ಜೈನ ದೀಕ್ಷೆ ಪಡೆಯುತ್ತಿದ್ದಾಳೆ ಗುಜರಾತಿನ ಶ್ರೀಮಂತ ವಜ್ರದ ವ್ಯಾಪಾರಿಯ 9 ವರ್ಷದ ಪುಟಾಣಿ!

ಆಕೆ ವಜ್ರ ವ್ಯಾಪಾರ ಮಾಡುವ ಕೋಟ್ಯಧಿಪತಿಯ ಮುದ್ದು ಮಗಳು. ಆಟ ಆಡಿಕೊಂಡು, ಓದಿಕೊಂಡು, ಕುಣಿದುಕೊಂಡಿರಬೇಕಾದ ವಯಸ್ಸು ಅವಳದು. ಆಕೆ ಮನಸ್ಸು ಮಾಡಿದ್ದರೆ ಮುಂದಿನ 10-15 ವರ್ಷಗಳಲ್ಲಿ ಭಾರತದ ಪ್ರಮುಖ ನಗರಗಳಲ್ಲೆಲ್ಲ ಇರುವ ತಂದೆಯ ನೂರಾರು ಕೋಟಿಯ ವಜ್ರದ ಬಿಸ್ನೆಸ್‌ನ ಅಧಿಪತಿಯಾಗಿ ಮೆರೆಯಬಹುದಿತ್ತು. ಆದರೆ ಈ ಪುಟ್ಟ ಬಾಲಕಿಯ ಮನಸ್ಸು ಇವೆಲ್ಲವನ್ನು ತ್ಯಜಿಸಿ, ಅರಸಿ ಹೊರಟಿದ್ದೇ ಬೇರೆಯ ಜೀವನವನ್ನು!

ಇದುವರೆಗೂ ತಂದೆಯ ಐಶಾರಾಮಿ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಆಕೆ ಇನ್ನು ಮುಂದೆ ಬರಿಗಾಲಿನಲ್ಲಿ ನಡೆದಾಟವನ್ನಷ್ಟೇ ಮಾಡಬಹುದು, ಬ್ರ್ಯಾಂಡೆಂಡ್ ಬಟ್ಟೆಗಳನ್ನು ಧರಿಸುತ್ತಿದ್ದ ಆಕೆ ಅವನ್ನೆಲ್ಲ ದೂರವಿರಿಸಿ, ಬಿಳಿಯ ನೂಲಿನ ವಸ್ತ್ರ ಮಾತ್ರ ಧರಿಸಬಹುದು. ಬೇಕು ಬೇಕಾದ್ದನ್ನೆಲ್ಲ ಬೇಕಾದ ರೆಸ್ಟೋರೆಂಟ್‌ನಲ್ಲಿ ಕೊಡಿಸಿಕೊಂಡು ತಿನ್ನುತ್ತಿದ್ದ ಆಕೆ ಇನ್ನು ಕೇವಲ ಭಿಕ್ಷೆಯಾಗಿ ಸಿಕ್ಕ ಆಹಾರವನ್ನು ಮಾತ್ರ ಸ್ವೀಕರಿಸಬೇಕು!

ಹೌದು, ಗುಜರಾತ್‌ನ ಶ್ರೀಮಂತ ವಜ್ರದ ವ್ಯಾಪಾರಿಯ ಒಂಬತ್ತು ವರ್ಷದ ಮಗಳು ಜೈನ ಸನ್ಯಾಸವನ್ನು ಸ್ವೀಕರಿಸಿದ್ದಾಳೆ. ಇಹ ಲೋಕದ ಸಕಲ ಶ್ರೀಮಂತಿಕೆಯನ್ನು ತ್ಯಜಿಸಿ, ಧನೇಶ್ ಮತ್ತು ಅಮಿ ಸಾಂಘ್ವಿ ಅವರ ಹಿರಿಯ ಪುತ್ರಿ ದೇವಾಂಶಿ ಜೈನ ಸನ್ಯಾಸಿನಿಯಾಗುವ ಮೂಲಕ ಅಪರೂಪದ ಘಟನೆಗೆ ಕಾರಣ ಆಗಿದ್ದಾಳೆ. ಈ ಸುದ್ದಿಯು ಜೈನ ಸಮುದಾಯದಲ್ಲಿ ವಜ್ರದ ವ್ಯಾಪಾರಿಗಳಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ.

