ಮದುವೆಯಾಗಲು ಗೌರ್ಮೆಂಟ್ ಕೆಲಸದ ಹುಡುಗಿಯೇ ಬೇಕು! ನಡು ಬೀದಿಯಲ್ಲಿ ಪೋಸ್ಟರ್ ಹಿಡಿದ ಯುವಕ, ವಧು ದಕ್ಷಿಣೆಯನ್ನೂ ಕೊಡ್ತಾನಂತೆ!!
ಮದುವೆ ಎಂಬುದು ಮನುಷ್ಯ ಜೀವನದಲ್ಲಿ ಅತೀ ಪ್ರಮುಖ ಘಟ್ಟ. ಈ ಸಮಯದಲ್ಲಿ ಬಾಳ ಸಂಗಾತಿ ಆಗುವವರ ಬಗ್ಗೆ ಅವರು ಹೇಗಿರಬೇಕೆಂದು ಹುಡುಗ ಅಥವಾ ಹುಡುಗಿಯರು ಕನಸು ಕಾಣುತ್ತಾರೆ. ಹುಡುಗಿಯರಿಗಂತೂ ತಮ್ಮ ಹುಡುಗ ಹಾಗಿರಬೇಕು, ಹೀಗಿರಬೇಕೆಂದು ಹೆಚ್ಚಿನ ಆಕಾಂಕ್ಷೆಗಳಿರುತ್ತವೆ. ಅದರಲ್ಲೂ ಕೂಡ, ಸಾಮಾನ್ಯವಾಗಿ ಹೆಣ್ಣು ಹೆತ್ತ ಪೋಷಕರು ತಮ್ಮ ಮಗಳನ್ನು ಮದುವೆಯಾಗುವ ಹುಡುಗ ಸರ್ಕಾರಿ ಕೆಲಸದಲ್ಲಿರಬೇಕು ಎಂದು ಆಸೆ ವ್ಯಕ್ತಪಡಿಸುತ್ತಾರೆ. ಕೆಲವು ಹುಡುಗಿಯರೂ ಇದೇ ತರಹದ ನಿರೀಕ್ಷೆಯಲೂಲಿರುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವೆಂಬಂತೆ ಇಲ್ಲೊಬ್ಬ ಯುವಕ ತಾನು ಮದವೆಯಾಗುವ ಹುಡುಗಿಗೆ ಯಾವೆಲ್ಲಾ ಲಕ್ಷಣಗಳು ಇರಬೇಕೆಂದು ಜಾಹೀರಾತು ರೀತಿ ಪೋಸ್ಟರ್ ಹಿಡಿದು ನಡು ರಸ್ತೆಯಲ್ಲಿ ನಿಂತತಂಹ ಘಟನೆಯೊಂದು ನಡೆದಿದೆ.
ಹೌದು, ಮಧ್ಯಪ್ರದೇಶದ ಯುವಕನೋರ್ವ ತಾನು ಮದುವೆಯಾಗುವ ಹುಡುಗಿಗಾಗಿ ವಿಭಿನ್ನವಾದ ಜಾಹೀರಾತು ನೀಡಿ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ಧಿಯಾಗುತ್ತಿದ್ದಾನೆ. ತಾನು ಮದುವೆಯಾಗುವ ಹುಡುಗಿಯಲ್ಲಿ ಈ ರೀತಿಯ ಅರ್ಹತೆಗಳು ಇರಬೇಕೆಂದು ನಿರೀಕ್ಷಿಸುತ್ತಿರುವುದಾಗಿ ಕೆಲವೊಂದು ಅರ್ಹತೆಗಳನ್ನು ದೊಡ್ಡದಾದ ಪ್ಲೇಕಾರ್ಡ್‌ನಲ್ಲಿ ಬರೆದ ಆತ ಅದನ್ನು ಹಿಡಿದುಕೊಂಡು ಬೀದಿಯಲ್ಲಿ ನಿಂತಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈತ ಈಗ ಟಾಕ್ ಆಫ್ ದಿ ಟೌನ್ ಆಗಿದ್ದಾನೆ.
