KPSC : ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಕುರಿತು ಮುಖ್ಯವಾದ ಮಾಹಿತಿ!!!

ಕೆಪಿಎಸ್‌ಸಿ ವಿವಿಧ ಗ್ರೂಪ್‌ ಎ, ಬಿ, ಸಿ ವೃಂದದ ಹುದ್ದೆಗಳ ನೇಮಕಾತಿಗೆ ಅಧಿಸೂಚಿಸಲಾದ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲು ವೇಳಾಪಟ್ಟಿಯನ್ನು ನಿನ್ನೆಯಷ್ಟೆ ಪ್ರಕಟಿಸಿತ್ತು. ಇದೀಗ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಕುರಿತು ಪ್ರಮುಖ ಹೆಚ್ಚುವರಿ ಮಾಹಿತಿಯನ್ನು ಬಿಡುಗಡೆ ಮಾಡಿದೆ.


ಹೌದು!!..ದಿನಾಂಕ 25-02-2023 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲು ನಿಗದಿ ಮಾಡಲಾಗಿದ್ದು, ಇದೀಗ ಈ ಪರೀಕ್ಷೆ ಕುರಿತು ಅಭ್ಯರ್ಥಿಗಳ ಮಾಹಿತಿಗಾಗಿ ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಆಯೋಗವು 2022ನೇ ಸಾಲಿನಲ್ಲಿ 2021 ರ ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳಡಿಯಲ್ಲಿ ಗ್ರೂಪ್‌ ಎ, ಬಿ, ಸಿ ವೃಂದದ ಹಲವಾರು ಅಧಿಸೂಚನೆಗಳನ್ನು ಹೊರಡಿಸಿದೆ.

ಪ್ರತಿಯೊಂದು ಅಧಿಸೂಚನೆಗೆ ಪ್ರತ್ಯೇಕವಾಗಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲು ಉಂಟಾಗುವ ಸಂಪನ್ಮೂಲ ಸಮಸ್ಯೆಗಳ ಜೊತೆಗೆ ಅಭ್ಯರ್ಥಿಗಳು ಪ್ರತಿ ಬಾರಿ ಪರೀಕ್ಷೆಯನ್ನು ಬರೆಯುವ ಪರಿಶ್ರಮವನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಮೌಲ್ಯ ಮಾಪನದಿಂದ ಉಂಟಾಗುವ ವಿಳಂಬವನ್ನು ತಡೆಯಲು 2021ರ ನಿಯಮಗಳು ಜಾರಿಗೆ ಬಂದ ಬಳಿಕ ಹೊರಡಿಸಲಾದ ಅಧಿಸೂಚನೆಗಳನ್ನು ಒಟ್ಟುಗೂಡಿಸಿಕೊಂಡು ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಿದೆ ಎಂದು ತಿಳಿಸಿದೆ.

ಕೆಪಿಎಸ್‌ಸಿ ದಿನಾಂಕ 15-12-2022 ರಂದು ಪ್ರಕಟಿಸಿದ ವೇಳಾಪಟ್ಟಿಯಲ್ಲಿನ ಎಲ್ಲ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ, ಅಭ್ಯರ್ಥಿಗಳು ಎಷ್ಟು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಸಹ, ಅವೆಲ್ಲವನ್ನು ಒಟ್ಟುಗೂಢಿಸಿ ಒಂದೇ ಬಾರಿ ದಿನಾಂಕ 25-02-2023 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಿಗದಿ ಮಾಡಲಾಗಿದೆ.

ಕೆಪಿಎಸ್‌ಸಿ’ಯ ಪ್ರಕಟಣೆ ಪ್ರಕಾರ 2021ರ ನಿಯಮಗಳ ಜಾರಿ ನಂತರ ಅಧಿಸೂಚಿಸಿದ ಹುದ್ದೆಗಳಿಗೆ, ಅಂದರೆ ಹಲವು ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ. ಈ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಹೀಗಾಗಿ, ಎಲ್ಲ ಅಧಿಸೂಚನೆಗಳನ್ನು ಒಗ್ಗೂಡಿಸಿಕೊಂಡು ಒಂದೇ ಬಾರಿ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸುತ್ತಿದೆ. ಈ ಪರೀಕ್ಷೆಯನ್ನು ಬರೆದರೆ ಸಾಕಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಉತ್ತೀರ್ಣ ಪ್ರಮಾಣ ಪತ್ರವನ್ನು ನೀಡಲು ಮುಂದಾಗಿದೆ.

ಅಭ್ಯರ್ಥಿಯು ಒಂದು ಬಾರಿ ಕನ್ನಡ ಭಾಷಾ ಪರೀಕ್ಷೆಯನ್ನು ಉತ್ತೀರ್ಣರಾದರೆ ಮುಂದಿನ ಇತರೆ ನೇಮಕಾತಿಯಲ್ಲಿ ಅದೇ ಫಲಿತಾಂಶವನ್ನು ಪರಿಗಣನೆ ಮಾಡಲಾಗುತ್ತದೆ. ಹೀಗಾಗಿ, ಮತ್ತೊಮ್ಮೆ ಈ ಪರೀಕ್ಷೆಯನ್ನೂ ಬರೆಯಬೇಕಾದ ಅವಶ್ಯಕತೆ ಇಲ್ಲ.

150 ಅಂಕಗಳ ಪರೀಕ್ಷೆಯಲ್ಲಿ ಪಾಸ್ ಆಗಲು ಕನಿಷ್ಠ 50 ಅಂಕಗಳನ್ನು ಪಡೆಯಬೇಕಾಗಿದೆ. ಒಂದು ವೇಳೆ, ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಬಾರಿ ಈ ಪರೀಕ್ಷೆ ಬರೆದಿದ್ದರೆ, ಈ ಸಂದರ್ಭ ಕೊನೆಯ ಬಾರಿ ಬರೆದ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸುವುದಾಗಿ ಸೂಚಿಸಲಾಗಿದೆ.

Leave A Reply

Your email address will not be published.