ಕ್ರಿಕೆಟ್ ಪ್ರಿಯರಿಗೊಂದು ಸಖತ್ ಗುಡ್ ನ್ಯೂಸ್! ಇನ್ಮುಂದೆ IPL ಲೈವ್ ಪಂದ್ಯಗಳನ್ನು ವೀಕ್ಷಿಸಲು ರೀಚಾರ್ಜ್ ಮಾಡಿಸಬೇಕಿಲ್ಲ!
ಭಾರತದಲ್ಲಿ ನಡೆಯುವ IPL ಪಂದ್ಯಾವಳಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಕ್ರಿಕೆಟ್ ಪ್ರಿಯರಿಗಂತೂ ಈ ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಕ್ರೀಡಾ ಹಬ್ಬವಿದ್ದಂತೆ. ಈ ಸಾಲಿನ IPL ಇನ್ನೇನು ಶೀಘ್ರದಲ್ಲೇ ಆರಂಭವಾಗುತ್ತಿದೆ. ನಮ್ಮ ಸ್ಮಾರ್ಟ್‌ಫೋನಿನಲ್ಲಿ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಲು ಪ್ರತಿ ವರ್ಷದಂತೆ ಈ ವರ್ಷವೂ ಸಹ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ ಪಡೆಯಲು ಹಣ ತೆತ್ತು ರೀಚಾರ್ಜ್ ಮಾಡಿಸಬೇಕು ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯಾ?..ಹಾಗಾದರೆ. ಇನ್ನು ಮುಂದೆ ಈ ಚಿಂತೆ ಬಿಡಿ.
ಹೌದು, 2023ರ ಐಪಿಎಲ್ ಕ್ರೀಡಾಕೂಡವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ಉಚಿತವಾಗಿ ಪ್ರಸಾರ ಮಾಡಲಾಗುತ್ತದೆ ಎಂಬ ಸಿಹಿಸುದ್ದಿ ದೊರೆತಿದೆ.! 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16ನೇ ಡಿಜಿಟಲ್ ಲೈವ್ ಸ್ಟ್ರೀಮ್ ಹಕ್ಕನ್ನು ಹೊಂದಿರುವ ರಿಲಯನ್ಸ್ ಜಿಯೋ ಸಂಸ್ಥೆಯು ಎಲ್ಲಾ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಫಿಫಾ ವಿಶ್ವಕಪ್ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡುವ ಮೂಲಕ ದೇಶದಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೆಚ್ಚಿಸಿಕೊಂಡ ಜಿಯೋ ಸಂಸ್ಥೆ, ಇದೇ ರೀತಿಯ ತಂತ್ರವನ್ನು ಐಪಿಎಲ್ ಪಂದ್ಯಗಳಿಗೂ ವಿಸ್ತರಿಸಲು ಪ್ಲ್ಯಾನ್ ರೂಪಿಸಿದೆ. ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಫಿಫಾ ವಿಶ್ವಕಪ್ ಲೈವ್ ಸ್ಟ್ರೀಮ್ ಮೆಗಾ ಯಶಸ್ಸಿನ ನಂತರ, ಇದೀಗ ಐಪಿಎಲ್ ಪಂದ್ಯಗಳನ್ನು ಸಹ ಉಚಿತವಾಗಿ ಪ್ರಸಾರ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿದೆ.