ಯುವಕ ಹಳದಿ ಬಣ್ಣದ ಪೋಸ್ಟರ್‌ನ್ನು ಹಿಡಿದು ನಿಂತಿರುವ ಈತ ಜನಜಂಗುಳಿಯಿಂದ ತುಂಬಿರುವ ಮಾರುಕಟ್ಟೆಯ ಮಧ್ಯದಲ್ಲಿ ಎಲ್ಲರನ್ನೂ ಚಕಿತಗೊಳಿಸುತ್ತಾ ನಿಂತಿದ್ದಾನೆ. ತನ್ನ ಪೋಸ್ಟರ್‌ನಲ್ಲಿ ನನಗೆ ವಿವಾಹವಾಗಲು ಸರ್ಕಾರಿ ಉದ್ಯೋಗದಲ್ಲಿರುವ ವಧು ಬೇಕು. ಆಕೆಗೆ ನಾನು ವಧು ದಕ್ಷಿಣೆಯನ್ನು ಕೂಡ ನೀಡುತ್ತೇನೆ ಎಂದು ಹಿಂದಿ ಭಾಷೆಯಲ್ಲಿ ಬರೆದಿದ್ದಾನೆ. ಸಾಮಾನ್ಯವಾಗಿ ಈ ಹಿಂದೆ ಇದೇ ರೀತಿ ಪೋಸ್ಟರ್ ಹಿಡಿದು, ಫ್ರೀ ಹಗ್, ಫ್ರೀ ಕಿಸ್ ಎಂದು ಬರೆದುಕೊಂಡು ಕೆಲವರು ಫೇಮಸ್ ಆದಂತಹ ಎಷ್ಟೋ ಘಟನೆಗಳು ಇವೆ. ಆದರೆ ಮದುವೆಯಾಗಲು ವಧು ಬೇಕು ಎಂದು ಈತ ಪೋಸ್ಟರ್ ಹಿಡಿದಿರುವುದು ಒಂದು ವಿಶೇಷ ಎನ್ನಬಹುದು.
ವರದಕ್ಷಿಣೆಯ ನೆಪ ಒಡ್ಡಿ ಹಣ, ಒಡವೆ, ವಸ್ತ್ರ, ಜಮೀನುಗುಳೆಂದು ಹೆಣ್ಣಿನ ಕಡೆಯವರನ್ನು ದೋಚುವಂತಹ ಪ್ರಸ್ತುತ ಸಮಯದಲ್ಲಿ, ಈ ಹುಡುಗ ತಾನೇ ವಧು ದಕ್ಷಿಣೆ ಕೊಡುತ್ತೀನಿ ಎಂದಿರುವುದು ನೋಡುಗರೆಲ್ಲರಿಗೂ ಆಶ್ಚರ್ಯವನ್ನುಂಟುಮಾಡಿದೆ. ಕೆಲವರು ಸಮಾನತೆಯ ಕಾರಣಕ್ಕೆ ಆತ ವಧು ದಕ್ಷಿಣೆ ನೀಡುವುದಾಗಿ ಹೇಳಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಪುರುಷರ ಸಂಖ್ಯೆಯೇ ಜಾಸ್ತಿಯಾಗಿರುವ ಸದ್ಯದ ಪರಿಸ್ಥಿತಿಯಲ್ಲಿ ಮದುವೆಯಾಗಲು ಹೆಣ್ಣು ಸಿಗದೆ ಗಂಡು ಮಕ್ಕಳು ಎಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ಈ ಯುವಕನನ್ನು ನೋಡಿ ತಿಳಿಯಬಹುದು. ಪಾಪ ಈತನೂ ಬಹುಶಃ ಹೆಣ್ಣು ಹುಡುಕಿ ಹುಡುಕಿ, ಕೊನೆಗೆ ಯಾರೂ ಸಿಗದೆ ಸುಸ್ತಾಗಿ ಈ ರೀತಿ ಪೋಸ್ಟರ್ ನಿರ್ಧಾರ ತೆಗೆದುಕೊಂಡನೇನೋ ಅನಿಸುತ್ತದೆ.
ಜನಜಂಗುಳಿಯ ನಡುವೆ ಈ ಯುವಕ ಪೋಸ್ಟರ್ ಹಿಡಿದದ್ದು ಕೆಲವರಿಗೆ ತಮಾಷೆಯಾಗಿ ಕಂಡರೆ, ಕೆಲವರು ಅಯ್ಯೋ ಪಾಪ ಎಂದಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಾರುಕಟ್ಟೆಗೆ ಬಂದ ಅನೇಕರು ಪೋಸ್ಟರ್ ಹಿಡಿದು ನಿಂತ ಈತನನ್ನು ದುರುಗುಟ್ಟಿ ನೋಡುತ್ತಿರುವುದು ಕಾಣಿಸುತ್ತಿದೆ. ಮತ್ತೆ ಕೆಲವರು ನಗುತ್ತಿರುವುದು ಕೂಡ ಕಾಣಿಸುತ್ತಿದೆ. ಒಟ್ಟಿನಲ್ಲಿ ವಿಡಿಯೋ ವೈರಲ್ ಆಗಿದ್ದು ಬಗೆ ಬಗೆಯ ಕಮೆಂಟ್ಗಳು ಬರುತ್ತಿವೆ.