KEA ಯಿಂದ 4 ಇಲಾಖೆಗಳ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಅಧಿಸೂಚಿಸಿದ್ದ ವಿವಿಧ 4 ಇಲಾಖೆಗಳ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗವು (KPSC) ಸಹ ಗ್ರೂಪ್ ಬಿ, ಸಿ, ಡಿ ಹುದ್ದೆಗಳ ಭರ್ತಿಗೆ ಪರೀಕ್ಷೆ ವೇಳಾಪಟ್ಟಿಗಳನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ, ಹಲವು ಅಭ್ಯರ್ಥಿಗಳು ಕೆಇಎ, ಕೆಪಿಎಸ್‌ಸಿ ಎರಡು ಅಧಿಸೂಚನೆಗಳಿಗೆ ಅರ್ಜಿ ಸಲ್ಲಿಸಿರುವುದರಿಂದ, ಕೆಇಎ ಪರೀಕ್ಷೆ ದಿನಾಂಕಗಳನ್ನು ಪರಿಷ್ಕರಿಸಲು ಕೋರಿ ಪತ್ರ ಬರೆದಿರುವ ಹಿನ್ನೆಲೆ ಪ್ರಾಧಿಕಾರ ಈಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಇತ್ತೀಚೆಗಷ್ಟೇ ಸದರಿ ಪರೀಕ್ಷೆಗಳಿಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಈಗ ವೇಳಾಪಟ್ಟಿಯನ್ನು ಹಲವು ಕಾರಣಗಳಿಂದ ಬದಲಾವಣೆ ಮಾಡಿ ಪರಿಷ್ಕೃತ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಲಾಗಿರುವ ಇಲಾಖೆ ಹುದ್ದೆಗಳ ಮಾಹಿತಿ ಇಲ್ಲಿದೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ ಜೆಇ, ಎಇ, ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, 2023 ರ ಜನವರಿ 29, ಫೆಬ್ರುವರಿ 05, 06, 07, 12 ರಂದು ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಗಿದೆ.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಕೂಡ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ಪರೀಕ್ಷೆಗಳನ್ನು 2023 ರ ಜನವರಿ 30, ಫೆಬ್ರುವರಿ 01, 12 ರಂದು ನಡೆಸಲು ನಿಗದಿಪಡಿಸಲಾಗಿದೆ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಿರಿಯ ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪರೀಕ್ಷೆ ವೇಳಾಪಟ್ಟಿಯನ್ನು ಕೂಡ ಬದಲಾವಣೆ ನಿಯಮಕ್ಕೆ ಸೇರ್ಪಡೆ ಮಾಡಿ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಯ ಪರೀಕ್ಷೆ 2023 ರ ಜನವರಿ 29 ಹಾಗೂ ಫೆಬ್ರುವರಿ 12 ರಂದು ನಡೆಯಲಿದೆ.

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಹ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ನಿಗಮದ ಹುದ್ದೆಗಳಿಗೆ 2023 ರ ಜನವರಿ 29, 30, 31, ಫೆಬ್ರುವರಿ 01, 02, 03, 04, 12 ರಂದು ಪರೀಕ್ಷೆ ನಿಗದಿ ಮಾಡಲಾಗಿದೆ.

Leave A Reply

Your email address will not be published.