ಉತ್ಸವಗಳಿಗೆ ಕೋಟಿಗಟ್ಟಲೆ ವ್ಯಯಿಸುತ್ತೀರಿ, ಮಕ್ಕಳಿಗೆ ಸಮವಸ್ತ್ರ ನೀಡಲಾಗುವುದಿಲ್ಲವೇ? ನಾಚಿಕೆಯಾಗಬೇಕು! ಕರ್ನಾಟಕ ಸರ್ಕಾರಕ್ಕೆ ಛೀಮಾರಿ ಹಾಕಿದ ಹೈಕೋರ್ಟ್!!

ಶಾಲೆಗಳು ಆರಂಭ ಅಂದಿನಿಂದ, ಅದು ತನ್ನ ಶೈಕ್ಷಣಿಕ ವರ್ಷದೊಂದಿಗೆ ಕೊನೆಗೊಳ್ಳುವ ತನಕವೂ ಕಾಡುವ ದೊಡ್ಡ ಸಮಸ್ಯೆ ಎಂದರೆ ಅದು ಸಮವಸ್ತ್ರದ್ದು. ಪ್ರತೀ ವರ್ಷವೂ ಈ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳ ಕೊರತೆ ರಾಜ್ಯದಲ್ಲಿ ಇದ್ದೇ ಇರುತ್ತದೆ. ಇದೀಗ ಸರ್ಕಾರಿ ಶಾಲೆಗಳಿಗೆ ನೀಡಲಾಗುವ ಸಮವಸ್ತ್ರದಲ್ಲಿ ಮಲತಾಯಿ ಧೋರಣೆ ನಡೆಸಲಾಗುತ್ತಿರುವ ಬಗ್ಗೆ ಕರ್ನಾಟಕ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಗರಂ ಆಗಿದೆ.

 

ಸರ್ಕಾರಿ ಮಕ್ಕಳಿಗೆ ಎರಡು ಜತೆ ಸಮವಸ್ತ್ರ, 1 ಜತೆ ಶೂ ಹಾಗೂ ಎರಡು ಜತೆ ಸಾಕ್ಸ್ ನೀಡುವಂತೆ ಹೈಕೋರ್ಟ್ 2018ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಸರ್ಕಾರ ಈ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ಆರೋಪಿ ಕೊಪ್ಪಳದ ಮಾ.ಮಂಜುನಾಥ್ ಎಂಬವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜಿಲ್ಲಾ ಉತ್ಸವ, ತಾಲೂಕು ಉತ್ಸವಗಳನ್ನು ನಡೆಸಲಾಗುತ್ತದೆ, ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ ನೀಡಲು ನಿಮ್ಮಿಂದ ಆಗುವುದಿಲ್ವೇ? ಎಂದು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಛೀಮಾರಿ ಹಾಕಿದೆ.

ಉತ್ಸವ ನಡೆಸಲು ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತದೆ. ಆದರೆ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ನೀಡುತ್ತಿಲ್ಲ. ರಾಜ್ಯ ಸರ್ಕಾರ, ಅಧಿಕಾರಿಗಳಿಗೆ ನಿಜಕ್ಕೂ ನಾಚಿಕೆಯಾಗಬೇಕು. ಅಧಿಕಾರಿಗಳಿಗೆ ಮರ್ಯಾದೆ, ಆತ್ಮಸಾಕ್ಷಿ ಇಲ್ಲ. ಅವರು ಸರ್ಕಾರಿ ಶಾಲಾ ಮಕ್ಕಳಿಗೆ ಮಾನವೀಯತೆ ತೋರುತ್ತಿಲ್ಲ. ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗೆ ಹೋಗುವುದಿಲ್ಲ. ಖಾಸಗಿ ಶಾಲೆಗೆ ಕಾರಿನಲ್ಲಿ ಹೋಗಿ ಬರುತ್ತಾರೆ. ಮಕ್ಕಳ ವಿಚಾರದಲ್ಲಿ ಇಂತಹ ಮಲತಾಯಿ ಧೋರಣೆಯನ್ನು ಸಹಿಸುವುದಿಲ್ಲ. ಸರ್ಕಾರ ಈಗಲಾದರೂ ಕಣ್ಣು ತೆರೆದು ಎರಡು ಜತೆ ಸಮವಸ್ತ್ರ ಒದಗಿಸಬೇಕು ಎಂದು ಸೂಚಿಸಿತು.

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ನೀಡಲಾಗುತ್ತಿದೆ ಎಂದು ಆರೋಪಿಸಿ ಮಂಜುನಾಥ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾ. ಬಿ.ವೀರಪ್ಪ, ನ್ಯಾ. ಕೆ.ಎಸ್.ಹೇಮಲೇಖಾ ಅವರಿದ್ದ ದ್ವೀಸದಸ್ಯ ಪೀಠ, ಎರಡು ಸಮವಸ್ತ್ರ ನೀಡದೆ ಕೇವಲ ಒಂದು ಜತೆ ಸಮವಸ್ತ್ರ ನೀಡುತ್ತಿರುವ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಎರಡು ವಾರದಲ್ಲಿ ಆದೇಶ ಪಾಲಿಸುವಂತೆ ಸೂಚನೆ ನೀಡಿದೆ.

Leave A Reply

Your email address will not be published.