ತನ್ನ ಕನಸಿನ ಬೈಕ್ ನ್ನು 1 ರೂ.ನಾಣ್ಯ ನೀಡಿ ಖರೀದಿಸಿದ ಯುವಕ | ಬರೋಬ್ಬರಿ 112 ಬ್ಯಾಗ್ ನಲ್ಲಿ ತುಂಬಿಸಿ ತಂದ ಸಾಹಸಿ!!!
ಪ್ರತಿಯೊಬ್ಬರೂ ಜೀವನದಲ್ಲಿ ಸ್ವಂತ ವಾಹನ ಹೊಂದಬೇಕೆಂದು ಕನಸು ಕಾಣುತ್ತಾರೆ. ಇದಕ್ಕಾಗಿ ಸ್ವಲ್ಪ, ಸ್ವಲ್ಪ ಹಣವನ್ನು ಜೋಡಿಸಿ ತಮ್ಮ ಕನಸನ್ನು ನನಸು ಮಾಡಲು ಪ್ರಯತ್ನ ಪಡುತ್ತಾರೆ. ಇದೀಗ ಇಲ್ಲೊಬ್ಬ ತನ್ನ ಕನಸಿನ ಬೈಕ್ ಅನ್ನು ಖರೀದಿಸಲು ಬರೋಬ್ಬರಿ 112 ಬ್ಯಾಗ್‌ಗಳಲ್ಲಿ ಒಂದು ರೂಪಾಯಿಯ ನಾಣ್ಯಗಳನ್ನು
ನೀಡಿ ಖರೀದಿಸಿರುವುದು ಎಲ್ಲೆಡೆ ವೈರಲ್ ಆಗುತ್ತಿದೆ.
‘ಹನಿ ಹನಿ ಗೂಡಿದರೆ ಹಳ್ಳ’ ಅನ್ನೋ ಮಾತಿನ ಹಾಗೆಯೇ ಈತ ಸಣ್ಣ ಮೊತ್ತದ ಹಣವನ್ನು ಉಳಿತಾಯ ಮಾಡಿ ತನ್ನ ಕನಸಿನ ಬೈಕ್ ಅನ್ನೇ ತೆಗೆದುಕೊಂಡಿದ್ದಾನೆ. ಪಾಲಿಟೆಕ್ನಿಕ್ ಓದುತ್ತಿರುವ ವಿದ್ಯಾರ್ಥಿ ವೆಂಕಟೇಶ್ ಒಬ್ಬ ಯುಟ್ಯೂಬರ್ ಆಗಿದ್ದೂ, ಬೈಕ್ ಖರೀದಿಸುವ ಸಂಪೂರ್ಣ ಅನುಭವವನ್ನು ತನ್ನ ವೈಯಕ್ತಿಕ ಯುಟ್ಯೂಬ್ ಚಾನೆಲ್ VILLAN MAMA GAMING ನಲ್ಲಿ ಹಂಚಿಕೊಂಡಿದ್ದಾರೆ.
ಈ ತನ್ನ ವೀಡಿಯೊದಲ್ಲಿ ಹಣವನ್ನು ಸಂಗ್ರಹಿಸಲು ಕಠಿಣವಾಗಿ ಪ್ರಯತ್ನಿಸಿದ ಬಗ್ಗೆ ತಿಳಿಸಿದ್ದಾರೆ. ವೆಂಕಟೇಶ್ ತಮ್ಮ ಬಾಲ್ಯದಿಂದಲೂ ಸರಿಸುಮಾರು 40,000 ನಾಣ್ಯಗಳನ್ನು ಉಳಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಉಳಿದ ಹಣವನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ. ಶೋರೂಮ್ ಉದ್ಯೋಗಿಗಳು ನಾಣ್ಯಗಳ ಬ್ಯಾಗ್‌ಗಳನ್ನು ಪಾವತಿಯಾಗಿ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರು, ಆದರೆ ಸ್ಪೋರ್ಟ್ಸ್ ಬೈಕ್‌ಗಳ ಬಗ್ಗೆ ಯುಟ್ಯೂಬರ್’ಗೆ ಇದ್ದ ಉತ್ಸಾಹದ ಬಗ್ಗೆ ತಿಳಿದ ನಂತರ ಅವರು ಬೇಗನೆ ಒಪ್ಪಿಕೊಂಡರು ಎಂದು ಅವರು ವಿವರಿಸಿದ್ದಾರೆ.
ಒಂದು ರೂಪಾಯಿಯ ನಾಣ್ಯಗಳ 112 ಬ್ಯಾಗ್‌ಗಳನ್ನು ತುಂಬಿದ ಮಿನಿ ಟೆಂಪೋ ಪಿಕಪ್‌ನೊಂದಿಗೆ ಕೆಟಿಎಂ ಡೀಲರ್‌ಶಿಪ್‌ಗೆ ಬಂದ ವೆಂಕಟೇಶ್, ಅವರು ಶೋರೂಮ್‌ನಲ್ಲಿ ಎಲ್ಲಾ 1 ರೂಪಾಯಿ ನಾಣ್ಯಗಳಲ್ಲಿ 2.85 ಲಕ್ಷ ರೂಪಾಯಿಗಳನ್ನು ಪಾವತಿಸಿ ತಮ್ಮಕನಸಿನ ಸ್ಪೋರ್ಟ್ಸ್ ಬೈಕ್ ಅನ್ನು ಡೆಲಿವರಿ ತೆಗೆದುಕೊಂಡಿದ್ದಾರೆ. ಕೆಟಿಎಂ ಡೀಲರ್‌ಶಿಪ್ ಸಿಬ್ಬಂದಿಗೆ ನಾಣ್ಯಗಳನ್ನು ಎಣಿಸಲು ಅರ್ಧ ದಿನ ಕಾಯುವಂತೆ ಮಾಡಿತು. ಅಂತಿಮವಾಗಿ ನಾಣ್ಯಗಳನ್ನು ಎಣಿಸಿದ ನಂತರ ಪಾವತಿಯನ್ನು ಸ್ವೀಕರಿಸಿಕೊಂಡಿದ್ದಾರೆ. ಎಲ್ಲಾ ನಾಣ್ಯಗಳೊಂದಿಗೆ ನೆಚ್ಚಿನ ಕೆಟಿಎಂ ಸ್ಪೋರ್ಟ್ಸ್ ಬೈಕು ಖರೀದಿಸುವ ಅಪರೂಪದ ಸಂದರ್ಭವು ಮುಖ್ಯವಾಹಿನಿಯ ಸ್ಥಳೀಯ ಮಾಧ್ಯಮಗಳ ಗಮನವನ್ನು ಸಹ ಸೆರೆಹಿಡಿಯಿತು.
ನಮ್ಮ ಕನಸಿನ ವಾಹನ ಖರೀದಿಸಸುವ ಕನಸನ್ನು ನನಸಾಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಅದು ಸಣ್ಣ ಸಣ್ಣ ಉಳಿತಾಯದಿಂದಲೂ ಸಾಧ್ಯವಾಗುತ್ತದೆ. ಅದಕ್ಕಾಗಿಯೇ ‘ಇಂದಿನ ಉಳಿತಾಯವೇ ನಾಳಿನ ಆದಾಯ’ ಎಂದು ಹಿರಿಯರು ಹೇಳಿರುವುದು.