Special News | ರಾಜ್ಯದಲ್ಲೇ ಮೊದಲ ಬಹುನಿರೀಕ್ಷಿತ ‘ ಕೊತ್ತಲಿಗೆ ‘ ಕ್ರಿಕೆಟ್ ಮ್ಯಾಚ್, ಏನೀ ‘ಕೊತ್ತಲಿಗೆ ‘, ಏನಿದರ ವಿಶೇಷ ಗೊತ್ತೇ ?

ಆಧುನಿಕ ಯುಗದಲ್ಲಿ ಪ್ರಾಚೀನ ಸಂಸ್ಕೃತಿ, ಪದ್ಧತಿ ಎಲ್ಲೋ ಅವನತಿಯತ್ತ ಸಾಗುತ್ತಿದೆ ಎನ್ನುವಾಗಲೇ ಕೆಲವೆಡೆ ಹಿಂದಿನ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಆಟ, ಕೋಲ, ಕೋಳಿ ಅಂಕ, ಕಂಬಳ ಗೊಬ್ಬು ಹೀಗೆ ಹತ್ತು ಹಲವು ಪೂರ್ವಜರು ಪಾಲಿಸಿ, ಉಳಿಸಿಕೊಂಡು ಬಂದಿದ್ದವುಗಳು ಈಗ ಮತ್ತೆ ವಿಭಿನ್ನವಾಗಿ ಎದ್ದು ಬರುತ್ತಿವೆ. ಇಂತಹುದೇ ಒಂದು ಪ್ರಯತ್ನವಾಗಿ ತುಳುನಾಡಿನ ವಿಶಿಷ್ಟ ಕ್ರಿಕೆಟ್ ಮ್ಯಾಚ್ ಒಂದು ಕೂಡಾ ಹಿಂದಿನ ಕಾಲದ ನಿಯಮ ಅನುಸರಿಸಿ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿದೆ.

ಪ್ರಸಕ್ತ ಕಾಲಘಟ್ಟದಲ್ಲಿ ಕ್ರಿಕೆಟ್ ಆಟವು ಹಲವು ರೀತಿಯ ವಿಭಿನ್ನತೆ ಕಂಡಿದ್ದು, ಹಿಂದಿನ ಕಾಲದ ಕೊತ್ತಲಿಗೆ ಬ್ಯಾಟ್ ಕಾಣೆಯಾಗಿ ಅದರ ಬದಲಿಗೆ ಮಾಡರ್ನ್ ಬ್ಯಾಟ್ ಗಳು ಬಂದಿದೆ. ಆದರೆ ಇಲ್ಲೊಂದು ಕಡೆಯಲ್ಲಿ ಕೊತ್ತಲಿಗೆ ಕ್ರಿಕೆಟ್ ಮ್ಯಾಚ್ ನಡೆಯುವ ಸುದ್ದಿ ಹಬ್ಬಿದ್ದು, ರಾಜ್ಯದಲ್ಲೇ ಭಾರೀ ಬೇಡಿಕೆಯ ಜೊತೆಗೆ ಯುವಕರ ಕಾರ್ಯಕ್ಕೆ ಪ್ರಶಂಸೆಯೂ ವ್ಯಕ್ತವಾಗಿದೆ.

ಏನೀ ಕೊತ್ತಲಿಗೆ ?
ಬಾಲ್ಯದ ದಿನಗಳಲ್ಲಿ ಕ್ರಿಕೆಟ್ ಆಡಲು ಬ್ಯಾಟು ಬಾಲುಗಳು ದೊರೆಯುತ್ತಿರಲಿಲ್ಲ. ಆದರೂ ನಮ್ಮ ಹುಡುಗರ ಆಡುವ ಆಸೆ ಮತ್ತು ಉತ್ಸಾಹ ಕುಂದುತ್ತಿರಲಿಲ್ಲ. ಈಗ ಸಿಗುವ ಬ್ಯಾಟ್ ಗಳ ಬದಲಾಗಿ ಆ ದಿನಗಳಲ್ಲಿ, ತೆಂಗಿನ ಗರಿಗಳ ದಂಡನ್ನು  ಸವಾರಿ ಮಾಡಿ ಬ್ಯಾಟ್ ಥರ ಮಾಡಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ತುಂಡು ಬಟ್ಟೆಗಳ ಉಂಡೆಯೇ ಬಾಲ್ ಆಗುತ್ತಿತ್ತು. ಬೇಲಿಯ ಅಂಚೇ ಬೌಂಡರಿ ಲೈನ್ ಆಗುತ್ತಿತ್ತು. ಒಂದು ಸಣ್ಣ ಏಟು ಕೊಟ್ಟರೆ ಭರ್ಜರಿ ಸಿಕ್ಸ್ ದೊರೆಯುತ್ತಿತ್ತು. ವಿಶ್ವಕಪ್ ಗೆದ್ದಾಗ ಉಂಟಾಗುವ ಸಂಭ್ರಮ ನಮ್ಮದಾಗುತ್ತಿತ್ತು.

