ಸಂಸಾರ ಸಮೇತ ವಿಮಾನವೇರಲು ಬಂದರು ಈ ದಂಪತಿಗಳು! ಫ್ಲೈಟ್‌ನಲ್ಲಿ ಮಕ್ಕಳಿಗೂ ಟಿಕೆಟ್ ಇದ್ಯಪ್ಪಾ ಅಂದ್ರೆ ಮಗುವನ್ನು ಏರ್‌ಪೋರ್ಟ್‌ನಲ್ಲೇ ಬಿಟ್ಟು ವಿಮಾನದತ್ತ ಓಡಿಬಿಟ್ರು!!

Share the Article

ಹೆತ್ತವರಿಗೆ ಹೆಗ್ಗಣ ಮುದ್ದು ಎಂದು ಹೇಳಿದರೂ ಕೂಡ ಕೆಲವೊಮ್ಮೆ ಮಕ್ಕಳು ಮನೆಯಲ್ಲಿ ತರಲೆ, ಕಟೀಲೆ ಮಾಡಿದಾಗ, ಸಣ್ಣಪುಟ್ಟ ವಿಷಯಕ್ಕೆ ಹಠ ಮಾಡುತ್ತಾ ಅಳುತ್ತಾ ರಗಳೆಮಾಡಿದಾಗ ಎಂತಾ ಅಪ್ಪ ಅಮ್ಮನಿಗೂ ಸಿಟ್ಟುಬರುತ್ತದೆ. ಆಗೆಲ್ಲಾ ಪೋಷಕರು ಹೀಗೆಲ್ಲಾ ಮಾಡಿದ್ರೆ ನಿನ್ನನ್ನು ಎಲ್ಲಾದ್ರೂ ಬಿಟ್ಟು ಬರ್ತೇನೆ, ನಿನ್ನನ್ನು ಒಂಟಿಯಾಗಿ ಬಿಟ್ಟೋಗ್ತೇನೆ ಎಂದು ಬೆದರಿಸುತ್ತಾರೆ. ಆದ್ರೆ ಇದು ಬರಿ ಗದರಿಸುವುದಕ್ಕೆ ಮಾತ್ರ ಹೇಳೋದು. ಹೀಗೆ ಮಾಡಲು ನಿಜವಾಗಲೂ ಸಾಧ್ಯವುಂಟಾ? ಆದರೆ ಇಲ್ಲೊಂದೆಡೆ ಪೋಷಕರು ನಿಜವಾಗಿಯೂ ಹೀಗೆಯೇ ಮಾಡಿದ್ದಾರೆ. ತಮ್ಮ ಮಗುವನ್ನು ಏರ್ಪೋರ್ಟ್ ನಲ್ಲೇ ಬಿಟ್ಪ ಆ ದಂಪತಿಗಳು ತಿರುಗಿನೋಡದಂತೆ ಓಡಿಹೋಗಿದ್ದಾರೆ. ಅರೇ ಇದು ನಿಜನಾ ಅಂತ ನಿಮಗೆ ಕಸಿವಿಸಿಯಾದ್ರೆ ಆಶ್ಚರ್ಯವೇನಿಲ್ಲ ಬಿಡಿ.

ಹೌದು, ಬೆಲ್ಜಿಯಂನ ಏರ್ಪೋರ್ಟ್ ನಲ್ಲಿ ಈ ರೀತಿ ಘಟನೆಯೊಂದು ನಡೆದಿದ್ದು, ದಂಪತಿಗಳ ಈ ವರ್ತನೆ ಕಂಡು ಅಲ್ಲಿದ್ದವರೆಲ್ಲರೂ ಒಂದು ರೀತಿ ಶಾಕ್ ಆಗಿಬಿಟ್ಟಿದ್ದಾರೆ. ಅಷ್ಟಕ್ಕೂ ನಡೆದದ್ದೇನು ಗೊತ್ತಾ? ಬೆಲ್ಜಿಯಂ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಈ ಗಂಡ-ಹೆಂಡತಿಯರು, ತಮ್ಮ ಮಗುವನ್ನು ತಮ್ಮೊಂದಿಗೆ ಬ್ರಸೆಲ್ಸ್‌ಗೆ ಕರೆದೊಯ್ಯುವ ಯೋಜನೆಯನ್ನು ಹೊಂದಿದ್ದರು. ಈ ಸಮಯದಲ್ಲಿ ಅವರು ಏರ್ಪೋರ್ಟಿಗೆ ಬರುವುದು ತಡವಾಗಿದೆ. ನಂತರ ಟರ್ಮಿನಲ್ 1 ಕೌಂಟರ್‌ಗೆ ಅವರು ಬಂದ ನಂತರ, ಅಲ್ಲಿದ್ದ ಸಿಬ್ಬಂದಿಗಳು, ನೀವು ತಡವಾಗಿ ಬಂದ ಕಾರಣ ನಿಮ್ಮ ಜೂನಿಯರ್‌ಗೂ ಹೆಚ್ಚುವರಿ ಟಿಕೆಟ್ ಖರೀದಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಆದರೆ ತಕ್ಷಣ ಹಣವನ್ನು ಪಾವತಿಸಿ ಟಿಕೆಟ್ ಪಡೆದುಕೊಳ್ಳುವ ಬದಲಿಗೆ ಅವರು, ತಮ್ಮ ಮಗುವನ್ನು ಕ್ಯಾರಿಯರ್‌ನಲ್ಲೇ ಬಿಟ್ಟು ಓಡಿ ಹೋಗಿದ್ದಾರೆ.

