ನನ್ನ ಹೇಳಿಕೆ ಹಿಂಪಡೆಯುತ್ತೇನೆ ಎಂದ ಬದ್ರುದ್ದೀನ್ ಅಜ್ಮಲ್
ಹಿಂದೂಗಳು ಮುಸ್ಲಿಮರಂತೆ ಅತಿ ಚಿಕ್ಕ ವಯಸ್ಸಿಗೆ ಮದುವೆಯಾಗಲಿ. ಹಿಂದೂಗಳು 40 ವರ್ಷದ ನಂತರ ಮದುವೆಯಾದರೆ ಮಕ್ಕಳಾಗುವುದು ಹೇಗೆ? ಅವರು 2-3 ವ್ಯವಹಾರಗಳನ್ನು ಇಟ್ಟುಕೊಳ್ಳುತ್ತಾರೆ ಎಂದು ಎಐಯುಡಿಎಫ್ ಮುಖ್ಯಸ್ಥ ಅಜ್ಮಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಅಲ್ಲದೆ, ಹಿಂದೂಗಳು ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಹೆಣ್ಣುಮಕ್ಕಳಿಗೆ 18-20ರ ವಯಸ್ಸಿನಲ್ಲಿ ಮದುವೆ ಮಾಡಬೇಕು. ಮುಸ್ಲಿಂ ಗಂಡಸರು 20- 22ನೇ ವಯಸ್ಸಿನಲ್ಲೇ ಮದುವೆಯಾಗುತ್ತಾರೆ ಮತ್ತು ಮುಸ್ಲಿಂ ಮಹಿಳೆಯರು 18ನೇ ವಯಸ್ಸಿಗೆ ಮದುವೆಯಾಗುತ್ತಾರೆ. ಈ ನಿಯಮ ಕಾನೂನಿನ ಅಡಿಯಲ್ಲಿ ಅನುಮತಿ ಹೊಂದಿದೆ ಎಂದು ಹೇಳಿದ್ದರು. ಈ ಬಗ್ಗೆ ಬಿಜೆಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದವು.
ಇದೀಗ ಈ ಹೇಳಿಕೆ ತಿರುವು ಪಡೆದಿದೆ. ಎಐಯುಡಿಎಫ್ ಮುಖ್ಯಸ್ಥ ಅಜ್ಮಲ್ ತನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದಾರೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಹಾಗೂ ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ನನಗೆ ಇರಲಿಲ್ಲ ಎಂದು ಈ ಮೊದಲು ತಾನಾಡಿದ್ದ ಹೇಳಿಕೆಗಳ ಕುರಿತು ಎಐಯುಡಿಎಫ್ ಅಧ್ಯಕ್ಷ ಮತ್ತು ಅಸ್ಸಾಂ ಸಂಸದ ಬದ್ರುದ್ದೀನ್ ಅಜ್ಮಲ್ ಕ್ಷಮೆ ಯಾಚಿಸಿದ್ದಾರೆ.
ನಂತರ ತನ್ನ ಹೇಳಿಕೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಸರ್ಕಾರ ಅಲ್ಪಸಂಖ್ಯಾತರಿಗೆ ನ್ಯಾಯ ನೀಡಬೇಕು. ಅವರಿಗೆ ಶಿಕ್ಷಣ ಮತ್ತು ಉದ್ಯೋಗವನ್ನು ನೀಡಬೇಕು ಎಂದು ನಾನು ಬಯಸುತ್ತೇನೆ ಎಂದು ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದರು.