ಮುಸ್ಲಿಮರಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಲು ಮೋಹನ್ ಭಾಗವತ್ ಯಾರು: ಅಸಾದುದ್ದೀನ್ ಓವೈಸಿ? ಹಿಂದೂಸ್ಥಾನ ಹಿಂದೂಸ್ಥಾನವಾಗಿ ಉಳಿಯಬೇಕೆಂದ ಆರ್‌ಎಸ್‌ಎಸ್ ಮುಖ್ಯಸ್ಥರ ವಿರುದ್ಧ ಭಾರೀ ಆಕ್ರೋಶ

ಹಿಂದೂ-ಮುಸ್ಲಿಂ ವಿಚಾರವಾಗಿ ಎರಡೂ ಧರ್ಮಗಳಗಳ ನಾಯಕರ ನಡುವೆ ಯಾವಾಗಲೂ ವಾದ ವಿವಾದಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಮುಖ್ಯವಾಗಿ ಆರ್‌ಎಸ್‌ಎಸ್ ನ ರಾಷ್ಟ್ರೀಯ ಸರಸಂಘಚಾಲಕ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಈ ಇಬ್ಬರೂ ನಾಯಕರು ಈ ವಿಷಯಕ್ಕೆ ಸಂಬಂಧಿಸಿ ಮುಸುಕಿನ ಗುದ್ದಾಟ ನಡೆಸಿ ಸದಾ ಸುದ್ಧಿಯಲ್ಲಿರುತ್ತಾರೆ. ಇದೀಗ ಇಂತಹದೇ ವಿಚಾರವೊಂದನ್ನು ಮುಂದಿಟ್ಟುಕೊಂಡು ಮೋಹನ್ ಭಾಗವತ್ ಮೇಲೆ ಅಸಾದುದ್ದೀನ್ ಓವೈಸಿ ಖಾರವಾದ ಆರೋಪಗಳೊಂದಿಗೆ ಟೀಕಾಪ್ರಹಾರವನ್ನೂ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮೋಹನ್ ಭಾಗವತರು ಮುಸ್ಲಿಮರ ಕುರಿತು ನೀಡಿದ ಹೇಳಿಕೆಯನ್ನು ಗಮನಿಸಿದ ಅಸಾದುದ್ದೀನ್ ಓವೈಸಿ ಅವರು ‘ಮುಸ್ಲಿಮರಿಗೆ ಭಾರತದಲ್ಲಿ ವಾಸಿಸಲು ಅಥವಾ ನಮ್ಮ ನಂಬಿಕೆಯನ್ನು ನಾವು ಅನುಸರಿಸಲು ಅನುಮತಿ ನೀಡಲು ಮೋಹನ್ ಯಾರು? ಅಲ್ಲಾಹನ ಇಚ್ಛೆಯಿಂದ ನಾವು ಭಾರತೀಯರು. ನಮ್ಮ ಪೌರತ್ವದ ಮೇಲೆ ಷರತ್ತುಗಳನ್ನು ಹಾಕಲು ಅವರಿಗೆಷ್ಟು ಧೈರ್ಯ? ಎಂದು ಪ್ರಶ್ನಿಸುವುದರೊಂದಿಗೆ ‘ನಮ್ಮ ಮೇಲೆ ನಂಬಿಕೆಯನ್ನು ಸಂಪಾದಿಸುವುದಕ್ಕಾಗಲಿ ಅಥವಾ ನಾಗ್ಪುರದಲ್ಲಿ ಆಪಾದಿತ ಬ್ರಹ್ಮಚಾರಿಗಳ ಗುಂಪನ್ನು ಮೆಚ್ಚಿಸುವ ಸಲುವಗಾಗಲಿ ನಾವು ಇಲ್ಲಿಲ್ಲ’ ಎಂದು ಮಾತಿನಲ್ಲಿ ತಿವಿಯುವುದರ ಮೂಲಕ ಟ್ವೀಟ್ ಮಾಡಿದ್ದಾರೆ.