ಅದು ನಾವೆಲ್ಲ ಚಿಕ್ಕವರಿದ್ದಾಗ ಹಳ್ಳಿಯಲ್ಲಿ ಕ್ರಿಕೆಟ್ ಆಡಿದ ನೆನಪುಗಳು. ಅಂತಹ ದಿನಗಳನ್ನು ನೆನಪಿಸಲು ಇದೀಗ ಬಂದಿದೆ ‘ ಕೊತ್ತಲಿಗೆ ‘ ಮ್ಯಾಚ್ !

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲೇ ಈ ಕೊತ್ತಲಿಗೆ ಮ್ಯಾಚ್ ನಡೆಯಲಿದ್ದು, ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್(ರಿ.) ಬೆಳ್ತಂಗಡಿ ತಾಲೂಕು ಆಶ್ರಯದಲ್ಲಿ ಆಯೋಜಿಸಲಾಗಿದ್ದು, ಆಕರ್ಷಕ ನಗದು ಸಹಿತ ಟ್ರೋಫಿ ಬಹುಮಾನವಿಟ್ಟು ಆಟ ಆಡಿಸಲಾಗಿದೆ.

ಬಾಲ್ಯದಲ್ಲಿ ಶಾಲಾ ಮೈದಾನದಲ್ಲಿ, ಮನೆಯಂಗಳದಲ್ಲಿ ಕೊತ್ತಲಿಗೆ ಹಿಡಿದು ಆಡುತ್ತಿದ್ದ ಆಟವನ್ನು ಮತ್ತೊಮ್ಮೆ ಸ್ಪರ್ಧೆಯ ರೂಪದಲ್ಲಿ ಆಡಲು ಯುವಕರ ಪಡೆಯು ತಯಾರಾಗಿದ್ದು, ಈಗಾಗಲೇ ಹಲವು ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಇದೇ ಬರುವ ಫೆಬ್ರವರಿ 12 ರಂದು ಇಲ್ಲಿನ ಜೂನಿಯರ್ ಕ್ರೀಡಾಂಗಣ ಮ್ಯಾಚ್ ಏರ್ಪಡಿಸಲಾಗಿದ್ದು, ಈ ಕೊತ್ತಲಿಗೆ ಆಟಕ್ಕೆ ತೀರಾ ಬೇಡಿಕೆ ಜೊತೆಗೆ ಅತೀ ಹೆಚ್ಚು ಪ್ರಶಂಸೆ, ನೆರವು ಅರಸಿ ಬಂದ ಕಾರಣ ರಾಜ್ಯ ಮಟ್ಟದ ಮ್ಯಾಚ್ ಏರ್ಪಡಿಸಲು ಬೇಡಿಕೆ ವ್ಯಕ್ತವಾಗಿದೆ. ಈ ಬಗ್ಗೆ ಸಂಘಟಕರು, ಸದಸ್ಯರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಪ್ರಥಮ ಸುತ್ತಿನ ಪಂದ್ಯ ಯಶಸ್ವಿಯಾದಲ್ಲಿ ಮುಂದೆ ರಾಜ್ಯ ಮಟ್ಟದ ಪಂದ್ಯಕ್ಕೆ ಮೈದಾನ ಸಜ್ಜಾಗಲಿದೆ.

Leave A Reply

Your email address will not be published.