‘ಪಠಾಣ್’ ಚಿತ್ರವನ್ನು ಗೆಲ್ಲಿಸಿದ್ದು, ಮುಂದೆ ಗೆಲ್ಲಿಸೋದು ಕೂಡ ಹಿಂದೂಗಳೇ! ಟ್ವಿಟರ್ ಮೂಲಕ ಮತ್ತೆ ಹಾವಳಿ ಶುರುಹಚ್ಚಿಕೊಂಡ ಕಂಗನಾ ರಣಾವತ್!!
ರಿಲೀಸ್ ಗೂ ಮುನ್ನವೇ ಸಾಕಷ್ಟು ವಿವಾದಗಳಿಂದ ಸುದ್ದಿಯಾಗುತ್ತಿದ್ದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಸಿನಿಮಾ ಫ್ಲಾಪ್ ಆಗೋದು ಗ್ಯಾರಂಟಿ ಎಂದು ಹಲವರು ಊಹಿಸಿದ್ದರು. ಆದರೆ ಈ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವಂತೆ ಬೆಳ್ಳಿ ತೆರೆಯ ಮೇಲೆ ಅಬ್ಬರಿಸುತ್ತಿರುವ ಪಠಾಣ್, ಬಾಕ್ಸ್ ಆಫೀಸ್ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದೆ. ವಿಮರ್ಶಕರೂ ಕೂಡ ಒಳ್ಳೊಳ್ಳೆ ರೇಟಿಂಗ್ ನೀಡುತ್ತಿದ್ದಾರೆ. ಆರಂಭದಲ್ಲಿ ಸಿನಿಮಾ ವಿರೋಧಿಸುತ್ತಿದ್ದವರು ಕೂಡ ಇದೀಗ ಮೆಚ್ಚುಗೆ ಮಾತನಾಡುತ್ತಿದ್ದಾರೆ. ಆದರೀಗ ಪಠಾಣ್ ಕುರಿತು ನಟಿ ಕಂಗನಾ ರಣಾವತ್ ಮಾತ್ರ ಕೊಂಕು ಮಾತುಗಳನ್ನಾಡಲು ಆರಂಭಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೊನ್ನೆ ತಾನೆ ರಿಲೀಸ್ ಆದ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಖತ್ ಧೂಳೆಬ್ಬಿಸುತ್ತಿದೆ. ಆದ್ರೆ ಇದರ ಕುರಿತು ಮಾತನಾಡಿದ್ದು ಕಂಗನಾ ‘ಬಾಕ್ಸ್ ಆಫೀಸ್ ಗಳಿಕೆ ಮೇಲೆ ಒಂದು ಚಿತ್ರವನ್ನು ಅಳೆಯಬಾರದು’ ಎಂದು ಮಾತನಾಡಿದ್ದರು. ಆದರೀಗ ಈ ಪ್ರಹಾರವನ್ನು ಮುಂದುವರೆಸಿರುವ ಅವರು ಸರಣಿ ಟ್ವೀಟ್ ಮೂಲಕ ಸಿನಿಮಾ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.
ಅದೂ ಅಲ್ಲದೆ ಕೆಲವು ಸಮಯಗಳಿಂದ ಕಂಗನಾ ಟ್ವಿಟರ್ ಖಾತೆ ರದ್ದಾಗಿತ್ತು. ಇದರಿಂದ ಸದಾ ಏನಾದರೂ ಒಂದು ವಿಷಯಗಳ ಕುರಿತು ಕಮೆಂಟ್ ಮಾಡುತ್ತಾ, ಹೇಳಿಕೆ ನೀಡುತ್ತಿದ್ದ ಕಂಗನಾ ರಣಾವತ್ಗೆ ಕೈಕಟ್ಟಿ ಹಾಕಿದಂತಾಗಿತ್ತು. ಹೀಗಾಗಿ, ಅವರು ಇನ್ಸ್ಟಾಗ್ರಾಮ್ ಬಳಕೆ ಮಾಡಿ, ತಮ್ಮ ಹತಾಶೆಯನ್ನು ಇನ್ಸ್ಟಾಗ್ರಾಮ್ನಲ್ಲಿ ಹೊರಹಾಕುತ್ತಿದ್ದರು. ಈಗ ಅವರಿಗೆ ಮರಳಿ ತಮ್ಮ ಟ್ವಿಟರ್ ಖಾತೆ ಸಿಕ್ಕಿದೆ. ಟ್ವಿಟರ್ಗೆ ಮರಳಿದ ಬಳಿಕ ಪಠಾಣ್ ಸಿನಿಮಾ ಬಗ್ಗೆನೇ ಕಿಡಿಕಾರುವ ಮೂಲಕವೇ ಮತ್ತೆ ಹಾವಳಿ ಶುರುಹಚ್ಚಿಕೊಂಡಿದ್ದಾರೆ.
