Kannur Car Burn । ಗರ್ಭಿಣಿಯನ್ನು ಹೆರಿಗೆಗೆ ಆಸ್ಪತ್ರೆಗೆ ಸಾಗಿಸುವಾಗ ಕಾರಿಗೆ ಹಠಾತ್ ಬೆಂಕಿ, ಮುಂಬದಿಯಲ್ಲಿ ಕೂತಿದ್ದ ಗರ್ಭಿಣಿ ಮತ್ತು ಪತಿ ಸಜೀವ ದಹನ !

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರಿನಲ್ಲಿದ್ದ ಗರ್ಭಿಣಿ (pregnant woman) ಹಾಗೂ ಆಕೆಯ ಪತಿ ಇಬ್ಬರು ಸಜೀವ ದಹನವಾಗಿರುವ (burnt alive) ದಾರುಣ ಘಟನೆ ಗುರುವಾರ ನಡೆದಿದೆ. ಏಕಾಏಕಿ ಕಾರಿಗೆ ಬೆಂಕಿ ಹತ್ತಿ ಉರಿದಾಗ ಹೊರಬರಲಾಗದೆ ಗಂಡ, ಹೆಂಡತಿ ಮತ್ತು ಆಕೆಯ ಗರ್ಭದಲ್ಲಿದ್ದ ಮಗುವಿನ ಸಮೇತ ಮೂರು ಜೀವಗಳು ಬಲಿಯಾಗಿವೆ.

ಕೇರಳದ (Kerala) ಕಣ್ಣೂರಿನ (Kannur) ಜಿಲ್ಲಾಸ್ಪತ್ರೆ ಬಳಿ ದುರಂತ ಸಂಭವಿಸಿದೆ. ಕುಟ್ಟಿಯತ್ತೂರು ಕರಂಬುವಿನ ಪ್ರಜಿತ್ (32) ಮತ್ತು ಅವರ ಪತ್ನಿ ರೀಶಾ (26) ಎಂಬುವವರು ಮೃತ ದುರ್ದೈವಿಗಳು. ದಂಪತಿ ಕಾರಿನಲ್ಲಿ ಕುಟ್ಟಿಯತ್ತೂರಿನಿಂದ ಜಿಲ್ಲಾ ಆಸ್ಪತ್ರೆಗೆ ಪರೀಕ್ಷೆಗಾಗಿ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿ ಒಟ್ಟು ಆರು ಜನ ಪ್ರಯಾಣಿಸುತ್ತಿದ್ದರು. ಮೃತ ಪ್ರಜಿತ್ ಹಾಗೂ ರೀಶಾ ಮುಂದಿನ ಸೀಟಿನಲ್ಲಿದ್ದರು. ಒಂದು ಮಗು ಸೇರಿಂದತೆ ಉಳಿದ ಮೂವರು ಹಿಂಬದಿ ಸೀಟಿನಲ್ಲಿ ಕುಳಿತಿದ್ದರು. ಕಾರಿಗೆ ಬೆಂಕಿ ಹೊತ್ತಿಕೊಂಡಾಗ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಗು ಸೇರಿದಂತೆ ನಾಲ್ವರು ಕಾರಿನಿಂದ ಜಿಗಿದು ಪಾರಾಗಿದ್ದಾರೆ. ಆದರೆ ದಂಪತಿ ಹೊರ ಬರಲಾಗದೆ ಅಲ್ಲೇ ಒದ್ದಾಡಿ ಸುಟ್ಟು ಹೋಗಿದ್ದಾರೆ. ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂದು ಪೊಲೀಸರು ತಿಳಿಸಿದ್ದಾರೆ.

ಗರ್ಭಿಣಿ ರೀಶಾಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆಗ ಗಂಡ ಪ್ರಜಿತ್ ಹಾಗೂ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದರು. ಕಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರು ಚಲಾಯಿಸುತ್ತಿದ್ದ ಪ್ರಜಿತ್ ಹಿಂಬದಿ ಇದ್ದವರು ಕಾರಿನಿಂದ ಕೆಳಗಿಳಿಯಲು ನೆರವಾಗಿದ್ದಾರೆ. ಆದರೆ ಕಾರಿನ ಮುಂಭಾಗದ ಬಾಗಿಲು ತೆರೆಯಲು ಸಾಧ್ಯವಾಗದ ಕಾರಣ ದಂಪತಿ ಒಳಗೆ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ಕಾರಿನ ಮುಂಭಾಗದ ಬಾಗಿಲು ತೆರೆದು ದಂಪತಿಯನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಬೆಂಕಿಯ ಕೆನ್ನಾಲಗೆಯಿಂದ ಕಾಪಾಡುವಲ್ಲಿ ವಿಫಲರಾಗಿದ್ದಾರೆ.

ಕಾರಿನ ಮುಂಬಾಗಿಲು ಜಾಮ್ ಆಗಿದ್ದರಿಂದ ಒಳಗಿದ್ದ ಪ್ರಜಿತ್ ಹಾಗೂ ಹೊರಗಿದ್ದ ಜನರು ಪ್ರಯತ್ನ ಪಟ್ಟರೂ ಇಬ್ಬರಿಂದಲೂ ತೆಗೆಯಲು ಸಾಧ್ಯವಾಗಲಿಲ್ಲ. ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಬೆಂಬಲದೊಂದಿಗೆ ಜಾಮ್ ಆಗಿದ್ದ ಮುಂದಿನ ಬಾಗಿಲನ್ನು ಒಡೆದಿದ್ದಾರೆ. ಆದರೆ, ಅಷ್ಟರಲ್ಲಿ ಪ್ರಜಿತ್ ಮತ್ತು ರೀಶಾ ಸಜೀವ ದಹನವಾಗಿದ್ದರು ಎಂದು ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕಣ್ಣೂರು ನಗರ ಪೊಲೀಸ್ ಕಮಿಷನರ್ ಅಜಿತ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಾರು ಉರಿಯುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಳಗಿನಿಂದ ಕಿರುಚಾಟಗಳು ಕೇಳಿಬರುತ್ತಿವೆ. ಕೆಲವು ಸ್ಥಳೀಯ ಜನರು ಕಾರಿನ ಕಡೆಗೆ ಓಡುತ್ತಿರುವುದನ್ನು ಅಲ್ಲಿ ಕಾಣಬಹುದು. ಆದರೆ ಕಾರು ಸ್ಫೋಟಗೊಳ್ಳಬಹುದೆಂಬ ಭಯದಿಂದ ಯಾರು ಕಾರಿನ ಬಳಿ ಹೆಚ್ಚು ಸಮಯ ಇರದೆ ಹಿಂದೆ ಸರಿದಿದ್ದಾರೆ. ” ಘಟನೆಯ ಸಮಯದಲ್ಲಿ ನಾವು ಸಂಪೂರ್ಣವಾಗಿ ಅಸಹಾಯಕರಾಗಿದ್ದೆವು, ಕಾರಿನ ಮುಂಭಾಗ ತಕ್ಷಣವೇ ಬೆಂಕಿಗೆ ಆಹುತಿಯಾಯಿತು. ಕಾರಿನ ಪೆಟ್ರೋಲ್ ಟ್ಯಾಂಕ್​ ಯಾವಾಗ ಬೇಕಾದರೂ ಸ್ಫೋಟವಾಗಬಹುದು ಎಂಬ ಭಯ ಇದ್ದಿದ್ದರಿಂದ, ಯಾರೂ ಮುನ್ನುಗ್ಗಿ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Leave A Reply

Your email address will not be published.