BREAKING NEWS | ಗುಂಡಿನ ದಾಳಿಗೊಳಗಾದ ಆರೋಗ್ಯ ಸಚಿವ ಮೃತ್ಯು!
ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ನಬಾ ಕಿಶೋರ್ ದಾಸ್ (61) ಅವರ ಮೇಲೆ ಪಶ್ಚಿಮ ಒಡಿಶಾದ ಜರ್ಸುಗುಡಾ ಜಿಲ್ಲೆಯ ಬ್ರಜರಾಜನಗರ ಪಟ್ಟಣದಲ್ಲಿ ಪೊಲೀಸ್ ಎಎಸ್‌ಐ ಗುಂಡು ಹಾರಿಸಿದ್ದು, ಘಟನೆ ಪರಿಣಾಮ ಸಚಿವರು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಭುವನೇಶ್ವರದ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರೂ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಸಚಿವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ದಾಸ್ ಅವರು ಮುಂಜಾನೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬ್ರಜರಾಜನಗರಕ್ಕೆ ತೆರಳಿದ್ದರು. ಅಲ್ಲಿ ರಕ್ಷಣೆ ಮಾಡಬೇಕಾದ ಪೊಲೀಸ್ ಸಬ್ ಇನ್ಸ್ಟೆಟರ್ ಸಚಿವರಿಗೆ ಗುಂಡು ಹಾರಿಸಿದ್ದಾನೆ. ಬ್ರಜರಾಜನಗರದಲ್ಲಿ ಅವರು ಕಾರಿನಿಂದ ಕೆಳಗಿಳಿದಾಗ ಮುಂಭಾಗದಿಂದ ಗುಂಡು ಹಾರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಘಟನೆಯಿಂದ ಸಚಿವರು ತೀವ್ರವಾಗಿ ಗಾಯಗೊಂಡಿದ್ದು, ಇದರ ಪರಿಣಾಮ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜಾರ್ಸುಗುಡ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ದಾಸ್ ಅವರು ದೀರ್ಘಕಾಲ ಕಾಂಗ್ರೆಸ್‌ನಲ್ಲಿದ್ದು ನಂತರ ಬಿಜೆಡಿ ಸೇರಿದ್ದರು. 2019 ರಲ್ಲಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದರು. ಇತ್ತೀಚೆಗೆ ಅವರು ಮಹಾರಾಷ್ಟ್ರದ ನಾಸಿಕ್‌ನ ಶನಿ ಸಿಗ್ನಾಪುರದಲ್ಲಿರುವ ಪ್ರಸಿದ್ಧ ಶನಿ ದೇವಸ್ಥಾನದಲ್ಲಿ 1 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಮಡಕೆಯನ್ನು ಅರ್ಪಿಸಿ ಸುದ್ದಿಯಾಗಿದ್ದರು. ಬ್ರಜರಾಜನಗರವು ಐಬಿ ವ್ಯಾಲಿ ಕೋಲರಿಗಳ ಪ್ರಧಾನ ಕಛೇರಿಯಾಗಿದೆ ಮತ್ತು ಇದು ಕಲ್ಲಿದ್ದಲು ವ್ಯವಹಾರಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಹೆಸರುವಾಸಿಯಾಗಿದೆ.