Twinkling Stars : ಬಾನಂಗಳದಲ್ಲಿ ಕಡಿಮೆಗೊಳ್ಳುತ್ತಿದೆ ನಕ್ಷತ್ರಗಳ ಸಂಖ್ಯೆ! ಸಂಶೋಧಕರು ಹೇಳೋದೇನು?

ಬಾಲ್ಯ ಮತ್ತು ನಕ್ಷತ್ರಗಳಿಗೆ ಏನೋ ನಂಟಿದೆ. ಯಾಕೆ ಗೊತ್ತಾ? ಬಾಲ್ಯದಲ್ಲಿ ಊಟ ಮಾಡದೆ ಹಟ ಹಿಡಿದಾಗ ಅಮ್ಮ ನಮ್ಮನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಒಂದು ಕೈಯಲ್ಲಿ ಅನ್ನದ ಬಟ್ಟಲನ್ನು ಹಿಡಿದು ಮನೆಯಂಗಳದಲ್ಲಿ ನಿಂತು, ಅದೇ ಕೈಯ ಬೆರಳುಗಳಿಂದ, ಮಿಲಿಯನ್ ಗಟ್ಟಲೆ ದೂರವಿರುವ ಆಕಾಶದಂಗಳದಲ್ಲಿ ನಲಿಯುತ್ತಿರುವ ನಕ್ಷತ್ರಗಳ ಪುಂಜಗಳ ಚಿತ್ತಾರವನ್ನು ತೋರಿಸುತ್ತಾ, ಕೈ ತುತ್ತು ತಿನಿಸಿದ್ದು ಯಾರಿಗೆ ತಾನೇ ಮರೆಯುವುದಕ್ಕೆ ಸಾಧ್ಯ ಹೇಳಿ. ಈಗಲೂ ಕೆಲವರು ಮಿನುಗುವ ನಕ್ಷತ್ರಗಳ ಬೆಳಕಿನಲ್ಲಿ ಮೇಲ್ಛಾವಣಿಯಲ್ಲಿ ಹೋಗಿ ಮಲಗುವುದನ್ನು ಇಷ್ಟ ಪಡುತ್ತಾರೆ. ಚಿಕ್ಕ ಮಕ್ಕಳಂತು ಮಿರ ಮಿರ ನಗುವ ನಕ್ಷತ್ರಗಳ ಬಗ್ಗೆ ನೂರಾರು ಕೌತುಕ ಹುಟ್ಟಿಸುವ ಪ್ರಶ್ನೆಗಳು ತಲೆಯಲ್ಲಿ ಓಡುತ್ತಿರುತ್ತದೆ. ಅರೇ!! ಈಗೇಕೆ ಈ ನಕ್ಷತ್ರಗಳ ವಿಷಯ ಹೇಳ್ತಿದ್ದಾರೆ ಅಂತ ಯೋಚಿಸ್ತಿದ್ದೀರಾ. ವಿಷಯ ಇದೆ. ಇಲ್ಲೊಂದು ಆಶ್ಚರ್ಯಪಡಿಸುವ ಸುದ್ದಿಯಿದೆ ನೋಡಿ.

ಬೆಳಕಿನ ಮಾಲಿನ್ಯದಿಂದಾಗಿ ಹಿಂದಿನಂತೆ ನಕ್ಷತ್ರಗಳು ಈಗ ಪ್ರಕಾಶಮಾನವಾಗಿ ಹೊಳೆಯುವುದಿಲ್ಲ, ಅಂದರೆ ನಕ್ಷತ್ರಗಳು ಮುಸುಕಾಗುತ್ತಿವೆ ಎಂಬ ಸಂಗತಿಯನ್ನು ಸಂಶೋಧನೆಯು ಬಿಚ್ಚಿಟ್ಟಿದೆ. 50,000 ಕ್ಕೂ ಹೆಚ್ಚು ಹವ್ಯಾಸಿ ಸ್ಟಾರ್‌ಗೆಜರ್ ಗಳಿಂದ ಎಂದರೆ ಖಗೋಳಶಾಸ್ತ್ರಜ್ಞರಿಂದ ನಡೆದ ಸಂಶೋಧನೆಗಳಿಂದ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಿದಾಗ, ರಾತ್ರಿಯಲ್ಲಿ ವಿದ್ಯುತ್ ದೀಪಗಳ ನಿರಂತರ ಬೆಳಕು, ಉಂಟಾಗುತ್ತಿರುವ ಬೆಳಕಿನ ಮಾಲಿನ್ಯವು ಇದಕ್ಕೆ ಮುಖ್ಯವಾದ ಕಾರಣ ಅಂತ ಸಂಶೋಧಕರು ಕಂಡುಹಿಡಿದಿದ್ದಾರೆ.

2011 ರಿಂದ 2022 ರವರೆಗೆ ವೀಕ್ಷಣಾ ಸ್ಥಳಗಳಲ್ಲಿ ವರದಿಯಾದ ಗೋಚರ ನಕ್ಷತ್ರಗಳ ಸಂಖ್ಯೆಯು ಒಂದು ಹಂತದಲ್ಲಿ ಕಡಿಮೆಯಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಸೈನ್ಸ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನೆಗಳ ಪ್ರಕಾರ, ಕೃತಕ ಬೆಳಕಿನ ಪರಿಣಾಮದಿಂದಾಗಿ ಆಕಾಶದಲ್ಲಿ ವಾರ್ಷಿಕ ಶೇ.10 ರಷ್ಟು ಹೆಚ್ಚಳದಿಂದ ಆಕಾಶದಲ್ಲಿನ ಮಂದ ನಕ್ಷತ್ರಗಳು ಮರೆಮಾಡಲ್ಪಡುತ್ತಿವೆ.

