ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡ್ತೀವಿ! ಚುನಾವಣೆ ಬೆನ್ನಲ್ಲೇ ಎಚ್ ಡಿ ಕುಮಾರಸ್ವಾಮಿ ಘೋಷಣೆ! ಯಾಕೆ, ಯಾವಾಗ ಗೊತ್ತಾ?

ಚುನಾವಣೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಹಾಗೂ ಬಿಜೆಪಿ ಪಾರ್ಟಿಗಳು ಭರ್ಜರಿಯಾಗಿ ಪ್ರಚಾರವನ್ನು ಕೈಗೊಂಡಿವೆ. ಆದರೆ ಇವೆರಡರ ನಡುವೆ ಜೆಡಿಎಸ್ ನ ಪ್ರಚಾರದ ಅಬ್ಬರ ಸ್ವಲ್ಪ ಕಡಿಮೆ ಆಗಿದೆಯೇನೋ ಅನಿಸುತ್ತದೆ. ಪಂಚರತ್ನ ಯಾತ್ರೆಯ ಮೂಲಕ ಆಗಾಗ ಮಾತ್ರ ಸದ್ದು ಮಾಡುವ ಜೆಡಿಎಸ್ ಪಕ್ಷಕ್ಕೆ ಈ ಸಲವೂ ನಾವೇ ಕಿಂಗ್ ಮೇಕರ್ ಆಗಬಹುದೆಂಬ ಸುಳಿವೇನಾದರೂ ಸಿಕ್ಕಿದೆಯಾ? ಕರ್ನಾಟಕದ ಜನತೆ ಮತ್ತೊಮ್ಮೆ ಅತಂತ್ರದ ಫಲಿತಾಂಶವನ್ನು ನೀಡುತ್ತಾರಾ ಎಂದು ಅನಿಸಿಯೂ ಇರಬಹುದು! ಅದೇನೆ ಇರಲಿ ಈ ನಡುವೆ ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಮ್ಮ ಪಕ್ಷದ ಕುರಿತು ಹೇಳಿದ ಹೇಳಿಕೆ ಸಾಕಷ್ಟು ಸುದ್ದಿಯಾಗುತ್ತಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪಂಚರತ್ನ ರಥಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡುವ ವೇಳೆ ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದ ಈ ಹೇಳಿಕೆ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ರಾಜ್ಯದಲ್ಲಿ ಈ ಬಾರಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರದಿದ್ದರೆ, 2028ರ ರಾಜ್ಯ ವಿಧಾನಸಭೆಯ ವೇಳೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನಾನು ನಿನ್ನ ಮುಂದೆ ಬಂದು ಮತವನ್ನು ಕೇಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾವುಕರಾಗಿ ನುಡಿದಿದ್ದಾರೆ.

ಪೂರ್ಣಪ್ರಮಾಣದಲ್ಲಿ ಅಧಿಕಾರ ಕೊಟ್ಟರೆ ಮಾತಿಗೆ ತಪ್ಪದೆ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಒಂದು ವೇಳೆ ಜೆಡಿಎಸ್​ ಅಧಿಕಾರಕ್ಕೆ ಬಂದು ಒಳ್ಳೆಯ ಕಾರ್ಯಕ್ರಮಗಳನ್ನು ನೀಡುವಲ್ಲಿ ನಾನೇನಾದರೂ ವಿಫಲನಾದರೆ 2028ಕ್ಕೆ ಜೆಡಿಎಸ್​ ಪಕ್ಷವನ್ನು ವಿಸರ್ಜಿಸುತ್ತೇನೆ. ಮುಂದೆ ನಿಮ್ಮ ಬಳಿ ಬಂದು ಮತ ಕೇಳುವುದಿಲ್ಲ ಎಂದು ಕಣ್ತುಂಬಿಕೊಂಡರು.

