ಜ್ವಾಲಾಮುಖಿಯ ಮೇಲೆಯೇ ಒಲೆ ಹೂಡಿ ಅಡುಗೆ ಮಾಡೋ ಸಾಹಸಿ ಬಾಣಸಿಗರು ; ಅಂತಹ ಹೋಟೆಲ್ ಎಲ್ಲಿದೆ ಗೊತ್ತೇ ?!
ವಿಶಿಷ್ಟವಾಗಿ ಅಡುಗೆ ಮಾಡಿ ಜನರ ಎಂದೂ ತೀರದ ಚಪಲದ ನಾಲಿಗೆಯನ್ನು ಸ್ವಲ್ಪ ಮಟ್ಟಿಗಾದರೂ ತಣಿಸಲು ಬಾಣಸಿಗರು ನಿರಂತರ ಪ್ರಯತ್ನಿಸುತ್ತಿರುವುದು ನಾವು ಕಂಡಿದ್ದೇವೆ. ಕೆಲವರು ಪಟ್ಟಣ ಪ್ರದೇಶಗಳಲ್ಲಿ ಕೂಡ, ಸಾಂಪ್ರದಾಯಿಕ ಶೈಲಿಯಲ್ಲಿ ಎಂದು ಹೇಳಿಕೊಂಡು ಕಟ್ಟಿಗೆಯಲ್ಲೇ ಅಡುಗೆ ಮಾಡಿ ಉಣ ಬಡಿಸುತ್ತಿದ್ದಾರೆ. ಆಹಾರ ತಯಾರಿಕ ಕೇಂದ್ರಗಳು ಕಮರ್ಷಿಯಲ್ ಆದಂತೆ ಈಗ ಬಾಯ್ಲರ್ ಗಳನ್ನು ಬಳಸಿ ಹೊಟೇಲಿನಲ್ಲಿ ಅಡುಗೆ ಮಾಡುತ್ತಿದ್ದಾರೆ. ಆದರೆ ಅದೊಂದು ವಿಶಿಷ್ಟ ಹೋಟೆಲ್ ಇದೆ. ಅವರು ಉರಿಯುವ ಜ್ವಾಲಾಮುಖಿಯನ್ನೇ ಒಲೆಯಾಗಿಸಿಕೊಂಡು ಅಡುಗೆ ತಯಾರಿಸ್ತಾರೆ. ಈ ಹೊಟೇಲಿನಲ್ಲಿ ನೇರವಾಗಿ ಜ್ವಾಲಾಮುಖಿಯ ಮೇಲೆ ಪಾತ್ರೆ ಇಟ್ಟು ಅಡುಗೆ ಮಾಡೋ ಧೈರ್ಯ ತೋರಿಸಿದ್ದಾರೆ. ಒಟ್ಟಿನಲ್ಲಿ ಇವರು ಗ್ಯಾಸ್ ಖರ್ಚನ್ನು ಉಳಿಸಿರುವುದು ಮಾತ್ರವಲ್ಲ, ಪಕ್ಕಾ ನ್ಯಾಚುರಲ್ ಇಂಧನ ಮೂಲಕ್ಕೆನೇ ಹಂಡೆ ಇಟ್ಟಿದ್ದಾರೆ !
ಇಂತಹ ಅಪರೂಪದ ಹೋಟೆಲು ಇರೋದು ಸ್ಪೇನ್ ದೇಶದಲ್ಲಿ. ಸ್ಪೇನ್‌ನ ಲ್ಯಾಂಜಾರೋಟ್ ಹೆಸರಿನ ದ್ವೀಪದಲ್ಲಿ ಈ ಹೊಟೇಲ್ ಇದೆ. ಇಲ್ಲಿ ವಿಶಿಷ್ಟ ಆಹಾರ ತಯಾರಿಕೆಗೆ ಅಪರೂಪದ ಇಂಧನ ಬಳಸಿ ಬಾಣಸಿಗರು ಅಡುಗೆ ಬೇಯಿಸ್ತಾರೆ. ಈ ಹೋಟೆಲಿನ ಕಿಚನ್ ಇರೋದು ಒಂದು ಸಣ್ಣ ಜ್ವಾಲಾಮುಖಿಯ ರಂದ್ರದ ಮೇಲೆ. ಅಲ್ಲಿನ ನೆಲದಲ್ಲಿ ಒಂದು ಜ್ವಾಲಾಮುಖಿ ರಂದ್ರ ಇದ್ದು, ಇದನ್ನೇ ಒಲೆಯ ರೀತಿ ಬಳಸಿಕೊಂಡು ಅಡುಗೆ ಮಾಡಲಾಗುತ್ತದೆ. ಎಲ್ ಡಿಯಾಬ್ಲೊ ಎಂದು ಕರೆಯಲ್ಪಡುವ ಈ ಹೋಟೆಲ್ ತನ್ನ ಗ್ರಾಹಕರಿಗೆ ಸ್ವಾದಿಷ್ಟ ತಿನಿಸುಗಳನ್ನು ಬಡಿಸುತ್ತದೆ.