ಇದೀಗ ಮತ್ತೊಮೆ ಸಿನೆಮಾ ಕುರಿತು ಟ್ವೀಟ್ ಮಾಡಿರುವ ಅವರು ‘ಪಠಾಣ್ ಸಿನಿಮಾ ದ್ವೇಷದ ಮೇಲೆ ಪ್ರೀತಿ ಸಾಧಿಸಿರುವ ಗೆಲುವು ಎಂದು ಎಲ್ಲರೂ ಹೇಳುತ್ತಿದ್ದಾರೆ. ನಾನು ಇದನ್ನು ಒಪ್ಪುತ್ತೇನೆ. ಆದರೆ ಯಾರ ದ್ವೇಷದ ಮೇಲೆ ಯಾರ ಪ್ರೀತಿ? ಯಾರು ಟಿಕೆಟ್ಗಳನ್ನು ಖರೀದಿಸಿ ಚಿತ್ರವನ್ನು ಯಶಸ್ವಿ ಮಾಡಿದ್ದು? ಭಾರತದ ಪ್ರೀತಿ ಚಿತ್ರವನ್ನು ಗೆಲ್ಲಿಸಿದೆ. ಅದರಲ್ಲಿ ಶೇ. 80ರಷ್ಟು ಹಿಂದುಗಳೇ ಇದ್ದಾರೆ. ಶತ್ರುರಾಷ್ಟ್ರ ಪಾಕಿಸ್ತಾನ ಹಾಗೂ ಐಎಸ್ಐನ ಒಳ್ಳೆಯವರು ಎಂದು ತೋರಿಸಿದ ಸಿನಿಮಾ ಯಶಸ್ಸು ಕಾಣುತ್ತಿದೆ. ದ್ವೇಷವನ್ನು ಮೀರಿ ಭಾರತದ ಈ ಮನೋಭಾವವೇ ಅದನ್ನು ಮಹಾನ್ ಆಗಿ ಮಾಡಿದೆ. ದ್ವೇಷ ಮತ್ತು ಶತ್ರುಗಳ ಕ್ಷುಲ್ಲಕ ರಾಜಕೀಯವನ್ನು ಜಯಿಸಿದ್ದು ಭಾರತದ ಪ್ರೀತಿ. ಯಾರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೀರೋ ದಯವಿಟ್ಟು ಗಮನಿಸಿ ಪಠಾಣ್ ಒಂದು ಸಿನಿಮಾ ಆಗಲು ಮಾತ್ರ ಸಾಧ್ಯ. ಭಾರತದಲ್ಲಿ ಯಾವಾಗಲೂ ಮೊಳಗೋದು ಜೈ ಶ್ರೀರಾಂ ಮಾತ್ರ’ ಎಂದು ಕೂಡ ಹೇಳಿದ್ದಾರೆ.
ಮುಂದುವರಿದು ‘ಭಾರತೀಯ ಮುಸ್ಲಿಮರು ದೇಶಭಕ್ತರು ಮತ್ತು ಅಫ್ಘಾನಿಸ್ತಾನದ ಪಠಾಣರಿಗಿಂತ ತುಂಬಾ ಭಿನ್ನರು ಎಂದು ನಾನು ನಂಬುತ್ತೇನೆ. ಮುಖ್ಯ ವಿಷಯವೆಂದರೆ ಭಾರತ ಎಂದಿಗೂ ಅಫ್ಘಾನಿಸ್ತಾನವಾಗುವುದಿಲ್ಲ. ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಲ್ಲಿನ ಪರಿಸ್ಥಿತಿ ನರಕವನ್ನು ಮೀರಿದೆ. ಹೀಗಾಗಿ ಕಥೆಯ ಮೂಲಕ ಹೇಳೋದಾದರೆ ಇದು ಭಾರತದ ಪಠಾಣ್’ ಎಂದು ಕಂಗನಾ ಬರೆದುಕೊಂಡಿದ್ದಾರೆ.