ಮೂರು ಮಕ್ಕಳ ತಂದೆ 17ವರ್ಷದ ಅಪ್ರಾಪ್ತೆಯೊಂದಿಗೆ ಮದುವೆ | ಕಾರಣ ವಿಚಿತ್ರ
ಯಾವುದೇ ಸಂಬಂಧವಾದರೂ ನಂಬಿಕೆ ಅನ್ನೋದು ಮಹತ್ತರ ಪಾತ್ರ ವಹಿಸುತ್ತದೆ. ಒಮ್ಮೆ ದಾಂಪತ್ಯ ಜೀವನದಲ್ಲಿ ಅನುಮಾನ ಎನ್ನುವ ಪೆಡಂಭೂತ ಆವರಿಸಿದರೆ ಸಂಬಂಧದಲ್ಲಿ ಬಿರುಕು ಮೂಡೋದರಲ್ಲಿ ಸಂಶಯವಿಲ್ಲ. ಇದೇ ರೀತಿ ಹುಬ್ಬಳ್ಳಿಯಲ್ಲಿ ಮಡದಿಯ ಮೇಲೆ ಸಂಶಯಗೊಂಡು ಪತಿಯೊಬ್ಬ ಅಪ್ರಾಪ್ತ ಬಾಲಕಿಯ ಕೊರಳಿಗೆ ತಾಳಿ ಕಟ್ಟಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ತನ್ನ ಮಡದಿಯ ಮೇಲೆ ಸಂಶಯಗೊಂಡು ಪತಿಯೊಬ್ಬ ಈಗಾಗಲೇ ಮದುವೆಯಾಗಿ ಪತ್ನಿ ಮೂರು ಮಕ್ಕಳಿದ್ದರೂ ಕೂಡ ಅಪ್ರಾಪ್ತ ಬಾಲಕಿಯ ಕೊರಳಿಗೆ ತಾಳಿ ಕಟ್ಟಿರುವ ವಿಸ್ಮಯಕಾರಿ ಪ್ರಕರಣ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಹನಮಂತ ಉಪ್ಪಾರ ಹಣದಾಸೆ ತೋರಿಸಿ 17 ವರ್ಷದ ಬಾಲಕಿಯನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಇಡಕಲ್ ಪಡೆಪ್ಪನ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ, ಹುಬ್ಬಳ್ಳಿಯ ಮಹದೇವ ನಗರ ನಿವಾಸಿಯಾಗಿರುವ ಹನಮಂತ ಉಪ್ಪಾರ ವಿರುದ್ಧ ಮೊದಲ ಪತ್ನಿ ನೇತ್ರಾತನ್ನ ಪತಿ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ವಿಚಾರ ತಿಳಿದು ಪೊಲೀಸ್ ಠಾಣೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹಣದಾಸೆ ತೋರಿಸಿ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿದ ಭೂಪನ ವಿರುದ್ಧ ಎರಡು ದೂರು ದಾಖಲಾಗಿವೆ ಎಂದು ತಿಳಿದುಬಂದಿದೆ. ಹನಮಂತ ಉಪ್ಪಾರ ಮೊದಲ ಪತ್ನಿ ಇದ್ದರೂ ಕೂಡ 17 ವರ್ಷದ ಬಾಲಕಿಗೆ ತಾಳಿ ಕಟ್ಟಿದ್ದರಿಂದ ಮೊದಲ ಪತ್ನಿ ಕೋಪಗೊಂಡು ಮಹಿಳಾ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ.
ಹನಮಂತ ಹುಬ್ಬಳ್ಳಿಯಲ್ಲಿ ಸಣ್ಣ ಪುಟ್ಟ ಬಡ್ಡಿ ವ್ಯವಹಾರ ಮಾಡಿಕೊಂಡು ಸ್ವಲ್ಪ ಹಣ ಮಾಡಿಕೊಂಡಿದ್ದಾನೆ. ಹನುಮಂತ ಉಪ್ಪಾರ ಹಾಗೂ ನೇತ್ರಾ ಕಳೆದ 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಮೂರು ಮಕ್ಕಳಿದ್ದಾರೆ. ಆದರೆ ,ಈ ನಡುವೆ ಹನಮಂತ ಉಪ್ಪಾರ ನೇತ್ರಾ ಮೇಲೆ ಸಂಶಯಗೊಂಡು ವಿನಾ ಕಾರಣ ಜಗಳ.ಮಾಡುತ್ತಿದ್ದ ಎನ್ನಲಾಗಿದ್ದು, ಹೀಗಾಗಿ, ಗಂಡ ಹೆಂಡತಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಕೆಲ ಸಮಯದಿಂದ ಇಬ್ಬರು ಬೇರೆ ಬೇರೆಯಾಗಿ ಜೀವಿಸುತ್ತಿದ್ದರು ಎನ್ನಲಾಗಿದೆ.
ಅನುಮಾನ ಎಂಬ ಭೂತ ಆವರಿಸಿ ಹೆಂಡತಿಯಿಂದ ದೂರ ಉಳಿದು ಮಕ್ಕಳನ್ನ ಮಾತ್ರ ಹನಮಂತ ತನ್ನ ಬಳಿ ಇರಿಸಿಕೊಂಡಿದ್ದ ಎನ್ನಲಾಗಿದೆ. ಈ ನಡುವೆ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆದರೂ ಕೂಡ ಹನುಮಂತ ಇದಕ್ಕೆ ಸಮ್ಮತಿ ಸೂಚಿಸಿಲ್ಲ ಎನ್ನಲಾಗಿದ್ದು, ಈ ಕಾರಣಕ್ಕೆ ಹನಮಂತ ಮತ್ತೊಂದು ಮದುವೆಯಾಗಿದ್ದಾನೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ, ಹಣದಾಸೆ ತೋರಿಸಿ ಅಪ್ರಾಪ್ತ ಬಾಲಕಿಯನ್ನ ಮದುವೆಯಾಗಿದ್ದಾನೆ. ಇನ್ನು 17 ವರ್ಷದ ಅಪ್ರಾಪ್ತ ಬಾಲಕಿಯನ್ನೂ ಮದುವೆಯಾದ ಹಿನ್ನೆಲೆ ಶಿಶು ಅಭಿವೃದ್ಧಿ ಅಧಿಕಾರಿಗಳು ಹುಬ್ಬಳ್ಳಿಯ ಅಶೋಕ ನಗರದಲ್ಲಿ ಹನಮಂತ ಉಪ್ಪಾರ ವಿರುದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ತನ್ನ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿ ಹನುಮಂತ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದ್ದರು ಕೂಡ ಎಷ್ಟೋ ಕಡೆ ತೆರೆಮರೆಯಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದು, ಆರೋಪಿಯ ಎರಡನೇ ಮದುವೆಗೆ ಅಲ್ಲಿನ ಕೆಲ ಅಧಿಕಾರಿಗಳು ಕೈ ಜೋಡಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿವೆ. ಏನೇ ಆದರೂ ಪೂರ್ಣ ತನಿಖೆಯ ಬಳಿಕಷ್ಟೇ ನಿಜಾಂಶ ಹೊರ ಬರಬೇಕಾಗಿದೆ.