Delhi Murder Case : ಶ್ರದ್ಧಾ ಕೊಲೆ ಪ್ರಕರಣ : ಪೊಲೀಸರಿಗೇ ಸವಾಲು ಹಾಕಿದ್ದ ಆರೋಪಿ | ಮೂಳೆ ಪತ್ತೆ ಹಚ್ಚಿದ ಪೊಲೀಸರು

Share the Article

ದೇಶದಾದ್ಯಂತ ಸಂಚಲನ ಮೂಡಿಸಿರುವ ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರದ್ಧಾಳ ಮೂಳೆಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಫ್ತಾಬ್ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಶ್ರದ್ಧಾ ನಂತರ ಆತನಿಂದಲೇ ಭೀಕರವಾಗಿ ಹತ್ಯೆಯಾಗಿದ್ದು ನಿಜಕ್ಕೂ ದುರದೃಷ್ಟಕರ. ಅಫ್ತಾಬ್ ಆಕೆಯನ್ನು ಭೀಕರವಾಗಿ ಹತ್ಯೆಗೈದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ತುಂಬಿಸಿಟ್ಟಿದ್ದ. ಕೊಲೆ ಮಾಡಿರುವ ವಿಚಾರ ಯಾರಿಗೂ ತಿಳಿಯಬಾರದು ಎಂದು ನಾನಾ ರೀತಿಯಲ್ಲಿ ಮರೆಮಾಚಲು ಪ್ರಯತ್ನಿಸಿದ್ದ, ಆದರೆ ಪೋಲೀಸರ ಕೈಗೆ ಸಿಕ್ಕಿಬಿದ್ದು ಆಘಾತಕಾರಿ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.

ಮದುವೆಯ ವಿಚಾರದಲ್ಲಿ ನಡೆದ ಜಗಳ ಮರಣದವರೆಗೂ ಬಂದಿತು. ಇವರಿಬ್ಬರ ಜಗಳ ಅತಿರೇಕವಾಗಿ ಆತ ಶ್ರದ್ಧಾಳ ಕತ್ತುಹಿಸುಕಿದ. ಕೊನೆಗೆ ದೇಹವನ್ನು ತುಂಡರಿಸಿ, ಫ್ರಿಡ್ಜ್ ನಲ್ಲಿ ತುಂಬಿಸಿಟ್ಟು, ಪ್ರತಿದಿನ ದೇಹದ ಪೀಸ್ ಗಳನ್ನು ಮಧ್ಯರಾತ್ರಿ ಕಾಡಿಗೆ ಹೋಗಿ ಎಸೆದು ಬರುತ್ತಿದ್ದ. ಈತನ ಈ ಕೃತ್ಯದಿಂದ ಕೊನೆಗೆ ಪೋಲೀಸರ ಬಲೆಗೆ ಬಿದ್ದಿದ್ದಾನೆ.

ಪೊಲೀಸ್‌ ಕಸ್ಟಡಿಯಲ್ಲಿ ಅಫ್ತಾಬ್‌ ತಾನು ಶ್ರದ್ಧಾಳ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಆದರೆ ಪದೇ ಪದೇ ತನ್ನ ಹೇಳಿಕೆಯನ್ನು ಬದಲಾಯಿಸುತ್ತಿದ್ದ. ಹಾಗೇ ಅಫ್ತಾಬ್ ಪೋಲೀಸರಿಗೇ ಸವಾಲು ಹಾಕಿದ್ದ, ಆತನ ಸವಾಲನ್ನು ಸ್ವೀಕರಿಸಿ ಇದೀಗ ಶ್ರದ್ಧಾಳ ಮೂಳೆಗಳನ್ನು ಪೋಲೀಸರು ಪತ್ತೆ ಹಚ್ಚಿದ್ದಾರೆ.

ಆರೋಪಿ ಅಫ್ತಾಬ್‌ ನನ್ನು ಸುಳ್ಳು ಪತ್ತೆ ಹಾಗೂ ನಾರ್ಕೋ ಪರೀಕ್ಷೆಗೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಒಳಪಡಿಸಿದ್ದರು. ಈ ವೇಳೆ ಆರೋಪಿ ಸತ್ಯ ಬಾಯ್ಬಿಟ್ಟಿದ್ದು, ಪೋಲೀಸರು ದೆಹಲಿಯ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ 12 ಮೂಳೆಯ ತುಂಡುಗಳನ್ನು ಪತ್ತೆಹಚ್ಚಿದ್ದಾರೆ. ಈ ಮೂಳೆಗಳು ಶ್ರದ್ಧಾಳ ತಂದೆಯ ಡಿಎನ್ ಎ ಗೆ ಹೊಂದಾಣಿಕೆಯಾಗುತ್ತಿವೆ ಎಂದು ವರದಿ ತಿಳಿಸಿದೆ.

ಮೂಳೆಯ ಮಾದರಿಗಳನ್ನು ಡಿಎನ್‌ಎ ವಿಶ್ಲೇಷಣೆಗಾಗಿ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಫ್ತಾಬ್ ನ ಪಾಲಿಗ್ರಾಫ್ ಪರೀಕ್ಷೆಯ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯವು ಬುಧವಾರ ಪೊಲೀಸರಿಗೆ ಸಲ್ಲಿಸಿದೆ.

Leave A Reply