ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ಕಾವು ಹೇಮನಾಥ್ ಶೆಟ್ಟಿ ವಜಾ, ದ್ವಿದಳ ಧಾನ್ಯವಾಗಿದೆ ಪುತ್ತೂರು ಕಾಂಗ್ರೆಸ್ !!!
ಪುತ್ತೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ತನ್ನ ಟಿಕೆಟ್ ಹಂಚಿಕೆಗೆ ಅರ್ಜಿ ಸಲ್ಲಿಸಲು ಕೋರಿದ್ದ ಬೆನ್ನಲ್ಲೇ ಹಲವು ಆಕಾಂಕ್ಷಿಗಳು ಡಿ.ಕೆ ಶಿವಕುಮಾರ್ ಬಳಿಗೆ ತೆರಳಿದ್ದು, ಇದರ ಬೆನ್ನಲ್ಲೇ ಪುತ್ತೂರಿನ ಕಾಂಗ್ರೆಸ್ ನಾಯಕ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ ಆದೇಶವೊಂದು ಹೊರಬಿದ್ದಿದೆ. ಸಲೀಂ ಅಹ್ಮದ್ ಕಾರ್ಯಾಧ್ಯಕ್ಷರಾಗಿರುವ ಪ್ರದೇಶ ಕಾಂಗ್ರೆಸ್ ಸಮಿತಿ ಈ ನಿರ್ಣಯ ಕೈಗೊಂಡಿದೆ.
ಕಳೆದ ಒಂದೆರಡು ದಿನಗಳ ಹಿಂದೆ ಕೋಡಿಂಬಾಡಿ ರೈ ಎಸ್ಟೇಟ್ ಮಾಲೀಕ, ರೈ ಎಜುಕೇಷನ್ ಟ್ರಸ್ಟ್ ಗಳ ಸಂಚಾಲಕರಾದ ಅಶೋಕ್ ಕುಮಾರ್ ರೈ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ಬೆನ್ನಲ್ಲೇ ಕಾವು ಬಳಗದಿಂದ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ, ‘ದುಡ್ಡಿದ್ದರೆ ಡಿಕೆಶಿಯವರನ್ನೇ ಖರೀದಿಸಬಹುದು, ನಮ್ಮನ್ನಲ್ಲ ‘ ಎನ್ನುವ ಹೇಳಿಕೆ ಭಾರೀ ವೈರಲ್ ಆದ ಬೆನ್ನಲ್ಲೇ ಈ ರೀತಿಯ ಬದಲಾವಣೆ ಆಗಿದೆ ಎನ್ನಲಾಗಿದೆ.
ಕಾವು ಹೇಮನಾಥ ಶೆಟ್ಟಿಯವರು ಈ ರೀತಿ ಹೇಳಿಕೆ ನೀಡಿದ್ದಾರೆಯಾ ಇಲ್ಲವಾ, ಖಚಿತವಿಲ್ಲ. ಅಷ್ಟರ ಒಳಗೆ ಕಾವು ಹೇಮನಾಥ ಶೆಟ್ಟಿಯವರ ಮೇಲೆ ಕ್ರಮ ಜರುಗಿಸಲಾಗಿದೆ. ಮೊದಲೇ ಬಣ ರಾಜಕೀಯದಿಂದ ತತ್ತರಿಸಿ ಹೋಗಿರುವ ಪ್ರತಿಷ್ಟಿತ ಕ್ಷೇತ್ರ ಪುತ್ತೂರಿನಲ್ಲಿ ಈಗ ಕಾಂಗ್ರೆಸ್ ಈಗ ದ್ವಿದಳ ಧಾನ್ಯದಂತಾಗಿ ಹೋಗಿದೆ !!
ಇದೀಗ ಪುತ್ತೂರಿನ ಕಾಂಗ್ರೆಸ ಪಾಳಯಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಶೋಕ್ ಕುಮಾರ್ ರೈ ಅವರ ಆಗಮನ ಆಗತ್ತೆ ಎನ್ನುವ ದಿನದಿಂದ ಹಿಡಿದು ಇವತ್ತಿನ ತನಕ ಕಾಂಗ್ರೆಸಿನಲ್ಲಿ ಅಂತರ್ ಕಲಹ ಹೆಚ್ಚುತ್ತಿದೆ. ಸದ್ಯಕ್ಕೆ ಉದ್ಯಮಿ, ದುಡ್ಡಿನ ಗಟ್ಟಿ ಕುಳ ಕೋಡಿಂಬಾಡಿ ಅಶೋಕ್ ರೈ ಅವರ ಕೈ ಮೇಲಾದಂತೆ ಮೇಲ್ನೋಟಕ್ಕೆ ಮಾತ್ರ ಭಾಸವಾಗುತ್ತದೆ. ಆದರೆ ಒಳಗೆ ಪುತ್ತೂರಿನ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತ ಕುದಿಯುತ್ತಿದ್ದಾನೆ. ಕಾಂಗ್ರೆಸ್ಸಿಗೆ ಹಲವು ದಶಕಗಳ ಕಾಲ ಸ್ವಂತ ಕೆಲಸ ಕಾರ್ಯ ಬಿಟ್ಟು ದುಡಿದ ಕಾವು ಹೇಮನಾಥ ಶೆಟ್ಟಿಯವರ ಬಣ ಈ ನಿರ್ಧಾರದಿಂದ ಕುಪಿತರಾಗಿದ್ದಾರೆ. ಹೈಕಮಾಂಡಿನ ಈ ನಡೆಯಿಂದ ಎಲ್ಲರಿಗೂ ಬೇಸರವಾಗಿದೆ. ಅಮಾಯಕ ಮತ್ತು ಸಾದಾ ಸೀದಾ ಸಜ್ಜನ ಕಾವು ಹೇಮನಾಥ ಶೆಟ್ಟಿ ಅವರನ್ನು ಮೂಲೆಗುಂಪು ಮಾಡಲು ಹುನ್ನಾರ ನಡೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.