ಸೂರತ್‌ನ ವೆಸು ಪ್ರದೇಶದ ಸ್ಥಳದಲ್ಲಿ ಜೈನ ಸನ್ಯಾಸಿ ಆಚಾರ್ಯ ವಿಜಯ್ ಕೀರ್ತಿಶ್ಸೂರಿ ಮತ್ತು ನೂರಾರು ಜನರ ಸಮ್ಮುಖದಲ್ಲಿ ಆಕೆ ‘ದೀಕ್ಷೆ’ ತೆಗೆದುಕೊಂಡಿದ್ದು, ಆಕೆಯ ತಂದೆ ಸೂರತ್‌ನಲ್ಲಿ ಸುಮಾರು ಮೂರು ದಶಕಗಳಷ್ಟು ಹಳೆಯದಾದ ವಜ್ರ ಪಾಲಿಶಿಂಗ್ ಮತ್ತು ರಫ್ತು ಸಂಸ್ಥೆಯಾದ ಸಾಂಘ್ವಿ ಅಂಡ್ ಸನ್ಸ್‌ನ ಮಾಲೀಕರಾಗಿದ್ದಾರೆ. ಬೆಲ್ಜಿಯಂ ದೇಶದ ಜತೆ ದೊಡ್ಡ ಮಟ್ಟದ ವ್ಯಾಪಾರ ನಡೆಸುತ್ತಿರುವ ಕುಟುಂಬ ಅದು. ಸಕಲ ವೈಭೋಗದಿಂದ ಜೀವಿಸಬಹುದಾದ ಆಕೆ ಎಲ್ಲವನ್ನೂ ಬದಿಗೆ ಸರಿಸಿ ವಜ್ರದ ವ್ಯಾಪಾರಿಗಳ ಕುಟುಂಬವು ತನಗೆ ಒದಗಿಸಬಹುದಾದ ಎಲ್ಲಾ ಭೌತಿಕ ಸೌಕರ್ಯಗಳು ಮತ್ತು ಐಷಾರಾಮಿಗಳನ್ನು ದೂರವಿಟ್ಟು ಸನ್ಯಾಸ ಜೀವನದ ಬಗ್ಗೆ ಆಸಕ್ತಳಾಗಿ ಹೊರಟಿದ್ದಾಳೆ.

ಕುಟುಂಬದ ಸ್ನೇಹಿತ ನೀರವ್ ಶಾ ಅವರ ಪ್ರಕಾರ, ದೇವಾಂಶಿ ಚಿಕ್ಕ ವಯಸ್ಸಿನಿಂದಲೂ ಆಧ್ಯಾತ್ಮಿಕ ಜೀವನದ ಕಡೆಗೆ ಒಲವು ತೋರಿದ್ದಳು. ಮತ್ತು ಔಪಚಾರಿಕವಾಗಿ ಸನ್ಯಾಸ ದೀಕ್ಷೆ ಪಡೆಯುವ ಮೊದಲು ಇತರ ಸನ್ಯಾಸಿಗಳೊಂದಿಗೆ ಸುಮಾರು 700 ಕಿಮೀ ನಡೆದಿದ್ದರು. ಒಟ್ಟು ಐದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಆಕೆ ಇನ್ನಿತರ ಕೌಶಲ್ಯಗಳನ್ನು ಕೂಡಾ ಹೊಂದಿದ್ದಾಳೆ.

ಸನ್ಯಾಸ ದೀಕ್ಷಾ ಸಮಾರಂಭವು ಕಳೆದ ಶನಿವಾರ ನಡೆದಿದ್ದು, ದೇವಾಂಶಿ ತನ್ನ ‘ದೀಕ್ಷೆ’ ತೆಗೆದುಕೊಳ್ಳುವ ಒಂದು ದಿನದ ಮೊದಲು, ಗುಜರಾತಿನ ಸೂರತ್ ನಗರದಲ್ಲಿ ಧಾರ್ಮಿಕ ಮೆರವಣಿಗೆಯನ್ನು ಸಡಗರದಿಂದ ನಡೆಸಲಾಯಿತು ಎಂದು ಆಕೆಯ ಕುಟುಂಬದ ಮಿತ್ರ ನೀರವ್ ಶಾ ಪಿಟಿಐಗೆ ತಿಳಿಸಿದ್ದಾಗಿ ವರದಿ ಆಗಿದೆ.

Leave A Reply

Your email address will not be published.