2022ರ ಕತಾರ್ ಫಿಫಾ ವಿಶ್ವಕಪ್ ಕ್ರೀಡಾಕೂಟದ ಪರಿಣಾಮವಾಗಿ ಜಿಯೋ ಒಡೆತನದ ಜಿಯೋ ಸಿನಿಮಾ ಅಪ್ಲಿಕೇಶನ್ ದೇಶದಲ್ಲಿ ಇತಿಹಾಸ ಸೃಷ್ಟಿಸಿತ್ತು. ದೇಶದಲ್ಲಿ ಗೂಗಲ್ ಪ್ಲೇ ಮತ್ತು ಆಪಲ್ ಆಪ್ ಸ್ಟೋರ್‌ಗಳ ಮೂಲಕ ಅತಿ ಹೆಚ್ಚು ಡೌನ್ಲೋಡ್ ಮಾಡಿಕೊಂಡ ಉಚಿತ ಅಪ್ಲಿಕೇಶನ್‌ಗಳಲ್ಲಿ ನಂ.1 ಅಪ್ಲಿಕೇಶನ್ ಎಂಬ ಖ್ಯಾತಿ ಜಿಯೋ ಸಿನಿಮಾ ಅಪ್ಲಿಕೇಶನ್ ಪಾಲಾಗಿತ್ತು. ಅಪ್ಲಿಕೇಶನ್‌ಗಳ ಬಗ್ಗೆ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಜನಪ್ರಿಯ ಸಂಸ್ಥೆ ಆಪ್ ಅನ್ನಿ ಪ್ರಕಾರ, ಕಳೆದ ನವೆಂಬರ್ ತಿಂಗಳಿನಲ್ಲಿ ಎಂಟರ್ಟೈನ್ಮೆಂಟ್ ವಿಭಾಗದಲ್ಲಿನ ಒಟ್ಟು ಅಪ್ಲಿಕೇಶನ್‌ಗಳಲ್ಲಿ ಶೇಕಡಾ 29% ರಷ್ಟು ಜಿಯೋ ಸಿನಿಮಾ ಅಪ್ಲಿಕೇಷನ್‌ನನ್ನೇ ಡೌನ್ಲೋಡ್ ಮಾಡಲಾಗಿದೆ. ಇಷ್ಟೇ ಅಲ್ಲದೇ, 2022ರ ವರ್ಷದಲ್ಲಿ ಅತೀ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಅಪ್ಲಿಕೇಶನ್ ಎಂದರೆ ಅದು ಜಿಯೋ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ರಿಲಯನ್ಸ್ ಜಿಯೋ ಕಂಪೆನಿಯು ಜಿಯೋ ಸಿನೆಮಾ ಅಪ್ಲಿಕೇಶನ್ ಮೂಲಕ ಲೈವ್ ಸ್ಪೋರ್ಟ್ಸ್ ಸ್ಟ್ರೀಮಿಂಗ್ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಮುಂದಾಗಿದೆ. ಇದರ ಸಲುವಾಗಿ ಇದೇ ಮೊದಲ ಬಾರಿಗೆ ಐಪಿಎಲ್ ಕ್ರೀಡಾಕೂಟವನ್ನು ಪ್ರಸಾರ ಮಾಡಲು ಡಿಜಿಟಲ್ ಹಕ್ಕುಗಳನ್ನು ಪಡೆದಿರು ರಿಲಯನ್ಸ್ ಜಿಯೋ ತನ್ನ ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ಇಡೀ ಸೀಸನ್ ಅನ್ನು ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲು ಯೋಚಿಸುತ್ತಿದೆ ಎಂದು ವರದಿಯಾಗಿದೆ.
ಅಲ್ಲದೆ ಐಪಿಎಲ್ 2023-2027 ನಡುವಣ ಡಿಜಿಟಲ್ ಮಾಧ್ಯಮ ಹಕ್ಕುಗಳನ್ನು 23,758 ಕೋಟಿ ರೂ.ಗೆ ಖರೀದಿಸಿದೆ. ಡಿಜಿಟಲ್ ಪ್ರಸಾರಕ್ಕಾಗಿ ಪ್ರತಿ ಪಂದ್ಯವೊಂದಕ್ಕೆ 50 ಕೋಟಿ ರೂ.ಗೂ ಹೆಚ್ಚು ಪಾವತಿಸುತ್ತಿರುವ ಜಿಯೋ ಸಂಸ್ಥೆ ನಿಜವಾಗಿಯೂ ಉಚಿತವಾಗಿ ಪ್ರಸಾರ ಮಾಡಲಿದೆಯಾ ಎಂಬ ಪ್ರಶ್ನೆ ಕೂಡ ಮೂಡಿದೆ. ಆದರೆ, ಜಾಹೀರಾತುಗಳ ಆದಾಯ ಮತ್ತು ಭವಿಷ್ಯದಲ್ಲಿ ವ್ಯಾಪಕವಾಗಿ ಜಿಯೋ ಸೇವೆಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ಉಚಿತವಾಗಿ ಒದಗಿಸಬಹುದು.