ನಿನ್ನೆ ದಿನ ಆರ್ಗನೈಸರ್ ಮತ್ತು ಪಾಂಚಜನ್ಯಕ್ಕೆ ಸಂಘದ ಕುರಿತು ನೀಡಿದ ಸಂದರ್ಶನದಲ್ಲಿ ಭಾಗವತ್ ಅವರು “ಸರಳ ಸತ್ಯವೆಂದರೆ ಇದು, ಹಿಂದೂಸ್ಥಾನವು ಹಿಂದೂಸ್ಥಾನವಾಗಿ ಉಳಿಯಬೇಕು. ಇಂದು ಭಾರತದಲ್ಲಿ ವಾಸಿಸುವ ಮುಸ್ಲಿಮರಿಗೆ ಯಾವುದೇ ಹಾನಿ ಇಲ್ಲ. ಭಾರತದಲ್ಲಿ ಮುಸ್ಲಿಮರು ಭಯಪಡುವ ಅಗತ್ಯವೂ ಇಲ್ಲ, ಆದರೆ ಅವರು ತಮ್ಮ ಆಧಿಪತ್ಯದ ಅಬ್ಬರದ ವಾಕ್ಚಾತುರ್ಯವನ್ನು ತ್ಯಜಿಸಬೇಕು ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು ‘ನಾವು ಉತ್ಕೃಷ್ಟ ಜನಾಂಗದವರು, ನಾವು ಒಮ್ಮೆ ಈ ಭೂಮಿಯನ್ನು ಆಳಿದ್ದೇವೆ ಮತ್ತು ಅದನ್ನು ಮತ್ತೊಮ್ಮೆ ಆಳುತ್ತೇವೆ. ನಮ್ಮ ದಾರಿ ಮಾತ್ರ ಸರಿ, ಉಳಿದವರೆಲ್ಲರೂ ತಪ್ಪು,ನಾವು ವಿಭಿನ್ನವಾಗಿದ್ದೇವೆ. ಆದ್ದರಿಂದ ನಾವು ಹಾಗೆ ಮುಂದುವರಿಯುತ್ತೇವೆ. ನಾವು ಒಟ್ಟಿಗೆ ಬದುಕಲು ಸಾಧ್ಯವಿಲ್ಲ. ಎಂಬಂತಹ ನಿಲುವನ್ನು ಅವರು (ಮುಸ್ಲಿಮರು) ತ್ಯಜಿಸಬೇಕು. ವಾಸ್ತವವಾಗಿ, ಹಿಂದೂ ಅಥವಾ ಕಮ್ಯುನಿಸ್ಟ್ ಆಗಿರಲಿ ಇಲ್ಲಿ ವಾಸಿಸುವ ಎಲ್ಲರೂ ಈ ತರ್ಕವನ್ನು ತ್ಯಜಿಸಬೇಕು. ಹಿಂದೂ ಸಮಾಜವು 1,000 ವರ್ಷಗಳಿಂದ ಯುದ್ಧದಲ್ಲಿದೆ – ಈ ಹೋರಾಟವು ವಿದೇಶಿ ಆಕ್ರಮಣಗಳು, ವಿದೇಶಿ ಪ್ರಭಾವಗಳು ಮತ್ತು ವಿದೇಶಿ ಪಿತೂರಿಗಳ ವಿರುದ್ಧ ನಡೆಯುತ್ತಿದೆ. ಸಂಘವು ಈ ಕಾರಣಕ್ಕೆ ತನ್ನ ಬೆಂಬಲವನ್ನು ನೀಡಿದೆ, ಹಾಗೆಯೇ ಇತರರೂ ಸಹ ನೀಡಬೇಕು’ ಎಂದರು

ಮುಂದೆ ಸಂಘಪರಿವಾರದ ಕುರಿತು ಮಾತನಾಡಿ ‘ಸಂಘವನ್ನು ಮೊದಲು ತಿರಸ್ಕಾರದಿಂದ ನೋಡುತ್ತಿದ್ದರು, ಆದರೆ ಆ ದಿನಗಳು ಈಗ ಮುಗಿದಿವೆ. ನಾವು ರಸ್ತೆಯಲ್ಲಿ ಮೊದಲು ಎದುರಿಸಿದ ಮುಳ್ಳುಗಳು ತಮ್ಮ ಪಾತ್ರವನ್ನು ಬದಲಾಯಿಸಿವೆ. ಹಿಂದೆ ನಾವು ವಿರೋಧ ಮತ್ತು ತಿರಸ್ಕಾರದ ಮುಳ್ಳುಗಳನ್ನು ಧೈರ್ಯದಿಂದ ಎದುರಿಸಬೇಕಾಗಿತ್ತು ಹಾಗೂ ಅವು ತಪ್ಪಿಸಬಹುದಾದವುಗಳಾಗಿದ್ದವು ಮತ್ತು ಕೆಲವೊಮ್ಮೆ ನಾವು ಅವುಗಳನ್ನು ತಪ್ಪಿಸಿದ್ದೇವೆ’ ಎಂದರು.

