ಮುರುಘಾ ಶರಣರ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ! ಜೈಲಿನಿಂದ ಹೊರಬರಲು ಶ್ರೀಗಳು ಮಾಡಿದ ಯತ್ನವೀಗ ಫೇಲ್!

ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷರಾಗಿದ್ದ ಶಿವಮೂರ್ತಿ ಮುರುಘಾ ಶರಣರು ಫೋಕ್ಸೋ ಪ್ರಕರಣದಡಿ ಕಳೆದ ಸೆಪ್ಟೆಂಬರ್ ನಿಂದಲೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಕೇಸ್ ವಿಚಾರವಾಗಿ ಶರಣರ ವಿರುದ್ಧ ದಾಖಲಾದ ಒಂದನೇ ಪೋಕ್ಸೋ ಪ್ರಕರಣ ಸಂಬಂಧ ಶರಣರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಇದೀಗ 2ನೇ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಒಂದನೇ ಪೋಕ್ಸೋ ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಚಾರ್ಜ್​ಶೀಟ್ ಸಲ್ಲಿಸಿದ ಬಳಿಕ ಜಾಮೀನು ಕೋರಿ ನ್ಯಾಯಾಲಯಕ್ಕೆ ಮುರುಘಾಶ್ರೀ ಅರ್ಜಿ ಸಲ್ಲಿಸಿದ್ದರು. ಆದರೀಗ ಈ ಅರ್ಜಿಯನ್ನು ಕೋರ್ಟ್ ವಜಾಗೊಳಿಸುವ ಮೂಲಕ ಮುರುಘಾ ಶ್ರೀಗೆ ಮತ್ತೆ ಜೈಲೇ ಗತಿಯಾಗಿದೆ. ಆದರೂ ಮತ್ತೆ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣದ ಕುರಿತಂತೆ ಷಡ್ಯಂತ್ರ ಮಾಡಲಾಗಿದೆ ಎಂದು ಎಫ್‌ಐಆರ್ ದಾಖಲಿಸಲಾಗಿದೆ. ಈ ಎಫ್‌ಐಆರ್‌ನಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲು ಸಂತ್ರಸ್ತರಿಗೆ ಪ್ರಚೋದನೆ ನೀಡಿದ ಆರೋಪ ಮಾಡಲಾಗಿತ್ತು. ಈ ಪ್ರಕರಣದ ಅಡಿಯಲ್ಲಿ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ಬಸವರಾಜನ್‌ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ, ಈಗ ಮುರುಘಾ ಶರಣರ ವಿರುದ್ಧ ಷಡ್ಯಂತ್ರ ಪ್ರಕರಣದ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

ಇನ್ನು, ಮುರುಘಾಶ್ರೀ ವಿರುದ್ಧ ಷಡ್ಯಂತರ ಆರೋಪ ಸಂಬಂಧ ಪೊಲೀಸರು ಸಮರ್ಪಕ ತನಿಖೆ ನಡೆಸದೇ ಅಸಹಾಯಕರಾಗಿದ್ದಾರೆ. ಹೀಗಾಗಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಿಂದ ತನಿಖೆ ವರ್ಗಾಯಿಸಲು ಕೋರಿ ಬಸವಪ್ರಭು ಸ್ವಾಮೀಜಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನಿನ್ನೆ (ಜ.30) ಹೈಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ರಾಜ್ಯಸರ್ಕಾರದ ಪ್ರತಿಕ್ರಿಯೆ ಕೇಳಿ ಫೆಬ್ರವರಿ 6ಕ್ಕೆ ವಿಚಾರಣೆಯನ್ನು ಮುಂದೂಡಿದೆ. ತನಿಖೆಯನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯಿಂದ ವರ್ಗಾಯಿಸಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯಿಂದ ತನಿಖೆ ನಡೆಸುವಂತೆ ಬಸವಪ್ರಭು ಸ್ವಾಮೀಜಿ ರಿಟ್ ಅರ್ಜಿಯಲ್ಲಿ ಕೋರಿದ್ದರು.

Leave A Reply

Your email address will not be published.