ಮಂಗಳೂರು : ಹೊಸವರ್ಷಾಚರಣೆಗೆ ಪ್ರತ್ಯೇಕ ನಿಯಮ ಜಾರಿ | ಜಿಲ್ಲಾಡಳಿತದ ಮಾರ್ಗಸೂಚಿ ಈ ರೀತಿ ಇದೆ
ಹೊಸ ವರ್ಷದ ಸಂಭ್ರಮಕ್ಕೆ ಎಲ್ಲೆಡೆ ಭರದ ತಯಾರಿ ನಡೆಯುತ್ತಿವೆ. ಹೊಸ ವರ್ಷದ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಡಗರದಲ್ಲಿ ಮಿಂದೇಳುವ ಜನರ ರಕ್ಷಣೆಗೆ ಪೊಲೀಸ್ ಇಲಾಖೆ ಅಣಿಯಾಗಿದೆ. ಇದೀಗ,ಹೊಸ ವರ್ಷಾಚರಣೆಗೆ ಮಂಗಳೂರಿನಲ್ಲಿ ಪ್ರತ್ಯೇಕ ನಿಯಮ ಜಾರಿಗೆ ತರಲು ಜಿಲ್ಲಾಡಳಿತ ಮುಂದಾಗಿದ್ದು, ಈ ಕುರಿತ ಮಾರ್ಗಸೂಚಿ ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಧ್ವನಿವರ್ಧಕ, ವಿದ್ಯುನ್ಮಾನ ಉಪಕರಣಗಳು, ಶಬ್ದ ಉಂಟು ಮಾಡುವ ಉಪಕರಣಗಳನ್ನು ರಾತ್ರಿ 10ರ ನಂತರ ಬಳಕೆ ಮಾಡುವಂತಿಲ್ಲ. ಈ ನಿಯಮಗಳನ್ನು ಅನುಸರಿಸಿ ಕಾರ್ಯಕ್ರಮವನ್ನು ಆಯೋಜಿಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಅವಶ್ಯಕವಾಗಿದೆ.ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಸೆಂಬರ್ 31 ಮತ್ತು ಜನವರಿ 1ಕ್ಕೆ ಅನ್ವಯವಾಗುವಂತೆ ಜಿಲ್ಲಾಡಳಿತವು ಪ್ರತ್ಯೇಕ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ನೋಂದಾಯಿತ ಮತ್ತು ಅಧಿಕೃತ ಕ್ಲಬ್, ಪಬ್, ರೆಸ್ಟೋರೆಂಟ್, ಹೊಟೇಲ್ಗಳಿಗೆ ಈ ನಿಯಮಗಳು ಅನ್ವಯವಾಗಲಿದೆ. ರಾತ್ರಿ 12.30 ರವರೆಗೆ ಮಾತ್ರ ಸಂಭ್ರಮಾಚರಣೆಗೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.ಈಗಾಗಲೇ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಜನರ ಭದ್ರತಾ ದೃಷ್ಟಿಯನ್ನು ಮನಗಂಡು ಪೊಲೀಸ್ ಇಲಾಖೆ, ಪಾಲಿಕೆಯ ಅಧಿಕಾರಿಗಳು, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಮೂರು ತಂಡಗಳ ಗಸ್ತು ಪಡೆಯನ್ನು ನಿಯೋಜಿಸಲಾಗಿದೆ.
ಹೊಸ ವರ್ಷದ ಸಂಭ್ರಮಾಚರಣೆಗೆ ಸಂಬಂಧ ಪಟ್ಟಂತೆ ಈ ಸಭೆ ನಡೆಸಿರುವ ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್. ಮತ್ತು ಪೊಲೀಸ್ ಆಯುಕ್ತ ಶಶಿಕುಮಾರ್, ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಲ್ಲಾ ಹೋಟೆಲ್, ಪಬ್, ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕ ಮಾರ್ಗಸೂಚಿ ಪ್ರಕಟವಾಗಿದ್ದು ಮಾರ್ಗಸೂಚಿ ಹೀಗಿವೆ:
ವಿಶೇಷ ಪಾರ್ಟಿ ಇತ್ಯಾದಿ ಆಯೋಜಿಸುವ ಮುನ್ನ ಕಡ್ಡಾಯವಾಗಿ ನಗರ ಸ್ಥಳೀಯ ಸಂಸ್ಥೆ, ಗ್ರಾಮೀಣ ಸ್ಥಳೀಯ ಸಂಸ್ಥೆ ಮತ್ತು ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು.ಸಭಾಂಗಣ, ತೆರೆದ ಸ್ಥಳ, ಹೊರಾಂಗಣ ಪ್ರದೇಶಗಳಾದ ಕಲ್ಯಾಣ ಮಂಟಪ, ಸಭಾಭವನ, ಕಡಲ ತೀರ, ಹೋಂ ಸ್ಟೇ, ಮಾಲ್ ಇತ್ಯಾದಿ ತೆರೆದ ಪ್ರದೇಶಗಳಲ್ಲಿ ಡಿಜೆ ಮತ್ತು ಡಾಲ್ಟಿ ಡ್ಯಾನ್ಸ್ಗಳನ್ನು ಮಾಡಲು ಅವಕಾಶವಿಲ್ಲ.
ದಿನನಿತ್ಯ ನಡೆಯುವ ಕ್ಲಬ್, ಪಬ್, ರೆಸ್ಟೋರೆಂಟ್ ದೈನಂದಿನ ವ್ಯವಹಾರದ ಜೊತೆಗೆ ಪರ್ಮಿಟ್ನಂತೆ ನಿಗದಿತ ಸಮಯದೊಳಗೆ ಕಾರ್ಯಕ್ರಮ ಮುಕ್ತಾಯ ಮಾಡಬೇಕು.
ಧಾರ್ಮಿಕ ಕಾರ್ಯಕ್ರಮ ನಡೆಸಲು ಯಾವುದೇ ನಿರ್ಬಂಧವಿರದು.ಆದರೆ, ಈ ಕಾರ್ಯಕ್ರಮಗಳನ್ನು ಆಯೋಜಿಸುವ ಮೊದಲು ಮೇಲ್ವಿಚಾರಕರು ಇಲ್ಲವೇ ಆಯೋಜಕರು ಸುಪ್ರೀಂ ಕೋರ್ಟ್ ಆದೇಶಗಳಿಗೆ ಮತ್ತು ಸರಕಾರದ ನಿಯಮಗಳನ್ನು ಪಾಲನೆ ಮಾಡಬೇಕು.