ಅಡಿಕೆ ಕೃಷಿಗೆ ಬೀಳಲಿದೆ ಅಂಕುಶ | ಹೊಸ ನಿಯಮ – ಗೃಹ ಸಚಿವ ಅರಗ ಜ್ಞಾನೇಂದ್ರ
ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ, ನರೇಗಾ ಯೋಜನೆ ಅಡಿ ಸಣ್ಣ ಅತಿ ಸಣ್ಣ ರೈತರಿಗೆ ಅಡಿಕೆ ತೋಟ ನಿರ್ಮಿಸಲು ಒಂದು ಹೆಕ್ಟೇರಿಗೆ 80,000ದ ವರೆಗೆ ಸಹಾಯಧನ ನೀಡಲಾಗುತ್ತಿದೆ. ಈ ರೀತಿಯಾಗಿ ಅಡಿಕೆಗೆ ಸಿಗುತ್ತಿರುವ ಲಾಭ ಕಂಡು ರೈತರು ಅಡಿಕೆ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ.
ಬಯಲು ಸೀಮೆ ಹಾಗೂ ಇನ್ನಿತರ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಅಡಿಕೆ ಬೆಳೆಯ ಪ್ರಮಾಣ ಹೆಚ್ಚಾಗುತ್ತಿದ್ದು ಜೊತೆಗೆ ಒಂದು ಎಕರೆ ಅಡಿಕೆ ತೋಟ ನಿರ್ಮಿಸಲು ಗರಿಷ್ಠ 75,000 ಖರ್ಚಾಗುತ್ತದೆ. ವರ್ಷಕ್ಕೆ 8 ರಿಂದ 10 ಕ್ವಿಂಟಲ್ ಇಳುವರಿ ಬರುವುದರಿಂದ 45,000 ಗಿಂತಲೂ ಹೆಚ್ಚು ದರ ಇರುವ ಹಿನ್ನೆಲೆ ಎಕರೆಗೆ ಕನಿಷ್ಠ ಮೂರು ಲಕ್ಷ ನಿಶ್ಚಿತ ಲಾಭ ದೊರೆಯಲಿದೆ.
ಇದರ ಜೊತೆಗೆ ರೈತರೇ ಅಡಿಕೆ ಸುಲಿದು ಒಣಗಿಸಿ ಮಾರಾಟ ಮಾಡಿದರೆ 50,000 ಕ್ಕಿಂತಲೂ ಹೆಚ್ಚಿನ ಲಾಭ ಪಡೆಯಬಹುದು ಎಂಬ ವಿಶ್ವಾಸದಲ್ಲಿ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಲ್ಲಿ ನೀರಾವರಿ ಮೂಲಕ ಅಡಿಕೆ ಬೆಳೆಯನ್ನು ವಿಸ್ತರಿಸಲಾಗುತ್ತಿದೆ. ಇದರಿಂದಾಗಿ, ಅಡಿಕೆ ಬೆಳೆಯುವ ರೈತರ ಮೇಲೆ ಪ್ರಭಾವ ಬೀರಲಿದ್ದು, ಈಗಾಗಲೇ ನರ್ಸರಿಗಳಲ್ಲಿ ಒಂದು ಕೋಟಿಗಿಂತಲೂ ಹೆಚ್ಚು ಅಡಿಕೆ ಸಸಿಗಳು ಮಾರಾಟವಾಗುತ್ತಿದ್ದು, ಮುಂದಿನ ಐದು 10 ವರ್ಷಗಳಲ್ಲಿ ಅಡಿಕೆಗೆ ಈಗ ಲಭ್ಯವಾಗುತ್ತಿರುವ ಲಾಭ ಮುಂದೆ ದೊರೆಯದೆ ಹೋದರೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ.
ಹೀಗಾಗಿ, ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ರವರು ಅಡಿಕೆ ಬೆಳೆಗಾರರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಸರ್ಕಾರವು ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಅಡಿಕೆ ಕೃಷಿಗೆ ಅಂಕುಶ ಹಾಕುವ ಮೂಲಕ ಅಡಿಕೆ ಬೆಳೆಯಲು ನೀತಿ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರ ಜೊತೆಗೆ ಅಡಿಕೆ ಆಮದನ್ನು ಕಡಿಮೆ ಮಾಡಿ ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಕೋರಿದ್ದಾರೆ ಎನ್ನಲಾಗಿದೆ.
ಬಯಲುಸೀಮೆ ಪ್ರದೇಶದಲ್ಲಿ ಅಡಿಕೆ ಬೆಳೆಯುವ ಪ್ರದೇಶ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಡಿಕೆ ಬೆಳೆಗಾರರ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳಿಂದ ಪ್ರಭಾವಿತರಾಗುತ್ತಿರುವ ಈ ಭಾಗದ ರೈತರು ಹೆಚ್ಚು ಆದಾಯ ಪಡೆಯಬೇಕು ಎನ್ನುವ ಹಂಬಲದಿಂದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಬಯಲು ಸೀಮೆಯ ಹಲವು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯುವ ಪ್ರದೇಶ ಐದಾರು ವರ್ಷಗಳಲ್ಲಿ ಇಮ್ಮಡಿಯಾಗಿದೆ.
ತೋಟಗಾರಿಕೆ ಇಲಾಖೆಯ ಮಾಹಿತಿ ಅನುಸಾರ, ರಾಜ್ಯದಲ್ಲಿ 2021ರ ಹಂತಕ್ಕೆ 5.63 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು ವಾರ್ಷಿಕ ಅಂದಾಜು 8.64 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಗೃಹ ಸಚಿವ ಅರಗ ಜ್ಞಾನೇಂದ್ರ ರೈತರಿಗೆ ನೆರವಾಗುವ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.