ಮುರುಘಾ ಶರಣರಿಗೆ ಮತ್ತೊಂದು ಸಂಕಷ್ಟ| ಅಷ್ಟಕ್ಕೂ, ಜೈಲಲ್ಲಿರುವ ಸ್ವಾಮಿಗಳು ಮಾಡಿದ ಅಪರಾಧವಾದರೂ ಏನು?
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅತ್ಯಾಚಾರ ಮಾಡಿರುವ ಆರೋಪದಿಂದ ಫೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದು ಆಗಿಂದಾಗ್ಗೆ ಒಂದಲ್ಲ ಒಂದು ಅಪರಾಧಗಳ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಪಡುತ್ತಿದ್ದಾರೆ. ಇದೀಗ ಮತ್ತೊಂದು ಆರೋಪದ ಹಿನ್ನೆಲೆಯಲ್ಲಿ ಮುರುಘಾ ಶರಣರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾದರೆ ಸದ್ಯ ಜೈಲಿನಲ್ಲಿರುವ ಶರಣರು ಮಾಡಿರುವ ಅಪರಾಧ ಏನು ಗೊತ್ತಾ?
ಬೆಂಗಳೂರಿನಲ್ಲಿರುವ ತಿಪ್ಪಶೆಟ್ಟಿ ಮಠದ ಆಸ್ತಿಯನ್ನು ದುರ್ಬಳಕೆ ಮಾಡಿರುವ ಆರೋಪದಡಿ ಮುರುಘಾ ಶರಣರ ಮೇಲೆ ಕೇಸು ದಾಖಲಿಸಲಾಗತ್ತು. ಆದರೆ ಈ ಕೇಸಿಗೆ ಸಂಬಂಧ ಪಟ್ಟಂತೆ ವಿಚಾರಣೆಗೆ ಹಾಜರಾಗದ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಬಾಡಿ ವಾರಂಟ್ ಜಾರಿ ಮಾಡಿದೆ.
ಬೆಂಗಳೂರಿನ ತಿಪ್ಪಶೆಟ್ಟಿ ಮಠಕ್ಕೆ ಸೇರಿದ ಕೆಂಗೇರಿ ಸೂಲಿಕೆರೆಯ ಜಮೀನು ಸೇರಿ ಮಠದ 7 ಎಕರೆ 18 ಗುಂಟೆ ಜಮೀನನ್ನು ವಂಚಿಸಿ ಶಿವಮೂರ್ತಿ ಶರಣರು ಅಕ್ರಮ ಮಾರಾಟ ಮಾಡಿದ್ದಾರೆ ಎಂದು 2009ರಲ್ಲಿ ಮುರುಘಾಶ್ರೀ ವಿರುದ್ಧ ಕೇಸ್ ದಾಖಲಿಸಲಾಗಿದೆ.
ನಂತರ ಸಮನ್ಸ್ ನೀಡಿದರೂ ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ಮುರುಘಾ ಶರಣರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಕೂಡ ಜಾರಿ ಮಾಡಿ ಕಲಂ 420, 405, 406, 418ಅಡಿ ಕೇಸ್ ದಾಖಲಾಗಿತ್ತು. ವಂಚನೆ, ವಿಶ್ವಾಸದ್ರೋಹ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ 2 ವರ್ಷದ ಹಿಂದೆ ಶ್ರೀಗಳ ವಿರುದ್ಧ ಪಂಚಾಕ್ಷರಯ್ಯ ಎಂಬುವರು ಕೂಡ ದೂರು ನೀಡಿದ್ದರು.
ಆದರೆ ಇದಾವುದುರ ವಿಚಾರಣೆಗೆ ಶರಣರು ಹಾಜರಾಗಿರಲಿಲ್ಲ. ಈ ಸಂಬಂಧ ಫೆಬ್ರವರಿ 9 ರಂದು ನ್ಯಾಯಾಲಯದ ಎದುರು ಶಿವಮೂರ್ತಿ ಶರಣರನ್ನು ಹಾಜರು ಪಡಿಸುವಂತೆ ಚಿತ್ರದುರ್ಗ ಎಸ್ಪಿ ಕೆ.ಪರಶುರಾಮ್‌ಗೆ ಸೂಚಿಸಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಬಾಡಿ ವಾರಂಟ್ ಜಾರಿ ಮಾಡಿದೆ.