Hardik Pandya: ಹಾರ್ದಿಕ್‌ ಪಾಂಡ್ಯ ರಿವೀಲ್‌ ಮಾಡಿದ್ರು ಸೋಲಿಗೆ ಕಾರಣ ಏನೆಂದು | ಇಲ್ಲಿದೆ ನೋಡಿ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಕ್ಲೀನ್​ಸ್ವೀಪ್ ಸಾಧನೆ ಗೈದಿದ್ದ ಭಾರತವು (India vs New Zealand) ಇದೀಗ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಸೋಲನ್ನು ಅನುಭವಿಸಿದೆ. ರಾಂಚಿಯ ಜೆಎಸ್​​ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯಾಟದಲ್ಲಿ ಟೀಮ್ ಇಂಡಿಯಾ ಬೌಲರ್​ಗಳ ಕಳಪೆ ಪ್ರದರ್ಶನ ಮತ್ತು ಸ್ಟಾರ್ ಬ್ಯಾಟರ್​ಗಳ ವೈಫಲ್ಯತೆ ತಂಡದ ಸೋಲಿಗೆ ಮುಖ್ಯ ಕಾರಣವಾಯಿತು.

ಟಾಸ್ ಗೆದ್ದು ಚೇಸಿಂಗ್‌ ಆಯ್ದುಕೊಂಡಿದ್ದ ಭಾರತ ತಂಡದ ಪರ ವಾಷಿಂಗ್ಟನ್ ಸುಂದರ್ ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂಲಕ ಗಮನ ಸೆಳೆದರು. ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರೂ ಯಾವುದೆ ಫಲ ಸಿಗಲಿಲ್ಲ. ಕಿವೀಸ್ ಪಡೆ 21 ರನ್​ಗಳ ಗೆಲುವು ಸಾಧಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಪಂದ್ಯ ಮುಗಿದ ಬಳಿಕ ತಂಡದ ಸೋಲಿಗೆ ಕಾರಣ ತಿಳಿಸಿರುವ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಏನೆಂದು ಹೇಳಿದ್ದಾರೆ ನೋಡಿ. “ಪಂದ್ಯದಲ್ಲಿ ಚೆಂಡು ಟರ್ನ್ ಆಗುತ್ತದೆ ಎಂದು ಯಾರೂ ಚಿಂತಿಸಿರಲಿಲ್ಲ. ಆದರೆ ನ್ಯೂಜಿಲೆಂಡ್ ಉತ್ತಮ ಪ್ರದರ್ಶನ ತೋರಿ ಅಧಿಕಾರಯುತ ಗೆಲುವು ಸಾಧಿಸಿದೆ. ಹಳೆ ಚೆಂಡಿಗಿಂತ ಹೊಸ ಚೆಂಡು ಹೆಚ್ಚು ಟರ್ನ್ ಆಗುತ್ತಿತ್ತು. ಇದರ ಜೊತೆ ಹೆಚ್ಚು ಬೌನ್ಸ್ ಕೂಡ ಆಗುತ್ತಿತ್ತು,” ಎಂದು ತಂಡದ ಸೋಲಿಗೆ ಕಾರಣ ತಿಳಿಸಿದ್ದಾರೆ.

ಇದೇ ವೇಳೆ ಕೇವಲ 28 ಎಸೆತಗಳಲ್ಲಿ 50 ರನ್ ಸಿಡಿಸಿ ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದ ವಾಷಿಂಗ್ಟನ್ ಸುಂದರ್ ಅವರನ್ನು ಹಾರ್ದಿಕ್ ಹಾಡಿ ಕೊಂಡಾಡಿದ್ದಾರೆ. “ಇಂದಿನ(ಶುಕ್ರವಾರ) ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಆಲ್‌ರೌಂಡರ್ ಪ್ರದರ್ಶನದಿಂದ ಗಮನ ಸೆಳೆದಿರುವುದನ್ನು ನೋಡಿದರೆ, ಈ ಪಂದ್ಯವು ನ್ಯೂಜಿಲೆಂಡ್ vs ಭಾರತ ನಡುವಣ ಪಂದ್ಯ ಅನ್ನುವುದಕ್ಕಿಂತ, ವಾಷಿಂಗ್ಟನ್ ಸುಂದರ್ vs ನ್ಯೂಜಿಲೆಂಡ್ ಪಂದ್ಯ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ತಮ್ಮ ಆಲ್‌ರೌಂಡರ್ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ. ಈ ಇಬ್ಬರು ಆಟಗಾರರು ಮುಂದೆಯೂ ಇದೇ ಪ್ರದರ್ಶನ ಮುಂದುವರಿಸಿದರೆ ಟೀಮ್ ಇಂಡಿಯಾದ ಬೆಳವಣಿಗೆಗೆ ತುಂಬಾ ಅನುಕೂಲವಾಗುತ್ತದೆ.” ಎಂದು ಹಾರ್ದಿಕ್ ಪಾಂಡ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್‌ ಮಾಡಲು ಅವಕಾಶ ಪಡೆದ ನ್ಯೂಜಿಲೆಂಡ್ ತಂಡ,​ ಡೆವೊನ್​ ಕಾನ್ವೆ (52) ಹಾಗೂ ಡೆರಲ್​ ಮಿಚೆಲ್​(59) ಅವರ ಅರ್ಧಶತಕಗಳ ನೆರವಿನಿಂದ 176 ರನ್​ ಪೇರಿಸಿತು. ಫಿನ್ ಅಲೆನ್ 35, ಗ್ಲೇನ್ ಫಿಲ್ಲಿಪ್ಸ್ 17 ರನ್​ಗಳ ಕೊಡುಗೆ ನೀಡಿದರು. ಭಾರತ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಬಳಿಸಿದರೆ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಶಿವಂ ತಲಾ ಒಂದು ವಿಕೆಟ್ ಪಡೆದರು. 177 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ವಿಕೆಟ್​ ಕಳೆದುಕೊಳ್ಳುತ್ತ ಸಾಗಿತು. ಗಿಲ್​ 7 ರನ್​, ಇಶಾನ್​ ಕಿಶನ್​ 4, ರಾಹುಲ್​ ತ್ರಿಪಾಠಿ ಶೂನ್ಯಕ್ಕೆ ಔಟಾಗುವ ಮೂಲಕ ಭಾರತ ತಂಡ 15 ರನ್​ಗೆ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.

ಈ ಸಂದರ್ಭ ನಾಯಕ ಹಾರ್ದಿಕ್ ಪಾಂಡ್ಯ (21)​ ಹಾಗೂ ಸೂರ್ಯಕುಮಾರ್​ ಯಾದವ್(47) ಜೊತೆಯಾಟದ ಮೂಲಕ ಭರವಸೆ ಮೂಡಿಸಿದರೂ ಗೆಲುವಿನ ಹತ್ತಿರಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್​ 28 ಎಸೆತಗಳಲ್ಲಿ 50 ರನ್​ ಬಾರಿಸಿದರೂ ಸಹ ಇತರೆ ಬ್ಯಾಟರ್​ಗಳು ಸಾಥ್ ನೀಡಲಿಲ್ಲ. ಅಂತಿಮವಾಗಿ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 21 ರನ್‌ಗಳಿಂದ ಸೋಲುನ್ನುಂಡು, ಟಿ20 ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ.

Leave A Reply

Your email address will not be published.