ಬಳಿಕ ಮಿತನಾಡಿದ ಅವರು ‘ನಮ್ಮ ತಪ್ಪಿನಿಂದ ಕಳೆದ ಚುನಾವಣೆಯಲ್ಲಿ ಸೋಲು ಕಂಡೆವು. ಆದರೂ ದೇವೇಗೌಡರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದೀರಿ. ದೇವೇಗೌಡರ ಮೇಲೆ ನೀವು ಇಟ್ಟಿರುವ ಪ್ರೀತಿಯನ್ನು ನಾನು ಮರೆತಿಲ್ಲ. ಜೆಡಿಎಸ್​ ಯೋಜಿಸಿರುವ ಪಂಚರತ್ನ ಯೋಜನೆಗಳ ಬಗ್ಗೆ ಮಾತನಾಡಲು ಕನಿಷ್ಠ ಮೂರ್ನಾಲ್ಕು ಗಂಟೆಗಳಾದರು ಬೇಕು. ಪಂಚರತ್ನ ಯೋಜನೆಗೆ ಯಾವುದೇ ಜಾತಿ-ಧರ್ಮ ಇಲ್ಲ. ನಮ್ಮ 5 ಕಾರ್ಯಕ್ರಮಗಳು ಜಾರಿಯಾದರೆ ನಮ್ಮ ರಾಜ್ಯ ರಾಮರಾಜ್ಯವಾಗುತ್ತದೆ. ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಇಂತಹ ಕಾರ್ಯಕ್ರಮಗಳನ್ನು ಜಾರಿ ಮಾಡುವುದಕ್ಕೆ ಸಾಧ್ಯವಿಲ್ಲ. ಬಿಜೆಪಿ ಜನರ ತೆರಿಗೆ ಹಣ ಲೂಟಿ ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ರೈತರು ಸೇರಿ ಎಲ್ಲ ವರ್ಗದ ಜನರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಇಂಗ್ಲೀಷ್‌ ಸೇರಿ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗುತ್ತಿದ್ದಾರೆ. ಆದರೆ, ಇದಕ್ಕಾಗಿ ಗ್ರಾಮೀಣ ಭಾಗದಲ್ಲಿ ಜನರು ಸಾಲ ಮಾಡುತ್ತಿದ್ದಾರೆ. ಮುಂದಿನ ಬಾರಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಶಾಲೆ ನಿರ್ಮಾಣ ಮಾಡಲಾಗುತ್ತದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೂ ಹಣ ಕೂಡಲಾಗುತ್ತಿಲ್ಲ. ಹೀಗಾಗಿ, ಪ್ರತಿ ಗ್ರಾಮ ಪಂಚಾಯಿತಿಗೆ 36 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ತಜ್ಞ ವೈದ್ಯರನ್ನು ಈ ಆಸ್ಪತ್ರೆಗಳಿಗೆ ನೇಮಕ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ದೇಶದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಹೇಳುತ್ತಾರೆ. ಆದರೆ, ಅವರು ಎಲ್ಲ ಕಾಮಗಾರಿಗಳಲ್ಲಿ, ಸರ್ಕಾರದ ಯೋಜನೆಗಳಲ್ಲಿ ಶೇ. 40 ರಿಂದ ಶೇ. 50 ಕಮೀಷನ್‌ ತಿಂದಿರೋದನ್ನ ಪ್ರಸ್ತಾಪಿಸಲ್ಲ. ತಿಂದದ್ದು ತಿಂದು ಆಗಿ ಹೋಯ್ತು. ಆದರೆ, ಈಗಲಾದರೂ ಜೆಡಿಎಸ್‌ಗೆ ಸಂಪೂರ್ಣ ಬೆಂಬಲವನ್ನು ನೀಡಿ ಒಟ್ಟು 5 ವರ್ಷದ ಆಡಳಿತ ಕೊಡಿ. ನಮ್ಮ ಪಕ್ಷವನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಸಾಲಮನ್ನಾ ಮಾಡಿದ್ದೇನೆ. ಸಿಂದಗಿಯಲ್ಲೆ ನೂರು ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಸಾಲ ಮನ್ನಾ ಯೋಜನೆಯ ಫಲಾನುಭವಿ ರೈತರು ಪಕ್ಷದ ಕೈಹಿಡಿಯಿರಿ ಎಂದು ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

Leave A Reply

Your email address will not be published.