ಭವಾನಿ ರೇವಣ್ಣನಿಗೆ ಹಾಸನದಲ್ಲಿ ಟಿಕೆಟ್ ಕೊಡುವುದಿಲ್ಲ, ಸಮರ್ಥ ಅಭ್ಯರ್ಥಿಯೊಬ್ಬರು ಅಲ್ಲಿದ್ದಾರೆ: ಎಚ್ ಡಿ ಕುಮಾರಸ್ವಾಮಿ
ಹಾಸನದ ವಿಧಾನಸಭೆಯ ಕ್ಷೇತ್ರ ಚನಾವಣೆಗೂ ಮುನ್ನ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ದೇವೇಗೌಡರ ಸೊಸೆ ಭವಾನಿ ರೇವಣ್ಣನವರು ‘ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಸ್ವತಃ ಘೋಷಿಸಿಕೊಂಡಿದ್ದು, ದಯವಿಟ್ಟು ಮತ ನೀಡಿ ಎಂದು ಬೇಡಿಕೊಂಡಿದ್ದರು. ಆದರೀಗ ಭವಾನಿಯವರಿಗೆ ನಿರಾಸೆಯಾಗುವಂತೆ ಕುಮಾರಸ್ವಾಮಿ ಮಾತನಾಡಿದ್ದು, ‘ಹಾಸನದಿಂದ ಭವಾನಿ ರೇವಣ್ಣನಿಗೆ ಟಿಕೆಟ್ ಇಲ್ಲ’ ಎಂದು ಕಡ್ಡಿ ತುಂಡು ಮಾಡುವಂತೆ ಹೇಳಿದ್ದಾರೆ.
ಹೌದು, ರಾಯಚೂರಿನಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು ‘ಹಾಸನದಿಂದ ಭವಾನಿ ರೇವಣ್ಣನಿಗೆ ಟಿಕೆಟ್ ನೀಡಲ್ಲ, ಸಮರ್ಥ ಅಭ್ಯರ್ಥಿ ಇರುವಾಗ ಯಾವುದೇ ಕಾರಣಕ್ಕೂ ಸ್ಪರ್ಧೆಗೆ ಇಳಿಸಲ್ಲ. ಅದಲ್ಲದೆ ಕುಟುಂಬದವರನ್ನು ಕಣಕ್ಕಿಳಿಸುವ ಮಾತೇ ಇಲ್ಲ. ಪಕ್ಷದಿಂದ ಬೇರೆ ಬೇರೆ ಕ್ಷೇತ್ರದಲ್ಲಿ ನಾಲ್ಕು ಮಹಿಳೆಯರಿಗೆ ಟಿಕೆಟ್ ನೀಡಿದ್ದೇವೆ. ಈಗಾಗಲೇ ಏನು ಹೇಳಬೇಕೋ ಅದನ್ನು ಹೇಳಿಯಾಗಿದೆ. ಪದೇ ಪದೇ ಸಮಜಾಯಿಷಿ ಕೊಡಬೇಕಾಗಿಲ್ಲ. ಯಾರೋ ನಾಲ್ವರು ಹೇಳಿದ್ರೆ ಟಿಕೆಟ್ ಕೊಡಬೇಕೆಂದಿಲ್ಲ’ ಎಂದಿದ್ದಾರೆ.
ಇತ್ತೀಚೆಗೆ ಭವಾನಿ ರೇವಣ್ಣನವರು ಕಾರ್ಯಕ್ರಮವೊಂದರಲ್ಲಿ ನಾನೇ ಹಾಸನದ ಜೆಡಿಎಸ್ ಅಭ್ಯರ್ಥಿ, ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿ ಎಂದಿದ್ದರು. ಇದರ ಕುರಿತು ಸಾಕಷ್ಟು ಚರ್ಚೆಗಳು ಆಗಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ನಾಯಕ ಕುಮಾರಸ್ವಾಮಿ, ಅಭ್ಯರ್ಥಿಗಳ ಹಂಚಿಕೆಯನ್ನು ಪಕ್ಷ ಮಾಡುತ್ತದೆ. ಪಕ್ಷದ ತೀರ್ಮಾನವೇ ಅಂತಿಮ ತೀರ್ಮಾನ ಎಂದಿದ್ದರು.
ಈ ಎಲ್ಲಾ ಚರ್ಚೆಗಳಿಂದ ದೇವೇಗೌಡರ ಮುಂದೆಯೇ ಭವಾನಿಯವರ ಸ್ಪರ್ಧೆಯ ಕುರಿತು ಅಂತಿಮಗೊಳಿಸುವ ನಿರ್ಧಾರ ಆಗಲಿದೆ ಎನ್ನಲಾಗಿತ್ತು. ಆದರೆ ಕುಮಾರಸ್ವಾಮಿ ಎಲ್ಲಿ ಹೋದರೂ ಮಾಧ್ಯಮದವರು ಈ ಪ್ರಶ್ನೆಗಳನ್ನು ಕೇಳುತ್ತಿದ್ದರು. ಹೀಗಾಗಿ ಉತ್ತರಿ ಉತ್ತರಿಸಿ ರೋಸಿ ಹೋಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಟಿಕೆಟ್ ನೀಡುವುದಿಲ್ಲ ಎಂದು ಹೇಳಿ ಕುತೂಹಲ, ಅನುಮಾನಗಳಿಗೆ ತೆರೆ ಎಳೆದಿದ್ದಾರೆ.