ಮಂಗಳೂರು : ಪಿಜಿಗಳಿಗೆ ಬರಲಿದೆ ಹೊಸ ರೂಲ್ಸ್ | ಏನೆಲ್ಲಾ?
ಈಗಾಗಲೇ ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಶಂಕಿತ ಉಗ್ರ ಶಾರಿಕ್ ಬಗ್ಗೆ ಕೆಲವೊಂದು ಮಾಹಿತಿಗಳು ಮತ್ತು ಸಾಕ್ಷಿಗಳು ದೊರೆತಿರುವುದು ನಮಗೆಲ್ಲ ತಿಳಿದಿದೆ. ಹಾಗೆಯೇ ಈ ಪ್ರಕರಣದ ಬಳಿಕ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
ಮಂಗಳೂರು ಎಜುಕೇಶನ್ ಹಬ್ ಆಗಿದ್ದು, ದೇಶ ವಿದೇಶಗಳಿಂದಲೂ ಸಾವಿರಾರು ವಿದ್ಯಾರ್ಥಿಗಳು ಮಂಗಳೂರು ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸೆಳೆಯಲು ಅನಧಿಕೃತ ಪಿಜಿಗಳ ಸಂಖ್ಯೆಯೂ ಮಂಗಳೂರಿನಲ್ಲಿ ಜಾಸ್ತಿಯಾಗಿದೆ.
2019ರಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿದ್ದ ಹರ್ಷ, ಎಲ್ಲಾ ಪಿಜಿಗಳು, ಸರ್ವೀಸ್ ಅಪಾರ್ಟ್ಮೆಂಟ್ ಗಳು, ಹಾಸ್ಟೆಲ್ ಗಳು ಕಡ್ಡಾಯವಾಗಿ ಪೊಲೀಸ್ ಇಲಾಖೆಗೆ ದಾಖಲೆಗಳನ್ನು ನೀಡಬೇಕು, ನಿಯಮ ಪಾಲಿಸಬೇಕು ಅಂತಾ ಆದೇಶ ನೀಡಿದ್ದರು.
ಆ ಅದೇಶದ ಪ್ರಕಾರ ಪಿಜಿಗಳಲ್ಲಿ ಇರುವ ವಿದ್ಯಾರ್ಥಿಗಳ ಹೆಸರು, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು ಆಯಾ ಪೊಲೀಸ್ ಠಾಣೆಗೆ ನೀಡಬೇಕು. ಪಿಜಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ವಿದೇಶಿ ವಿದ್ಯಾರ್ಥಿಗಳು ಇದ್ದಲ್ಲಿ ಅವರ ಪಾಸ್ ಪೋರ್ಟ್, ವೀಸಾದ ವಿವರಗಳನ್ನು ಠಾಣೆಗೆ ನೀಡಬೇಕೆಂದು ನಿಯಮ ಹೊರಡಿಸಲಾಗಿತ್ತು. ಆದರೆ ಆ ನಿಯಮಗಳೆಲ್ಲಾ ಸರಿಯಾಗಿ ನಿಯಮನುಸಾರ ಅನುಷ್ಠಾನ ಆಗಲೇ ಇಲ್ಲ .
ಕೆಲವು ಪಿಜಿಗಳಲ್ಲಿ ಡ್ರಗ್ಸ್ ,ಅನೈತಿಕ ಚಟುವಟಿಕೆ, ಅಪರಾಧ ಚಟುವಟಿಕೆಗಳು ನಡೆಯುತ್ತಿದೆ. ಪೊಲೀಸ್ ತನಿಖೆಯ ವೇಳೆಯಲ್ಲಿ ದಾಖಲೆಗಳಿಲ್ಲದ ವಾಸ್ತವ್ಯ, ಪಿಜಿಗಳು ಪರವಾನಿಗೆ ಇಲ್ಲದಿರೋದು ಕೂಡಾ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಈ ಹಿನ್ನಲೆಯಲ್ಲಿ ನಿಯಮ ಬಿಗಿಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಮಂಗಳೂರು, ಮುಲ್ಕಿ, ಮೂಡಬಿದಿರೆ, ಉಳ್ಳಾಲ ಸೇರಿದಂತೆ ಪೊಲೀಸ್ ಕಮೀಷನೇಟರ್ ವ್ಯಾಪ್ತಿಯಲ್ಲಿ 600ಕ್ಕೂ ಅಧಿಕ ಪಿಜಿಗಳಿವೆ. ಈ ಪಿಜಿಗಳಲ್ಲಿ ಅತೀ ಹೆಚ್ಚು ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳಿದ್ದಾರೆ. ಆದರೆ ಎಲ್ಲಾ ಪಿಜಿಗಳ ವಿವರಗಳು ಪೊಲೀಸ್ ಇಲಾಖೆಯ ಬಳಿ ಇಲ್ಲದಿರುವಿದು ಪೊಲೀಸರಿಗೆ ಸಮಾಜದ ಹಿತದೃಷ್ಟಿ ಯಿಂದ ಆತಂಕ ಉಂಟಾಗಿದೆ.
ಪಿಜಿಗಳಿಗೆ ಹೊಸ ನಿಯಮಾವಳಿಗಳನ್ನು ಹೊರಡಿಸುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಪಿಜಿಗಳಿಗೆ ಹೊಸ ನಿಯಮಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸುತ್ತೇವೆ. ಸ್ಥಳೀಯ ಆಗುಹೋಗುಗಳ ಬಗ್ಗೆ ಸಾರ್ವಜನಿಕರು ಗಮನ ಇಡಲು ನೇಬರ್ ಹುಡ್ ವಾಚ್ ಪರಿಕಲ್ಪನೆಯನ್ನೂ ಮಂಗಳೂರು ನಗರ ದಲ್ಲಿ ಜಾರಿಗೊಳಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಸಮಾಜದ ಹಿತದೃಷ್ಟಿ ಮತ್ತು ಶಾಂತಿ ಸೌಹಾರ್ದತೆಗೆ ಧಕ್ಕೆ ತರುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮಂಗಳೂರು ಪೊಲೀಸರು ಈ ಮೇಲಿನ ನಿಯಮಗಳನ್ನು ಜಾರಿಗೊಳಿಸಿದ್ದಾರೆ .