Ambassador car price: ಈ ಅಂಬಾಸಿಡರ್ ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗೋದು ಫಿಕ್ಸ್!!!
ಅಂಬಾಸಿಡರ್ ಭಾರತದಲ್ಲೆ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಕಾರಾಗಿದೆ. ಬ್ರಿಟಿಷ್ ಮೂಲದ ಹೊರತಾಗಿ ಅಂಬಾಸಿಡರ್ ಅನ್ನು ಭಾರತೀಯರ ವಿಶ್ವಾಸಾರ್ಹ ಕಾರೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಇದನ್ನು ಪ್ರೀತಿಯಿಂದ “ಭಾರತೀಯ ರಸ್ತೆಗಳ ರಾಜ”ನೆಂದು ಕೂಡ ಕರೆಯಲಾಗುತ್ತದೆ.
ಹಿಂದೂಸ್ತಾನ್ ಮೋಟಾರ್ಸ್ 1957 ರಲ್ಲಿ ಅಂಬಾಸಿಡರ್ ಕಾರನ್ನು ಬಿಡುಗಡೆ ಮಾಡಿತು. ಇದು ಬ್ರಿಟಿಷ್ ಕಾರನ್ನು ಆಧರಿಸಿದೆ. ಈ ಕಾರು 80 ರ ದಶಕದವರೆಗೂ ಜನರ ಹೃದಯವನ್ನು ಆಳಿದೆ. 1990ರ ತನಕ ಅಂಬಾಸಿಡರ್ ಭಾರತದ ನಂಬರ್ 1 ಕಾರು ಎನಿಸಿಕೊಂಡಿತ್ತು. ಆದರೆ ಆ ಬಳಿಕ ಮಾರುತಿ 800 ಆಗಮನದೊಂದಿಗೆ ಅಂಬಾಸಿಡರ್ ಬದಿಗೆ ಸರಿಯಿತು. ಸದ್ಯ 2014 ರವರೆಗೆ ಉತ್ಪಾದನೆಯಲ್ಲಿದ್ದ ಕಾರಿಗೆ ಹೆಚ್ಚಿನ ಬೇಡಿಕೆಗಳಿರಲಿಲ್ಲ. ಹೀಗಾಗಿ ಹಿಂದೂಸ್ಥಾನ್ ಮೋಟಾರ್ಸ್ ಹೊಸ ಕಾರುಗಳ ಉತ್ಫಾದನೆಯನ್ನು ಸ್ಥಗಿತಗೊಳಿಸಿತ್ತು. ಇದಾಗ್ಯೂ ಇಂದಿಗೂ ಅಂಬಾಸಿಡರ್ ಕಾರುಗಳು ಭಾರತೀಯ ರಸ್ತೆಗಳಲ್ಲಿ ಓಡಾಡುತ್ತಿದೆ ಎಂಬುದೇ ವಿಶೇಷ.
ಆದರೆ ಇದೀಗ ಕಾರಿನ ಬೆಲೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ ಈ ಚಿತ್ರವನ್ನು ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ 50 ವರ್ಷಗಳ ಹಿಂದಿನ ಜನವರಿ 25, 1972ರ ಸುದ್ದಿಯನ್ನು ನೀಡಲಾಗಿದೆ . ‘ಕಾರುಗಳ ಬೆಲೆ ಏರಿಕೆಯಾಗಿದೆ’ ಎಂಬುದು ಸುದ್ದಿಯ ಮುಖ್ಯಾಂಶ. ಈ ಸುದ್ದಿ ಓದಿದಾಗ ಗೊತ್ತಾಗಿದ್ದು, 1972ರಲ್ಲಿ ಅಂಬಾಸಿಡರ್ ಬೆಲೆ 127 ರೂಪಾಯಿ ಏರಿಕೆಯಾಗಿ 16,946 ರೂಪಾಯಿ ಆಗಿತ್ತು ಎಂದು. ಈ ಬೆಲೆ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಸ್ವತಃ ಆನಂದ್ ಮಹೀಂದ್ರಾ ಕೂಡ ಇದೇ ಮಾತನ್ನು ಹೇಳಿದ್ದಾರೆ.
ಆನಂದ್ ಮಹೀಂದ್ರಾ ಟ್ವಿಟ್ ಮಾಡಿದ್ದು, “ಇದು ನನ್ನನ್ನು ‘ಸಂಡೇ ಮೆಮೊರೀಸ್’ನಲ್ಲಿ ಮುಳುಗಿಸಿದೆ. ನಾನು ಆಗ ಜೆಜೆ ಕಾಲೇಜಿನಲ್ಲಿದ್ದೆ. ಬಸ್‌ನಲ್ಲಿ ಹೋಗುತ್ತಿದ್ದೆ, ಆದರೆ ನನ್ನ ತಾಯಿ ಕೆಲವೊಮ್ಮೆ ತನ್ನ ನೀಲಿ ಫಿಯೆಟ್ ಅನ್ನು ಓಡಿಸಲು ನನಗೆ ಅವಕಾಶ ನೀಡುತ್ತಿದ್ದಳು. ಆದರೆ ಆ ಸಮಯದಲ್ಲಿ ಅಷ್ಟು ವೆಚ್ಚವಾಗುತ್ತಿತ್ತು ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ.
ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸೋಶಿಯಲ್ ಮೀಡಿಯಾ ಬಳಕೆದಾರರು, “1972 ರಲ್ಲಿ ನನ್ನ ತಂದೆ 18000 ರೂ.ಗೆ ಅಂಬಾಸಿಡರ್ ಕಾರನ್ನು ಖರೀದಿಸಿದರು” ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, “ಇದು ದುಬಾರಿಯಾಗಿದೆ’ ಎಂದು ಹೇಳಿದರು. ಹೀಗೆ ಹಲವಾರು ಜನರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಇದೆಲ್ಲದರ ಹೊರತು ಇದೀಗ ಮತ್ತೊಮ್ಮೆ ರಸ್ತೆ ರಾಜನಾಗಿ ಎಲೆಕ್ಟ್ರಿಕ್ ಮಾದರಿಯಲ್ಲಿ ಹೊಸ ಅಂಬಾಸಿಡರ್ ಅನ್ನು ಪರಿಚಯಿಸಲು ಹಿಂದೂಸ್ಥಾನ್ ಮೋಟಾರ್ಸ್ ಬಯಸಿದೆ. ಸದ್ಯ ಹೊಸ ಅಂಬಾಸಿಡರ್ ಕಾರು ಉತ್ಪಾದನೆಗೆ ಯೂರೋಪಿಯನ್ ಕಂಪನಿಯೊಂದಿಗೆ ಒಟ್ಟು 600 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ಮಾಹಿತಿ ಇದೆ . ಅಷ್ಟೇ ಅಲ್ಲದೆ ಹೊಸ ಕಾರಿನ ಸಂಪೂರ್ಣ ಮಾಹಿತಿ ಮುಂದಿನ ವರ್ಷ ಬಿಡುಗಡೆ ಮಾಡುವುದಾಗಿ ಮಾಹಿತಿ ಇದೆ . ಈ ಮೂಲಕ ಅಂಬಾಸಿಡರ್ ಎಲೆಕ್ಟ್ರಿಕ್ ಕಾರನ್ನು ನೀವು ಚಲಾಯಿಸಬಹುದಾಗಿದೆ.