ಶಾಲೆಗಳಲ್ಲಿ ಬಿಸಿಯೂಟದ ಸಮಯದಲ್ಲಿ ಬದಲಾವಣೆ – ಶಿಕ್ಷಣ ಇಲಾಖೆ ಸೂಚನೆ
ಸರ್ಕಾರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದೆ. ಮಕ್ಕಳ ಶಿಕ್ಷಣ, ಆರೋಗ್ಯ, ಶೈಕ್ಷಣಿಕ ಪ್ರಗತಿಯ ಜೊತೆಗೆ ಊಟದ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಈ ನಡುವೆ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಸರಕಾರ ಮುಂದಾಗಿದೆ.ಮಕ್ಕಳ ಸಂಖ್ಯೆ ಹೆಚ್ಚಾಗಿ ಇರುವಂತಹ ಶಾಲೆಗಳಲ್ಲಿ, ಒಂದೇ ಅಡುಗೆ ಮನೆ ಇರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟದ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ.
ಒಂದರಿಂದ ಐದನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 1 ಗಂಟೆಯಿಂದ 1.45 ರವರೆಗೆ ಹಾಗೂ 6 ರಿಂದ 10ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ 2 ಗಂಟೆಯಿಂದ 2.40 ರವರೆಗೆ ಪ್ರತ್ಯೇಕ ಸಮಯದಲ್ಲಿ ಬಿಸಿಯೂಟ ವಿತರಣೆ ಮಾಡಲು ಸೂಚಿಸಲಾಗಿದೆ.
ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.ದೊಡ್ಡ ಮಕ್ಕಳೊಂದಿಗೆ ಚಿಕ್ಕ ಮಕ್ಕಳನ್ನು ಜೊತೆಯಾಗಿ ಆಹಾರ ವಿತರಣೆ ಮಾಡುವ ವೇಳೆ ಕಡಿಮೆ ಸಮಯದಲ್ಲಿ ಊಟ ನೀಡುವಾಗ ತಟ್ಟೆ -ಲೋಟ ತೊಳೆಯುವಾಗ ನೂಕು ನುಗ್ಗಲು ಉಂಟಾಗುವ ಸಾಧ್ಯತೆಗಳಿವೆ. ಹೀಗಾಗಿ, ಇದನ್ನು ತಡೆಯುವ ನಿಟ್ಟಿನಲ್ಲಿ ಬಿಸಿಯೂಟ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಅಷ್ಟೆ ಅಲ್ಲದೆ ಮಕ್ಕಳ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಬಿಸಿಯೂಟದ ಗುಣಮಟ್ಟ, ಪ್ರಮಾಣ, ಪೌಷ್ಟಿಕತೆ, ಸ್ವಚ್ಛತೆ, ಸುರಕ್ಷತೆ, ಕೊಂದು ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸಲಾಗಿದೆ.
ರಾಜ್ಯ ಸರ್ಕಾರದ ಮೌಲ್ಯಮಾಪನ ಪ್ರಾಧಿಕಾರ ಮತ್ತು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ವತಿಯಿಂದ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಹಾಗೂ ಕ್ಷೀರಭಾಗ್ಯ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಈಗಾಗೇ ವಿವಿಧ ಶಿಫಾರಸುಗಳಲ್ಲಿ ಈ ಅಂಶವನ್ನು ಸೇರಿಸಲಾಗಿದೆ.