ಇನ್ಮುಂದೆ ಪೊಲೀಸರ ಸಹಾಯವಿಲ್ಲದೆಯೇ ಸೆರೆಹಿಡಿಯಲಾಗುತ್ತೆ ಸಂಚಾರ ನಿಯಮ ಉಲ್ಲಂಘನೆ!

ವಾಹನ ಸವಾರರಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದ್ದು, ಎಲ್ಲವೂ ಟೆಕ್ನಾಲಜಿ ಮೂಲಕ ಸಾಗುವಂತೆ ಆಗಿದೆ. ಇದೀಗ ಟ್ರಾಫಿಕ್ ಗೆ ಸಂಬಂಧಿಸಿದಂತೆ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಪೋಲೀಸರ ಅಗತ್ಯವಿಲ್ಲದೆ ಸಂಚಾರ ನಿಯಮ ಉಲ್ಲಂಘನೆಗಳನ್ನು ಸೆರೆಹಿಡಿಯಲಾಗುತ್ತದೆ.

ಹೌದು. ಬೆಂಗಳೂರು ಪೊಲೀಸರು ನಗರದ 50 ಪ್ರಮುಖ ಜಂಕ್ಷನ್‌ಗಳಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಈ ಮೂಲಕ ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಸಂಚಾರ ಉಲ್ಲಂಘನೆಗಳನ್ನು ಸೆರೆಹಿಡಿಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು ಪೊಲೀಸರ ಪ್ರಕಾರ, ಐಟಿಎಂಎಸ್ ಪೊಲೀಸರ ಸಹಾಯವಿಲ್ಲದೆ ಸಂಚಾರ ಉಲ್ಲಂಘನೆಯನ್ನು ಪತ್ತೆಹಚ್ಚುತ್ತದೆ. 50 ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲಾಗಿರುವ 250 ಎಎನ್‌ಪಿಆರ್‌ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆಯನ್ನು ಸೆರೆಹಿಡಿಯಲಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇದರ ಸ್ವಯಂಚಾಲಿತ ವ್ಯವಸ್ಥೆಯು ನೋಟಿಸ್ ಅನ್ನು ರಚಿಸುತ್ತದೆ ಮತ್ತು ಚಲನ್ ಅನ್ನು ಉಲ್ಲಂಘಿಸುವವರಿಗೆ ಎಸ್‌ ಎಂಎಸ್ ಮೂಲಕ ಕಳುಹಿಸುತ್ತದೆ.

ಆದರೆ, ಈ ಕ್ರಮ ಸಾರ್ವಜನಿಕರಿಂದ ದಂಡ ವಸೂಲಿ ಮಾಡಲು ಅಲ್ಲ, ನಗರದಲ್ಲಿ ಸಂಚಾರ ಶಿಸ್ತು ಹೆಚ್ಚಿಸಲು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ʼಸಂಚರಿಸುವಾಗ ಯಾವುದೇ ತಪ್ಪನ್ನು ಮಾಡಬೇಡಿ, ನಮ್ಮ ಉದ್ದೇಶವು ದಂಡವನ್ನು ಸಂಗ್ರಹಿಸುವುದು ಅಲ್ಲ. ಉತ್ತಮ ರಸ್ತೆ ನಡವಳಿಕೆ ಮತ್ತು ಅನುಸರಣೆಯನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆʼ ಎಂದಿದ್ದಾರೆ.

ಐಟಿಎಂಎಸ್ ಅತಿವೇಗ, ಕೆಂಪು ದೀಪ ಉಲ್ಲಂಘನೆ, ಸ್ಟಾಪ್ ಲೇನ್ ಉಲ್ಲಂಘನೆ, ಹೆಲ್ಮೆಟ್ ಉಲ್ಲಂಘನೆ, ಟ್ರಿಪಲ್ ರೈಡಿಂಗ್, ಮೊಬೈಲ್ ಫೋನ್ ಬಳಸುವಾಗ ಚಾಲನೆ ಮತ್ತು ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸುವುದು ಮುಂತಾದ ಅನೇಕ ಸಂಚಾರ ಉಲ್ಲಂಘನೆಗಳನ್ನು ಪತ್ತೆ ಮಾಡುತ್ತದೆ.

Leave A Reply

Your email address will not be published.