ಇದರಿಂದ ತಬ್ಬಿಬ್ಬಾದ ವಿಮಾನ ನಿಲ್ದಾಣದ ಸಿಬ್ಬಂದಿಗಳು ಕೂಡಲೇ ಹೋಗಿ ದಂಪತಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಆ ಪೋಷಕರು ಭದ್ರತಾ ತಪಾಸಣಾ ವಲಯವನ್ನು ಪ್ರವೇಶಿಸಿದ್ದರು. ಆದರೂ ಕೂಡ ಸ್ವಲ್ಪ ಸಮಯದ ನಂತರ ತಮ್ಮ ಮಗುವನ್ನು ಪಡೆಯಲು ಅವರಿಗೆ ಆದೇಶಿಸಲಾಯಿತು. ಘಟನೆಯ ಬಳಿಕ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಂಪತಿಯ ವರ್ತನೆಯಿಂದ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸಹ ಆಘಾತಕ್ಕೊಳಗಾಗಿದ್ದಾರೆ. ನಾವು ನೋಡುತ್ತಿರುವುದು ನಿಜ ಎಂಬುದನ್ನು ತಿಳಿದುಕೊಳ್ಳಲು ನಮಗೆ ತುಂಬಾ ಸಮಯ ಹಿಡಿಯಿತು. ಪೋಷಕರ ಹೀಗೆ ಸಹ ಮಾಡುತ್ತಾರೆಂದು ನಮಗೆ ನಂಬಲು ಸಾಧ್ಯವಾಗ್ತಿಲ್ಲ ಎಂದಿದ್ದಾರೆ.

ಇಸ್ರೇಲ್ ಏರ್‌ಪೋರ್ಟ್ಸ್ ಅಥಾರಿಟಿ ವರದಿ ಪ್ರಕಾರ, ಟೆಲ್ ಅವೀವ್‌ನ ಬೆನ್-ಗುರಿಯನ್ ವಿಮಾನ ನಿಲ್ದಾಣದಲ್ಲಿ ರೈನೈರ್ ವಿಮಾನವು ಟೇಕ್ ಆಫ್ ಆಗಲು ಕೆಲವೇ ನಿಮಿಷಗಳ ಮೊದಲು ಈ ದಂಪತಿಗಳು ಅಲ್ಲಿಗೆ ಬಂದಿದ್ದರು. ಮಗುವಿಗೂ ಟಿಕೆಟ್ ತಗೊಳ್ಳಿ ಎಂದಾಗ ಚೆಕ್-ಇನ್ ಕೌಂಟರ್‌ನಲ್ಲಿ ತಮ್ಮ ಮಗುವನ್ನು ಬಿಟ್ಟು ತೆರಳಿದರು. ಹೆಚ್ಚುವರಿ ಟಿಕೆಟ್ ಖರೀದಿಸಲು ನಿರಾಕರಿಸಿದ ನಂತರ ಪೋಷಕರು ತಮ್ಮ ಮಗುವನ್ನು ಕೌಂಟರ್‌ನಲ್ಲಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿಮಾನಯಾನ ಸಂಸ್ಥೆಯ ಪ್ರತಿನಿಧಿಯೊಬ್ಬರು ಮಾತನಾಡಿ, ‘ಟೆಲ್ ಅವಿವ್‌ನಿಂದ ಬ್ರಸೆಲ್ಸ್‌ಗೆ (31 ಜನವರಿ) ಪ್ರಯಾಣಿಸುತ್ತಿದ್ದ ಈ ಪ್ರಯಾಣಿಕರು ತಮ್ಮ ಶಿಶುವಿಗೆ ಬುಕ್ಕಿಂಗ್ ಮಾಡದೆ ಚೆಕ್-ಇನ್‌ನಲ್ಲಿ ಹಾಜರುಪಡಿಸಿದರು. ನಂತರ ಅವರು ಚೆಕ್-ಇನ್‌ನಲ್ಲಿ ಮಗುವನ್ನು ಬಿಟ್ಟು ತೆರಳಿದರು. ಚೆಕ್- ಬೆನ್ ಗುರಿಯನ್ ವಿಮಾನ ನಿಲ್ದಾಣದ ಏಜೆಂಟ್ ಏರ್‌ಪೋರ್ಟ್ ಸೆಕ್ಯುರಿಟಿಯನ್ನು ಸಂಪರ್ಕಿಸಿದರು. ನಂತರದಲ್ಲಿ ಅವರಿಗೆ ಮಗುವನ್ನು ಒಪ್ಪಿಸಿದೆವು. ಬಳಿಕ ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.

ದಂಪತಿಗಳು, ಇತರ ಸಾರಿಗೆಗಳಲ್ಲಿ ಇರುವಂತೆ ಮಗುವಿಗೆ ಸೀಟು ಉಚಿತ ಎಂದು ಯಾವುದೇ ಹೆಚ್ಚುವರಿ ಟಿಕೆಟ್ ಪಡೆದುಕೊಂಡಿರಲ್ಲಿಲ್ಲ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಪ್ರಯಾಣದ ನಿಯಮಗಳು ಹೋಲುತ್ತವೆ. ಏರ್ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ, ವಯಸ್ಕರಿಗಿರುವ ಮೂಲ ಶುಲ್ಕದ 10 ಪ್ರತಿಶತದಷ್ಟು ಶುಲ್ಕವನ್ನು ಶಿಶುವಿಗೆ ವಿಧಿಸಬಹುದಾಗಿದೆ. ಅದೇನೆ ಇರ್ಲಿ ಮಗುವಿಗೆ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದಕ್ಕೇನೆ ಪೋಷಕರು ಏರ್‌ಪೋರ್ಟ್‌ನಲ್ಲಿ ಮಗುವನ್ನು ಬಿಟ್ಟು ಹೋಗುವ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ವಿಪರ್ಯಾಸವೇ ಸರಿ.

Leave A Reply