ಹಾಸನದ ವಿಚಾರ ನಿಮಗೆ ಬೇಡ, ಇಲ್ಲಿ ದೇವೇಗೌಡ, ರೇವಣ್ಣನವರ ತೀರ್ಮಾನವೇ ಅಂತಿಮ! ಚಿಕ್ಕಪ್ಪ, ಕುಮಾರಸ್ವಾಮಿ ವಿರುದ್ಧ ತೊಡೆ ತಟ್ಟಿದ ಸೂರಜ್ ರೇವಣ್ಣ!!

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು, ಟಿಕೆಟ್ ಹಂಚಿಕೆ ವಿಚಾರಗಳು ಜೋರಾಗುತ್ತಿವೆ. ವಿಶೇಷ ಎಂದರೆ, ರಾಜ್ಯ ರಾಜಕಾರಣದಲ್ಲಿ ಹಾಸನ ಟಿಕೆಟ್‌ ವಿಚಾರ ಹೆಚ್ಚು ಗಮನ ಸೆಳೆಯುತ್ತಿದ್ದು, ಅದರಲ್ಲೂ ಕೂಡ ಗೌಡರ ಕುಟುಂಬವೇ ಇದಕ್ಕೆ ಕಾರಣವಾಗಿದೆ. ಹಾಸನ ಕ್ಷೇತ್ರದ ಟಿಕೆಟ್​ ಹಂಚಿಕೆ ಜೆಡಿಎಸ್ ವರಿಷ್ಠರಿಗೆ ತಲೆನೋವಾಗಿದ್ದು, ಸಮಸ್ಯೆಗೆ ಮದ್ದೆರೆಯಲು ಇದೀಗ ಸ್ವತಃ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಎಂಟ್ರಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಭವಾನಿ ರೇವಣ್ಣನವರ ಹಿರಿಯ ಮಗ ಸ್ವರೂಪ್ ರೇವಣ್ಣನವರು ತಮ್ಮ ಚಿಕ್ಕಪ್ಪ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದಿದ್ದಾರೆ.

ಹಾಸನ ಟಿಕೆಟ್ ವಿಚಾರವನ್ನು ನಾನೇ ಫೈನಲ್ ಮಾಡ್ತೀನಿ. ಗೊಂದಲಕ್ಕೆ ತೆರೆ ಎಳೆದೇ ಹಾಸನಕ್ಕೆ ಬರುತ್ತೇನೆ ಎಂದು ದೊಡ್ಡ ಗೌಡರು ಹೇಳಿದ್ದರು. ಆದರೆ ಈ ನಡುವೆ ಹಾಸನ ಜೆಡಿಎಸ್ ಟಿಕೆಟ್ ವಿಚಾರವಾಗಿ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ, ಸೂರಜ್ ರೇವಣ್ಣ ತೊಡೆ ತಟ್ಟಿದ್ದಾರೆ. ಹಾಸನದಲ್ಲಿ ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಗೆಲವು ಖಚಿತ. ಜನಸಾಮನ್ಯರನ್ನು, ಕಾರ್ಯಕರ್ತರನ್ನು ನಿಲ್ಲಿಸ್ತೀನಿ ಅನ್ನೋದು ಬಿಟ್ಟುಬಿಡಿ ಎಂದು ನೇರವಾಗಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ ಹಾಸನ ಜಿಲ್ಲೆಯನ್ನು ರೇವಣ್ಣನವರಷ್ಟು ಅರಿತವತು ಭೂಮಿಯಲ್ಲೇ ಇಲ್ಲ, ರೇವಣ್ಣ ಬಿಟ್ಟು ಬೇರೆಯವರು ಹಾಸನದಲ್ಲಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಇಡೀ ಜಿಲ್ಲೆಯನ್ನು ರೇವಣ್ಣ ಸಮರ್ಪಕವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಮುಂದೆ ಅಭ್ಯರ್ಥಿಯನ್ನೂ ಅವರೇ ಘೋಷಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಹರದೂರು ಗ್ರಾಮದಲ್ಲಿ ಮಾತನಾಡಿದ ಎಂಎಲ್‌ಸಿ ಸೂರಜ್ ರೇವಣ್ಣ, ಹೆಚ್​ಡಿ ಕುಮಾರಸ್ವಾಮಿ ಅವರು ಪಕ್ಷದ ಹಿರಿಯ ರಾಜಕಾರಣಿ ಇದ್ದಾರೆ. ನಾವು ಅವರ ಬಗ್ಗೆ ಮಾತನಾಡೋದು ಸೂಕ್ತ ಅಲ್ಲ. ಅವರ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿರುತ್ತಾರೆ, ಅದು ನಮಗೆ ಸಂಬಂಧವಿಲ್ಲ. ಇರುವ ವಿಷಯ ಹೇಳಬೇಕೆಂದರೆ ಇವತ್ತು ಹಾಸನ ಜಿಲ್ಲೆ ತೆಗೆದುಕೊಂಡಾಗ ರೇವಣ್ಣ ಸಾಹೇಬರು, ದೇವೇಗೌಡರು ಕುಳಿತುಕೊಂಡು ತೀರ್ಮಾನ ಮಾಡುತ್ತಾರೆ. ದೇವೇಗೌಡರ ತೀರ್ಮಾನವೇ ಅಂತಿಮ‌ ತೀರ್ಮಾನ ಎಂದಿದ್ದಾರೆ.