ಸಾಂಸ್ಕೃತಿಕ ಸಂಘಟನೆಯಾಗಿದ್ದರೂ ರಾಜಕೀಯ ವಿಷಯಗಳೊಂದಿಗೆ ಆರ್‌ಎಸ್‌ಎಸ್ ತೊಡಗಿಸಿಕೊಂಡಿರುವ ಕುರಿತು ಭಾಗವತ್ ‘ಸಂಘವು ಪ್ರಜ್ಞಾಪೂರ್ವಕವಾಗಿ ತನ್ನನ್ನು ದಿನನಿತ್ಯದ ರಾಜಕೀಯದಿಂದ ದೂರವಿಟ್ಟಿದೆ. ಆದರೆ ಯಾವಾಗಲೂ ನಮ್ಮ ರಾಷ್ಟ್ರೀಯ ನೀತಿಗಳು, ರಾಷ್ಟ್ರೀಯ ಹಿತಾಸಕ್ತಿ ಮತ್ತು ಹಿಂದೂ ಹಿತಾಸಕ್ತಿ ಮೇಲೆ ಪರಿಣಾಮ ಬೀರುವ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ’ ಎಂದು ಹೇಳಿದರು.

ಮುಸ್ಲಿಮರ ವಿರುದ್ಧ ಮೋಹನ್ ಭಾಗವತ್ ಅವರ ಹೇಳಿಕೆಗಳು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇಂತಹ ವಿಷಗಳು ಮುನ್ನಲೆಗೆ ಬಂದಾಗ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ವಿರೋಧಿಸುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಈ ಹೇಳಿಕೆಗಳನ್ನು ಇಟ್ಟುಕೊಂಡು ಭಾಗವತರ ಮೇಲೆ ಹಾಗೂ ಪ್ರಧಾನಿ ಮೇಲೆ ಹರಿಹಾಯ್ದಿದ್ದಾರೆ.

‘ಆರ್‌ಎಸ್‌ಎಸ್‌ನ ಶ್ರೇಷ್ಠತೆಯ ಅಬ್ಬರದ ವಾಕ್ಚಾತುರ್ಯವನ್ನು ಅನುಭವಿಸಲು ಸಾಕಷ್ಟು ಹಿಂದೂಗಳಿದ್ದಾರೆ. ಆದರೆ ಭಾರತದ ಪ್ರತಿಯೊಬ್ಬ ಅಲ್ಪಸಂಖ್ಯಾತರು ನಿಮ್ಮ ಈ ಮಾತನ್ನು ಹೇಗೆ ಭಾವಿಸುತ್ತಾರೆ ಎಂಬುದನ್ನು ಗಮನಿಸಿದ್ದೀರಾ? ನಿಮ್ಮ ಸ್ವಂತ ದೇಶದಲ್ಲೇ ವಿಭಜನೆಗಳನ್ನು ನಿರ್ಮಿಸುವಲ್ಲಿ ನೀವು ನಿರತರಾಗಿದ್ದರೆ ನೀವು ಜಗತ್ತಿಗೆ ವಸುಧೈವ ಕುಟುಂಬಕಂ ಎಂದು ಹೇಳಿ ಏನು ಪ್ರಯೋಜನ? ಇನ್ನು ನಿಮಗೆ ಹಾಗೆ ಹೇಳಲು ಸಾಧ್ಯವಿಲ್ಲ ಬಿಡಿ’ ಎಂದು ಕುಟುಕಿದ್ದಾರೆ.

ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು ‘ನಮ್ಮ ಪ್ರಧಾನಿ ಇತರ ದೇಶಗಳ ಎಲ್ಲಾ ಮುಸ್ಲಿಂ ನಾಯಕರನ್ನು ತಬ್ಬಿಕೊಳ್ಳುತ್ತಾರೆ ಆದರೆ ತಮ್ಮ ದೇಶದಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನನ್ನೂ ತಬ್ಬಿಕೊಳ್ಳುವುದನ್ನು ನಾನು ನೋಡೇ ಇಲ್ಲ? ಎಂದು, ಭಾಗವತರದ್ದು ವಾಕ್ಚಾತುರ್ಯ ಮತ್ತು ದ್ವೇಷದ ಭಾಷಣವಲ್ಲದಿದ್ದರೆ ಈ ಜಾಗೃತಿ ಮತ್ತು ಯುದ್ಧದ ವಿಷಯ ಯಾವುದರ ಕುರಿತಾದದ್ದು’ ಎಂದು ಕೇಳಿದ್ದಾರೆ.

ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಕೂಡ ಸರಸಂಘಚಾಲಕರ ಮಾತಿಗೆ ಪ್ರತಿಕ್ರಿಯಿಸಿ ‘ಹಿಂದೂಸ್ಥಾನ ಹಿಂದೂಸ್ಥಾನವಾಗಿ ಉಳಿಯಬೇಕು ಆದರೆ ‘ಇನ್ಸಾನ್ (ಮನುಷ್ಯರು) ಇನ್ಸಾನ್ ಆಗಿ ಉಳಿಯಬೇಕು’ ಎಂದು ಹೇಳುವ ಮೂಲಕ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

Leave A Reply

Your email address will not be published.