ಸ್ಯಾಂಟಿಯಾಗೊ ಡಿ ಕಾಂಪೋಸ್ಟೆಲಾ ವಿಶ್ವವಿದ್ಯಾಲಯದ ಭೌತಶಾಸ್ತ್ರಜ್ಞ ಫ್ಯಾಬಿಯೊ ಫಾಲ್ಚಿ ಹೇಳುವ ಪ್ರಕಾರ,
“ನಾವು ವರ್ಷದಿಂದ ವರ್ಷಕ್ಕೆ ನಕ್ಷತ್ರಗಳನ್ನು ನೋಡುವ ಸಾಧ್ಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ನೀವು ಇನ್ನೂ ಮಂದ ನಕ್ಷತ್ರಗಳನ್ನು ನೋಡಬೇಕಾದರೆ, ನೀವು ತುಂಬಾ ಕತ್ತಲೆಯಿರುವ ಪ್ರದೇಶದಲ್ಲಿ ನಿಂತುಕೊಂಡು ನೋಡಬಹುದು. ಆದರೆ ನೀವು ಪ್ರಕಾಶಮಾನವಾದ ನಕ್ಷತ್ರಗಳನ್ನು ನೋಡಿದರೆ, ನೀವು ತುಂಬಾನೇ ಕಡಿಮೆ ಬೆಳಕಿನ ಮಾಲಿನ್ಯ ಇರುವ ಸ್ಥಳದಲ್ಲಿ ನಿಂತಿರುವಿರಿ ಎಂದರ್ಥ” ಎಂದು ಮಾಧ್ಯಮ ಸಂಸ್ಥೆಗೆ ತಿಳಿಸಿದರು.

2017 ರ ಅಧ್ಯಯನವು ಉಪಗ್ರಹ ವೀಕ್ಷಣೆಗಳನ್ನು ಆಧರಿಸಿ ನೀಡಿದ ವರದಿಯಲ್ಲಿ, ರಾತ್ರಿ ಕೃತಕವಾಗಿ ಬೆಳಗುವ ಬೆಳಕು, ಭೂಮಿಯ ಹೊರಾಂಗಣ ಮೇಲ್ಮೈಯ ಪ್ರಕಾಶ ಮತ್ತು ವಿಸ್ತೀರ್ಣದಲ್ಲಿ ವಾರ್ಷಿಕವಾಗಿ ಸುಮಾರು 2 ಪ್ರತಿಶತದಷ್ಟು ಬೆಳೆಯುತ್ತಿದೆ ಎಂದು ಕಂಡುಹಿಡಿದಿದೆ. ಬೆಳಕಿನ ಮಾಲಿನ್ಯವು ಜನರು ಮತ್ತು ಪ್ರಾಣಿಗಳ ಮೇಲೆ ಪರಿಣಾಮಗಳನ್ನು ಬೀರುವ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಉದಾಹರಣೆಗೆ, ಬೆಳಕಿನ ಮಾಲಿನ್ಯವು ಮಿಂಚು ಹುಳುಗಳಿಗೆ ಹೇಗೆ ಅಪಾಯಕಾರಿಯಾಗಿದೆ ಎಂಬುದನ್ನು ಸಂಶೋಧನೆಯು ತೋರಿಸಿದೆ.

ಪಾಟ್ಸ್ ಡ್ಯಾಮ್ ನ ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ನ ಅಧ್ಯಯನದ ಸಹ-ಲೇಖಕ ಮತ್ತು ಭೌತಶಾಸ್ತ್ರಜ್ಞ ಕ್ರಿಸ್ಟೋಫರ್ ಕೈಬಾರವರು ಹೇಳುವ ಪ್ರಕಾರ “10 ಪ್ರತಿಶತದಷ್ಟು ವಾರ್ಷಿಕ ಬದಲಾವಣೆಯು ನಾನು ನಿರೀಕ್ಷಿಸಿದ್ದಕ್ಕಿಂತ ತುಂಬಾ ಹೆಚ್ಚಾಗಿದೆ ಮತ್ತು ಇದನ್ನು ನೀವು ನಿಮ್ಮ ಜೀವಿತಾವಧಿಯಲ್ಲಿ ಸ್ಪಷ್ಟವಾಗಿ ಗಮನಿಸುತ್ತೀರಿ. ಉದಾಹರಣೆಗೆ ಒಂದು ಮಗು ಹುಟ್ಟಿದಾಗ ರಾತ್ರಿಯಲ್ಲಿ 250 ನಕ್ಷತ್ರಗಳಿದ್ದರೆ, ಆ ಮಗುವಿಗೆ 18 ವರ್ಷ ತುಂಬುವ ಹೊತ್ತಿಗೆ, ಕೇವಲ 100 ನಕ್ಷತ್ರಗಳು ಮಾತ್ರ ಗೋಚರಿಸುತ್ತವೆ” ಎಂದಿದ್ದಾರೆ.

ಬೆಳಕಿನ ಮಾಲಿನ್ಯ ಹೆಚ್ಚಾಗುತ್ತಿದ್ದರೆ, ಇದರಿಂದ ಪರಿಸರದ ಪ್ರತಿ ಜೀವಿಯ ಮೇಲೂ ಪರಿಣಾಮ ಬೀರುತ್ತದೆ. ಮುಂದೊಂದು ದಿನ ಎಣಿಸಕ್ಕಾಗದ ನಕ್ಷತ್ರಗಳು, ಬೆರಳೆಣಿಕೆಯಷ್ಟೇ ಇದ್ದರೂ ಅಚ್ಚರಿಯಿಲ್ಲ.

Leave A Reply

Your email address will not be published.