ನಟಿ ರಮ್ಯಾ ವಿರುದ್ಧ ದೂರು ದಾಖಲು !!!

ಹಲವು ಸಮಯಗಳ ನಂತರ ಇದೀಗ ಮೋಹಕ ತಾರೆ ರಮ್ಯಾ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದಾರೆ. ಆದರೆ ಅವರು ಈ ಬಾರಿ ನಾಯಕಿಯಾಗಿ ಅಲ್ಲ, ನಿರ್ಮಾಪಕಿಯಾಗಿ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅವರ ನಿರ್ಮಾಣದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮೂಡಿಬರುತ್ತಿದ್ದು, ಈಗಾಗಲೇ ಚಿತ್ರದ ಶೂಟಿಂಗ್​ ಕೂಡ ಮುಗಿದಿದೆ. ಆದರೆ ಇದರ ಬೆನ್ನಲ್ಲೆ ನಟಿ ರಮ್ಯಾ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ದೂರು ದಾಖಲಾಗಲು ಕಾರಣವೇನು? ಎಂಬುದರ ಮಾಹಿತಿ ಇಲ್ಲಿದೆ.

 

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಶೀರ್ಷಿಕೆಯೇ ನಟಿ ರಮ್ಯಾ ವಿರುದ್ಧ ದೂರು ದಾಖಲಾಗಲು ಕಾರಣ ಎನ್ನಲಾಗುತ್ತಿದೆ. ಈ ಶೀರ್ಷಿಕೆಯನ್ನು ಬಳಸಬಾರದು ಎಂದು ಹಿರಿಯ ನಿರ್ದೇಶಕ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ, ಈ ಶೀರ್ಷಿಕೆಯನ್ನು ತಾವು ನೋಂದಾಯಿಸಿದ್ದು, ಬೇರೆ ಯಾರಿಗೂ ಇದನ್ನು ಬಳಸಲು ಅವಕಾಶ ನೀಡಬಾರದು ಎಂದು ಖಾರವಾಗಿ ಬರೆದಿದ್ದಾರೆ.

1990ರಲ್ಲಿ ಬಿಡುಗಡೆಯಾಗಿದ್ದ ‘ಬಣ್ಣದ ಗೆಜ್ಜೆ’ ಸಿನಿಮಾಗೆ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಅವರು ನಿರ್ದೇಶನ ಮಾಡಿದ್ದರು. ಈ ‘ಬಣ್ಣದ ಗೆಜ್ಜೆ’ ಚಿತ್ರದಲ್ಲಿನ ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಎಂಬ ಹಾಡು ಇವತ್ತಿಗೂ ಕೂಡ ತುಂಬಾ ಫೇಮಸ್​ ಆಗಿದೆ. ಇದೇ ಶೀರ್ಷಿಕೆಯನ್ನು ಇಟ್ಟುಕೊಂಡು ನಟಿ ರಮ್ಯಾ ಅವರು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಎಸ್​.ವಿ. ರಾಜೇಂದ್ರ ಸಿಂಗ್​ ಬಾಬು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಟಿ ರಮ್ಯಾ ಅವರು ‘ಆಪಲ್​ ಬಾಕ್ಸ್​’ ಹೆಸರಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಅದರ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಾಗಿದೆ. ಇನ್ನೂ ರಾಜ್​ ಬಿ. ಶೆಟ್ಟಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು, ಸಿರಿ ರವಿಕುಮಾರ್​ ಅವರು ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಆದರೆ ಇದೀಗ ಈ ಸಿನಿಮಾಗೆ ಶೀರ್ಷಿಕೆ ವಿವಾದ ಎದುರಾಗಿದೆ.

ಹಾಗೇ ಒಂದೇ ಶೀರ್ಷಿಕೆಯಲ್ಲಿ ಎರಡು ಸಿನಿಮಾ ನಿರ್ಮಾಣ ಆಗುತ್ತಿರುವುದು ಅಚ್ಚರಿ ಮೂಡಿಸಿದೆ. ಇನ್ನೂ ರಮ್ಯಾ ಅವರು ತಮ್ಮ ಚಿತ್ರದ ಶೀರ್ಷಿಕೆಯ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಹಾಗೂ ಈ ಬಗ್ಗೆ ನಟಿ ರಮ್ಯಾ ಅವರ ಪ್ರತಿಕ್ರಿಯೆ ಏನು ಎಂಬುದನ್ನ ಕಾದು ನೋಡಬೇಕಿದೆ.

Leave A Reply

Your email address will not be published.