ಕಾಂಗ್ರೆಸ್ಸಿನ ‘ಗೃಹಲಕ್ಷ್ಮೀ’ ಯೋಜನೆಗೆ ಸೆಡ್ಡು ಹೊಡೆದ ಬಿಜೆಪಿ! ‘ಗೃಹಿಣಿ ಶಕ್ತಿ’ ಯೋಜನೆಯಡಿ BPL ಕುಟುಂಬಗಳಿಗೆ 2000 ಕೊಡುವುದಾಗಿ ಘೋಷಣೆ!
ವಿಧಾನಸಭೆಯ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಭಾರೀ ಕಸರತ್ತು ನಡೆಸುತ್ತಿವೆ. ಇದೀಗ ಭರವಸೆ ಹಾಗೂ ಕೊಡುಗೆಗಳ ಘೋಷಣೆಯನ್ನು ಕೂಡ ಸವಾಲೆಂಬಂತೆ ಘೋಷಿಸಿಕೊಳ್ಳುತ್ತಿವೆ. ಮುಂದಿನ ಚುನಾವಣೆಯಲ್ಲಿ ಗೆಲುವು ಪಡೆದು ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಓರ್ವ ಮಹಿಳೆಗೆ 2 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ. ಇದರ ನಡುವೆ ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರ ಪ್ರತಿ ಬಿಪಿಎಲ್ ಕುಟುಂಬಕ್ಕೂ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲು ನಿರ್ಧಾರ ಮಾಡಿದೆಯಂತೆ.
ಈ ಕುರಿತು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಮಾಧ್ಯಮಗಳಿಗೆ ಮಾಹಿತಿ ನೀಡಿ ಕಲಬುರಗಿಯ ಮಾಚನಾಳ ತಾಂಡಾದಲ್ಲಿ ಮಾತನಾಡಿದ್ದಾರೆ. ರಾಜ್ಯ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 2 ಸಾವಿರ ರೂಪಾಯಿ ನೆರವು ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಬಗ್ಗೆ ಮುಂಬರುವ ಬಜೆಟ್ನಲ್ಲಿ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಅವರ ಹೇಳಿಕೆ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಗೃಹಿಣಿ ಶಕ್ತಿ ಯೋಜನೆ ಅಡಿಯಲ್ಲಿ 2000 ರೂ ನೀಡಲು ಸಿದ್ಧತೆ ನಡೆಸಲಾಗುತ್ತಿದೆ, ಈಗಾಗಲೇ ಅಸ್ಸಾಂ ಸರ್ಕಾರ ಇದೇ ರೀತಿಯ ಯೋಜನೆಯನ್ನು ಜಾರಿಗೆ ತಂದಿದ್ದು, ಅದನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಹೇಳಿದರು.
ಯೋಜನೆಗೆ ಗೃಹಿಣಿ ಶಕ್ತಿ ಎಂಬ ಹೆಸರನ್ನು ನೀಡಲಾಗಿದೆ. ಯೋಜನೆಯನ್ನು ಅಂತಿಮಗೊಳಿಸಲು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ರಾಜ್ಯ ಸರಕಾರ ಬಡ ಕುಟುಂಬಗಳಿಗೆ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ, ಆರೋಗ್ಯ ಕಾಪಾಡಲು ಈಗಾಗಲೇ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಇದರೊಂದಿಗೆ “ಗೃಹಿಣಿ ಶಕ್ತಿ’ ಯೋಜನೆ ಜಾರಿ ಮಾಡಿದಲ್ಲಿ ಬಡಕುಟುಂಬಗಳಿಗೆ ಸಹಾಯ ಮಾಡಿದಂತಾಗುತ್ತದೆ. ಅಸ್ಸಾಂ ಸರ್ಕಾರವು ಈಗಾಗಲೇ ಇದೇ ರೀತಿಯ ಯೋಜನೆಯನ್ನು ಜಾರಿಗೆ ತಂದಿದೆ, ಅದನ್ನು ಅಧ್ಯಯನ ಮಾಡಿ ರಾಜ್ಯದಲ್ಲಿ ಜಾರಿಗೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಗೆಲುವಿನ ಆಸೆಯೊಂದಿಗೆ ಏನೇ ಹೊಸ ಯೋಜನೆಗಳನ್ನು ತಂದರೂ ಬಿಜೆಪಿ ಅದಕ್ಕೆ ಟಕ್ಕರ್ ಕೊಡುತ್ತಿದೆ. ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವದಾಗಿ ಕಾಂಗ್ರೆಸ್ ಘೋಷಿಸಿದ ಕೂಡಲೆ ಜಿಜೆಪಿಯು BPL ಕಾರ್ಡ್ ಹೊಂದಿರುವವರಿಗೆ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿತು. ಬಳಿಕ ಕಾಂಗ್ರೆಸ್, ಪ್ರತೀ ಕುಟುಂಬದ ಒಬ್ಬ ಹೆಣ್ಣು ಮಗಳಿಗೆ ಮಾಸಿಕವಾಗಿ 2000 ಕೊಡುವುದಾಗಿ ಘೋಷಿಸಿತು. ಆದರೀಗ ಇದರ ಬೆನ್ನಲ್ಲೇ ಬಿಜೆಪಿಯು ಕೂಡ ತಾನೂ ಕೊಡುವುದಾಗಿ ಹೇಳಿದೆ.