ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಲಿಂಗ ದಂಪತಿ! ಅರೇ ಇದು ಹೇಗೆ ಸಾಧ್ಯ?
2019 ರಲ್ಲಿ ಮದುವೆಯಾಗಿದ್ದ ಭಾರತೀಯ ಅಮೆರಿಕನ್ ಸಲಿಂಗ ದಂಪತಿಯೊಂದು ಸಾಕಷ್ಟು ಸುದ್ಧಿಯಾಗಿತ್ತು. ಆದರೆ ಮತ್ತದೇ ದಂಪತಿ ಮೊದಲ ಮಗುವನ್ನು ಪಡೆಯಲು ಆಲೋಚಿಸಿದ್ದು ಮತ್ತೆ ಸುದ್ಧಿಯಾಗುತ್ತಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಅಂದ್ರೆ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಸಲಿಂಗ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಇದೀಗ ಅವು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಭಾರತೀಯ ಅಮೆರಿಕನ್ ಸಲಿಂಗ ದಂಪತಿಗಳಾದ ಇವರಲ್ಲಿ ಅಮಿತ್ ಶಾ ಅವರು ನ್ಯೂಜೆರ್ಸಿಯ ಗುಜರಾತಿ ಅಮೇರಿಕನ್ ಆಗಿದ್ದು, ಆದಿತ್ಯ ಮಾದಿರಾಜು ಹೊಸ ದೆಹಲಿಯಲ್ಲಿ ಜನಿಸಿದ ತೆಲುಗಿನವರಾಗಿದ್ದಾರೆ. 2016ರಲ್ಲಿ ಸ್ನೇಹಿತ ಮೂಲಕ ಪರಸ್ಪರ ಭೇಟಿಯಾಗಿದ್ದ ಇವರಿಬ್ಬರು 2019 ರಲ್ಲಿ ಆದಿತ್ಯ ಇವರ ತವರಿನಲ್ಲಿ ವಿವಾಹವಾಗಿದ್ದರು. ಆ ಸಮಯದಲ್ಲಿ ಈ ಸಲಿಂಗ ವಿವಾಹ ಭಾರೀ ವೈರಲ್ ಆಗಿದ್ದು, ಎಲ್ಲೆಡೆ ಸುದ್ದಿಗೆ ಗ್ರಾಸವಾಗಿತ್ತು.
ಸಲಿಂಗ ವಿವಾಹವಾಗಿರುವ ಕಾರಣ ಅವರು ಮಕ್ಕಳನ್ನು ಪಡೆಯುವುದು ಹೇಗೆಂಬ ಬಗ್ಗೆ ಯೋಚನೆ ಮಾಡಿದಾಗ ಅವರಿಗೆ ಹೊಳೆದದ್ದು ಐವಿಎಫ್ ಮುಖಾಂತರ ಮಗು ಪಡೆಯುವುದು. ದಾನಿಗಳ ಅಂಡಾಶಯದ ಮೂಲಕ ಐವಿಎಫ್ ಅಡಿಯಲ್ಲಿ ಮಗು ಪಡೆಯುವುದು ಸಾಧ್ಯವಿದೆ ಎಂಬುದನ್ನು ಅರಿತುಕೊಂಡ ಅವರು ಇದೀಗ ದಾನಿಗಳ ಅಂಡಾಶಯದಿಂದ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಬಾಡಿಗೆದಾರರು, ಅಂಡಾಣು ದಾನಿಗಳು ಮತ್ತು ಗರ್ಭಾವಸ್ಥೆಯ ವಾಹಕಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಅಂತಿಮವಾಗಿ ತಮ್ಮ ನಾಲ್ಕನೇ ಸುತ್ತಿನಲ್ಲಿ ಯಶಸ್ವಿ ಇನ್-ವಿಟ್ರೊ ಫಲೀಕರಣದವರೆಗೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು. ಅಂತಿಮವಾಗಿ ಐವಿಎಫ್ ಮೂಲಕ ಮಕ್ಕಳನ್ನು ಪಡೆದುಕೊಳ್ಳುತ್ತಿದ್ದಾರೆ.
ಇನ್ನು ಮಗುವನ್ನು ಪಡೆಯುವ ಕುರಿತು ಮಾತನಾಡಿದ ಆದಿತ್ಯ, ನಾವು ಸಲಿಂಗ ಪೋಷಕರಾಗುವುದಿಲ್ಲ, ಸಾಮಾನ್ಯ ಪೋಷಕರಾಗುತ್ತೇವೆ. ಸಾಮಾನ್ಯ ಮಕ್ಕಳಂತೆಯೇ ನಾವೂ ನಮ್ಮ ಮಗುವನ್ನು ಬೆಳೆಸಲಿದ್ದೇವೆ. ನಾವು ಮಕ್ಕಳನ್ನು ಹೊಂದುವುದು ಸಲಿಂಗ ವಿವಾಹವನ್ನು ಇನ್ನಷ್ಟು ಸಾಮಾನ್ಯಗೊಳಿಸುತ್ತದೆ ಎಂದು ಭಾವಿಸುತ್ತೇವೆ, ನೀವು ಸಲಿಂಗ ದಂಪತಿಗಳಾಗಿದ್ದರೂ ಪರವಾಗಿಲ್ಲ, ನೀವು ಬಯಸಿದಂತೆ ಜೀವನವನ್ನು ನಡೆಸಬಹುದು’ ಎಂದು ಹೇಳಿಕೊಂಡಿದ್ದಾರೆ.