‘ನರಕದ ಒಡೆಯ ‘ ಎನ್ನುವ ಅರ್ಥಬರುವ ಈ ಹೋಟೆಲ್ ನ ಜ್ವಾಲಾ ರಂದ್ರದ ಮೇಲೆ ಒಲೆಯನ್ನು ಇಟ್ಟು ಅದರ ತೀವ್ರ ಬಿಸಿಯ ಮಧ್ಯೆ ಅಡುಗೆ ಮಾಡೋದು ಸಣ್ಣ ಚಾಲೆಂಜ್ ಅಲ್ಲ. ಆದರೆ ಆ ದೊಡ್ಡ ಸಾಹಸದ ಕೆಲಸವನ್ನು ವಾಸ್ತುಶಿಲ್ಪಿಗಳಾದ ಎಡ್ವರ್ಡೊ ಕ್ಯಾಸೆರೆಸ್ ಮತ್ತು ಜೀಸಸ್ ಸೊಟೊ ನಿರ್ಮಿಸಿ ತೋರಿಸಿದ್ದಾರೆ.
ಈ ಹೋಟೆಲ್ ಗೆ ಅಡಿಪಾಯವನ್ನು ನಿರ್ಮಿಸಲು ನೆಲವನ್ನು ಅಗೆಯುವ ಬದಲು ಬಸಾಲ್ಟ್ ಬಂಡೆಯಿಂದ ಮಾಡಲ್ಪಟ್ಟ ಇಟ್ಟಿಗೆಗಳ 9 ಪದರಗಳನ್ನು ಹಾಕಲಾಗಿದೆ. ಅದರ ಮೇಲೆ ದೈತ್ಯ ಅನ್ನಿಸುವ ಗ್ರಿಲ್ ಗಳನ್ನು ಕೂರಿಸಿ ಇರಿಸಲಾಗಿದೆ. ಅಡುಗೆ ಮನೆಯ ಒಲೆಯ 6 ಅಡಿ ಕೆಳಗೆ, 400 ಡಿಗ್ರಿ ಸೆಲ್ಸಿಯಸ್ ಬಿಸಿಯಾಗಿರುವ ಲಾವಾ ಸಣ್ಣಗೆ ಕುದಿಯುತ್ತಾ ಇರುತ್ತದೆ. ಅದರ ಮೇಲೆ ಥರಾವರಿ ಮಾಂಸಾಹಾರದ ಖಾದ್ಯಗಳು ಕೆಂಪಾಗಿ ಬೇಯುತ್ತಾ ಗ್ರಾಹಕರ ಜಿಹ್ವಾ ಚಪಲವನ್ನು ನೀಗಿಸುತ್ತ ಇರುತ್ತವೆ.
1824 ರಲ್ಲಿ ಕೊನೆಯ ಬಾರಿ ಸ್ಫೋಟಗೊಂಡ ನಂತರ ಈ ಜ್ವಾಲಾಮುಖಿ ಶಾಂತವಾಗಿದೆ. ಆದರೆ ಅಲ್ಲಿ ಲಾವಾ ಮಾತ್ರ ಕುದಿಯುತ್ತಾ ಇರುತ್ತದೆ. ತನ್ನ ವಿಶಿಷ್ಟ ಅಡುಗೆ ವಿಧಾನಗಳ ಹೊರತಾಗಿ ಕೂಡಾ ಎಲ್ ಡಿಯಾಬ್ಲೊ ಹೊಟೇಲ್ ಇನ್ನುಳಿದ ಕಾರಣಗಳಿಗಾಗಿ ಗಮನ ಸೆಳೆದಿದೆ. ಅಲ್ಲಿನ ಕೆಂಪು ಬಣ್ಣದ ಮರಳು ಮತ್ತು ಜ್ವಾಲಾಮುಖಿಯಿಂದ ಮೂಡಿದ ಕೆಂಪು ಬಂಡೆಗಳ ನೋಟದ ಜತೆ ಬಿಯರು ಹೀರುತ್ತಾ ಮಾಂಸದೌತಣ ಮಾಡಲು ಈ ಹೋಟೆಲ್ ಹೇಳಿ ಮಾಡಿಸಿದ ಜಾಗ.
ಅಂದ ಹಾಗೆ ಈ ಹೋಟೆಲ್ ಇರುವುದು ಟಿಮಾನ್ ಫಾಯಾ ರಾಷ್ಟ್ರೀಯ ಉದ್ಯಾನವನದಲ್ಲಿ. 18 ನೇ ಶತಮಾನದಲ್ಲಿ ದ್ವೀಪದಲ್ಲಿ ಹುಟ್ಟಿಕೊಂಡ ಸುಮಾರು 100 ಜ್ವಾಲಾಮುಖಿಗಳು “ಮೊಂಟಾನಾಸ್ ಡೆಲ್ ಪ್ಯೂಗೊ” ಅಥವಾ ಪೈರ್ ಪರ್ವತಗಳಿಂದ ರೂಪುಗೊಂಡಿದ್ದವು ಎನ್ನುವುದು ಚರಿತ್ರೆಯಿಂದ ತಿಳಿಯುತ್ತದೆ.