Vinod Kambli : ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ! ಎಫ್‌ಐ ಆರ್ ದಾಖಲು ಮಾಡಿದ ಪತ್ನಿ, ಕಾರಣವೇನು ಗೊತ್ತಾ?
ಕ್ರಿಕೆಟ್ ಎಂಬ ಮಾಂತ್ರಿಕ ಲೋಕದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ವಿನೋದ್ ಕಾಂಬ್ಳಿ 1990 ರ ದಶಕದಲ್ಲಿ ಭಾರತ ತಂಡದಲ್ಲಿ ಸ್ಥಾನ ಗಳಿಸಿಕೊಂಡಿದ್ದು ದೀರ್ಘಕಾಲದವರೆಗೆ ತಂಡದ ಭಾಗವಾಗಿ ODIಗಳಲ್ಲಿ 32.59 ಸರಾಸರಿ ಹೊಂದಿರುವ ವಿನೋದ್ ಕಾಂಬ್ಳಿ, ಭಾರತಕ್ಕಾಗಿ 17 ಟೆಸ್ಟ್‌ಗಳಲ್ಲಿ 54.2 ರ ಸರಾಸರಿಯಲ್ಲಿ 1,084 ರನ್ ಗಳಿಸಿದ್ದಾರೆ. ಆದರೆ, ಇದೀಗ ವಿನೋದ್ ಕಾಂಬ್ಳಿ ತನ್ನ ಮಡದಿಯ ಮೇಲೆ ಹಲ್ಲೆ ನಡೆಸಿದ ಆರೋಪವನ್ನು ಹೊತ್ತಿದ್ದಾರೆ.
ಎಣ್ಣೆಯ ನಶೆ ತಲೆಗೇರಿದರೆ ವಾಸ್ತವ ಪ್ರಪಂಚದಲ್ಲಿ ಇರುವುದಿಲ್ಲ ಎಂಬುದು ಗೊತ್ತಿರುವ ವಿಚಾರವೇ!! ಮದ್ಯದ ಅಮಲಿನಲ್ಲಿ ವಿನೋದ್ ಕಾಂಬ್ಳಿ ತನ್ನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆಂಡ್ರಿಯಾ ಆರೋಪ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕುಡಿದ ಅಮಲಿನಲ್ಲಿ ವಿನೋದ್ ಕಾಂಬ್ಳಿ ತನ್ನ ಮೇಲೆ ಅಡುಗೆ ಪ್ಯಾನ್‌ನ ಹಿಡಿಕೆಯನ್ನು ಎಸೆದು ಹೊಡೆದ ಪರಿಣಾಮ ತಲೆಗೆ ಗಾಯವಾಗಿದೆ ಎಂದು ವಿನೋದ್ ಅವರ ಪತ್ನಿ ಆಂಡ್ರಿಯಾ ಹೆವಿಟ್ (Andrea Hewitt) ಮುಂಬೈ ಪೊಲೀಸರಿಗೆ (Police) ದೂರು ನೀಡಿದ್ದಾರೆ ಎನ್ನಲಾಗಿದೆ.
ಭಾರತ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರು ತಮ್ಮ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದ್ದು, ಸದ್ಯ ಈ ಕುರಿತು ಅವರ ಪತ್ನಿ ಆಂಡ್ರಿಯಾ ಪೊಲೀಸರಿಗೆ ದೂರು ನೀಡಿದ ಅನುಸಾರ, ಶುಕ್ರವಾರ ಮಧ್ಯಾಹ್ನ 1 ರಿಂದ 1.30ರ ನಡುವೆ ಘಟನೆ ನಡೆದಿದೆ ಎನ್ನಲಾಗಿದೆ. ಆಂಡ್ರಿಯಾ ತನ್ನ ದೂರಿನಲ್ಲಿ, ‘ವಿನೋದ್ ಕಾಂಬ್ಳಿ ಕುಡಿದ ಅಮಲಿನಲ್ಲಿ ಬಾಂದ್ರಾ ಫ್ಲಾಟ್‌ಗೆ ಬಂದು ಪತ್ನಿಯನ್ನು ನಿಂದಿಸಿದ್ದಾರೆ.ಇದೆ ವೇಳೆ ಅಡುಗೆ ಮನೆಗೆ ಬಂದು ಅಡುಗೆ ಪಾತ್ರೆಯ ಹಿಡಿಕೆ ಎಸೆದು ನನಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ತನ್ನ ಪತಿ ನಿರಂತರವಾಗಿ ಬೆದರಿಕೆ ಹಾಕುವ ಜೊತೆಗೆ ತನಗೂ ಮಗುವಿಗೂ ನಿಂದಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮೇಲೆ ಈ ರೀತಿ ಆರೋಪ ಇದೆ ಮೊದಲಲ್ಲ. ಕಳೆದ ವರ್ಷ ಫೆಬ್ರವರಿಯಲ್ಲಿ ವಿನೋದ್ ಕಾಂಬ್ಳಿ ಕುಡಿದ ಅಮಲಿನಲ್ಲಿ ಮತ್ತೊಂದು ವಾಹನಕ್ಕೆ ತನ್ನ ಕಾರಿನಿಂದ ಡಿಕ್ಕಿ ಹೊಡೆದಿದ್ದರಿಂದ ಪೊಲೀಸರು ಅವರನ್ನು ಬಂಧಿಸಿದ್ದರು. ಪೋಲಿಸ್ ಮೂಲಗಳ ಮಾಹಿತಿ ಅನುಸಾರ, ಮಾಜಿ ಕ್ರಿಕೆಟಿಗ ಹಾಗೂ ಪತ್ನಿಯ ನಡುವಿನ ಜಗಳಕ್ಕೆ 12 ವರ್ಷದ ಮಗ ಸಾಕ್ಷಿಯಾಗಿದ್ದು, ತಂದೆಯ ನಡೆ ಕಂಡು ಗಾಬರಿಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಪತಿಯ ಹಲ್ಲೆಗೆ ಕಾಂಬ್ಳಿ ಪತ್ನಿ ಆಂಡ್ರಿಯಾ ಅವರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಬಳಿಕ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಬಾಂದ್ರಾ ಪೊಲೀಸರು ತಿಳಿಸಿದ್ದಾರೆ. ಬಾಂದ್ರಾ ಪೊಲೀಸರ ಪ್ರಕಾರ, ವಿನೋದ್ ಕಾಂಬ್ಳಿ ವಿರುದ್ಧ ಐಪಿಸಿ ಸೆಕ್ಷನ್ 324 ಮತ್ತು 504 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ, ವಿನೋದ್ ಕಾಂಬ್ಳಿ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ.