ವಿಧಾನಸಭೆ 221 ಕ್ಷೇತ್ರಗಳ ಮತದಾರರ ಪಟ್ಟಿ ಬಿಡುಗಡೆ| ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿಕೊಳ್ಳಿ

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚುನಾವಣಾ ಆಯೋಗದಲ್ಲಿ ಚುನಾವಣಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 221 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಗುರುವಾರ ಸಂಜೆ ಬಿಡುಗಡೆ ಮಾಡಿರುವ ಆಯೋಗವು ಸದ್ಯ ಕರ್ನಾಟಕದಲ್ಲಿ 5 ಕೋಟಿಗೂ ಹೆಚ್ಚಿನ ಮತದಾರರಿದ್ದಾರೆ ಎಂದು ತಿಳಿಸಿದೆ.

ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಗುರುವಾರ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿ ಮಾಹಿತಿ ನೀಡಿದರು. ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇನ್ನುಳಿದ ಮೂರು ವಿಧಾನಸಭಾ ಕ್ಷೇತ್ರಗಳಾದ ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರದಲ್ಲಿ ಮತದಾರರ ಮಾಹಿತಿ ಕಳ್ಳತನ ಆರೋಪದ ಕುರಿತು ವಿಚಾರಣೆ ನಡೆಯುತ್ತಿರುವ ಕಾರಣ ಜನವರಿ 15 ರಂದು ಪಟ್ಟಿ ಪ್ರಕಟಗೊಳಿಸಲಾಗುತ್ತದೆ ಎಂದರು.

ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ದೊರೆತ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 5,05,48,553 ಮತದಾರರಿದ್ದು ಹೊಸದಾಗಿ 12,31,540 ಮತದಾರರು ಸೇರ್ಪಡೆಗೊಂಡಿದ್ದಾರೆ. 6,18,965 ಮತದಾರರನ್ನು ಸೂಕ್ತ ಕಾರಣಗಳೊಂದಿಗೆ ಪಟ್ಟಿಯಿಂದ ತೆಗದುಹಾಕಲಾಗಿದೆ. ಹೀಗಾಗಿ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 221 ಕ್ಷೇತ್ರಗಳಲ್ಲಿ ಒಟ್ಟು 4,99,34,730 ಮತದಾರರಿರುವುದು ತಿಳಿದು ಬಂದಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 6,50,53 ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಅತಿ ಕಡಿಮೆ ಅಂದರೆ 1,66,521 ಮತದಾರರಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಈ ಬಾರಿ ಯುವ ಮತದಾರರ ಸಂಖ್ಯೆ 7,01,243 ಆಗಿದೆ.

ಮೊದಲು ಜನವರಿ 1 ಕ್ಕೆ 18 ವರ್ಷ ತುಂಬಿದವರಿಗೆ ಮಾತ್ರ ನೋಂದಣಿ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಪ್ರಸ್ತುತ ನಿಯಮವನ್ನು ಸಡಿಲಿಸಲಾಗಿದ್ದು, ಚುನಾವಣಾ ಆಯೋಗವು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಾಮಪತ್ರ ಸಲ್ಲಿಕೆ ಮಾಡುವ ಆರಂಭಕ್ಕೂ 10 ದಿನ ಇರುವವರೆಗೂ ಅವಕಾಶ ಮಾಡಿಕೊಡುತ್ತದೆ. ಇದರ ನಡುವೆ ಅನೇಕ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಗವು ಹಮ್ಮಿಕೊಳ್ಳಲಿದೆ.

ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ (https://ceo.karnataka.gov.in) ಅವರ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗುತ್ತದೆ. ಸರಿಯಾದ ಮಾಹಿತಿಯೊಂದಿಗೆ ತಮ್ಮ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂಬುದನ್ನು ಜನರು ಪರಿಶೀಲಿಸಬಹುದಾಗಿದೆ. “ನಿರಂತರ ಅಪ್‌ಡೇಟ್ ಅವಧಿಯಲ್ಲಿ” ಅರ್ಜಿಗಳನ್ನು ಪೋರ್ಟಲ್‌ಗಳಾದ NVSP, ವೋಟರ್ ಪೋರ್ಟಲ್ ಅಥವಾ ವೋಟರ್ ಹೆಲ್ಪ್‌ಲೈನ್ ಮೊಬೈಲ್ ಅಪ್ಲಿಕೇಶನ್ ಬಳಸಿ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.

Leave A Reply

Your email address will not be published.