ದೇವೇಗೌಡ ಅವರು ಹಾಸನಕ್ಕೆ ಬರುವುದಾಗಿ ಹೇಳುತ್ತಿದ್ದಾರೆ. ಹಾಸನಕ್ಕೆ ಬಂದು ಎಲ್ಲಾ ಶಾಸಕರು, ರೇವಣ್ಣ ಸಾಹೇಬರನ್ನು ಕೂರಿಸಿಕೊಂಡು, ಅವರೂ ಕೂತ್ಕಂಡು ಚರ್ಚೆ ಮಾಡುತ್ತಾರೆ. ಚುನಾವಣೆಗೆ ಇನ್ನೂ ಸಮಯ ಇದೆ. ಈಗಲೇ ಟಿಕೆಟ್‌ ಹಂಚಿಕೆಯ ಬಗ್ಗೆ ಇಷ್ಟೊಂದು ಯಾಕೆ ತಲೆಕೆಡಿಸಿಕೊಳ್ಳಲು ಹೋಗಬೇಕು. ನಮಗೆ ಇದರಿಂದ ಏನು ತೊಂದರೆ ಆಗಲ್ಲ. ಎಲ್ಲಾ ಸರಿಪಡಿಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ. ನಮ್ಮ ಪಕ್ಷದಲ್ಲಿ ಯಾವುದೇ ಸಂದರ್ಭದಲ್ಲಿ ಏನೇ ಡ್ಯಾಮೇಜ್‌ಗಳು ಇದ್ದರೂ ಚುನಾವಣೆ ಬಂದಾಗ ನಾವೆಲ್ಲ ಒಂದೇ ಬಾವುಟದ ಕೆಳಗೆ ಇರುತ್ತೇವೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದು ಬೇಡ ಎಂದರು.

ಅಲ್ಲದೆ ಹಾಸನ ಕ್ಷೇತ್ರದಲ್ಲಿ ಸದ್ಯ ರಾಜಕೀಯ ಸನ್ನಿವೇಶ ಬದಲಾಗಿದೆ. ಹಾಲಿ ಶಾಸಕ ಪ್ರೀತಂ ಗೌಡ ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡುತ್ತಿದ್ದಾರೆ. ನಾವು ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ. ಹಾಸನ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರು ಆಯ್ಕೆಯಾಗಬೇಕಿದೆ. ಇದು ಎಚ್‌ಡಿ ರೇವಣ್ಣ ಕುಟುಂಬದಿಂದ ಮಾತ್ರ ಸಾಧ್ಯ ಎಂದು ಕಾರ್ಯಕರ್ತರು, ಜನರು ಹೇಳುತ್ತಿದ್ದಾರೆ ಎಂದು ಹೇಳುವ ಮೂಲಕ ಎಚ್‌ಡಿ ಕುಮಾರಸ್ವಾಮಿಗೆ ಟಾಂಗ್‌ ನೀಡಿದ್ದಾರೆ.

Leave A Reply

Your email address will not be published.