಿಮಾನವನ್ನು ಬಾಂಬ್ ಹಾಕಿ ಸ್ಪೋಟಿಸುವುದಾಗಿ ಹೆದರಿಸಿಬಿಟ್ಟಿದ್ದಾಳೆ. ಕೊನೆಗೆ ಬೆದರಿಕೆಯೂ ಇಲ್ಲ, ಬಾಂಬು ಇಲ್ಲದಂತೆ ಜೈಲು ಪಾಲು ಆಗಿರುವ ಘಟನೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಕೇರಳ ಮೂಲದ ಮಹಿಳೆಯೊಬ್ಬಳು ಬೆಂಗಳೂರಿನಿಂದ ವಿಮಾನದ ಮೂಲಕ ಕೋಲ್ಕತ್ತಾಗೆ ತೆರಳವ ನಿಟ್ಟಿನಲ್ಲಿ ಇಂಡಿಗೋ ವಿಮಾನ 6E-445ನಲ್ಲಿ ಟಿಕೆಟ್ ಬುಕ್ ಮಾಡಿದ್ದಳು. ಅದರಂತೆ ನಿನ್ನೆ (ಫೆಬ್ರವರಿ 4 ರಂದು) ಬೋರ್ಡಿಂಗ್​ ಗೇಟ್​ ನಂಬರ್ 6ರಲ್ಲಿ ವಿಮಾನಕ್ಕಾಗಿ ಕಾದುಕುಳಿತ್ತಿದ್ದಳು. ಈ ವೇಳೆ ವಿಮಾನ ಹತ್ತಲು ವಿಳಂಬವಾಗುತ್ತಿದೆ ಎಂದು ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿದ್ದಾಳೆ. ಬಳಿಕ ಹಲ್ಲೆ ನಡೆಸಿ ಬಾಂಬ್ ಬೆದರಿಕೆ ಹಾಕಿದ್ದಾಳೆ. ಹೀಗಾಗಿ ಮಹಿಳೆಯನ್ನು ಬಂಧಿಸಿದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಮಹಿಳೆ ಜೈಲುಪಾಲಾಗಿದ್ದಾಳೆ.

ಸಿಬ್ಬಂದಿಯೊಂದಿಗೆ ಕಿರಿಕ್​ ಆರಂಭಿಸಿದ ಮಹಿಳೆ ಭದ್ರತಾ ಪಡೆ ಮೇಲೆ ಹಲ್ಲೆ ನಡೆಸಿದ್ದಾಳೆ. ಅಷ್ಟಾದರೂ ಭದ್ರತಾ ಸಿಬ್ಬಂದಿ ಆಕೆಯನ್ನು ಒಳಗೆಬಿಟ್ಟಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆ, ತನ್ನನ್ನು ಬಿಡಲಿಲ್ಲವೆಂದು ಬಾಂಬ್​ ಬೆದರಿಕೆಯೊಡ್ಡಿದ್ದಾಳೆ. ವಿಮಾನದಲ್ಲಿ ಬಾಂಬ್​ ಇಟ್ಟು ಸ್ಫೋಟಿಸುತ್ತೇನೆ. ಎಲ್ಲರೂ ಇಲ್ಲಿಂದ ಹೋಗಿ ಎಂದು ಗೇಟ್ ನಂ.6ರಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಬೆದರಿಸಿದ್ದಾಳೆ. ಕೂಡಲೇ ಆಕೆಯನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಆಕೆಯನ್ನು ಜೈಲಿಗಟ್ಟಿದ್ದಾರೆ.

Leave A Reply

Your email address will not be published.