BS Rammurthy: ರಂಗಸಂಪದ ತಂಡದ ಹಿರಿಯ ನಟ ಬಿ.ಎಸ್.ರಾಮಮೂರ್ತಿ ಇನ್ನಿಲ್ಲ

ನಟ ಬಿ.ಎಸ್.ರಾಮಮೂರ್ತಿಯವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ರಂಗಸಂಪದ ರಂಗತಂಡದ ಎಲ್ಲಾ ನಾಟಕಗಳಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಜನಮನ ಗೆದ್ದ ನಟನ ಅಗಲಿಕೆ ರಂಗಭೂಮಿಗೆ ತುಂಬಲಾರದ ನಷ್ಟವಾದಂತಾಗಿದೆ.

ಗೋವಾ ಫಿಲಂ ಫೆಸ್ಟಿವಲ್ ಮುಗಿಸಿ ಬಂದ ತಕ್ಷಣ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆಂದು ತಿಳಿದುಬಂದಿದೆ. ರಾಮಮೂರ್ತಿಯವರು ಸಿಎಂಟಿಐ ಸಂಸ್ಥೆಯ ನಿವೃತ್ತ ಉದ್ಯೋಗಿ.

ಅಭಿನಯ, ನಿರ್ದೇಶನದ ಮೂಲಕ ಅವರು 40ಕ್ಕೂ ಹೆಚ್ಚು ನಾಟಕಗಳ ಭಾಗವಾಗಿದ್ದರು. ರಂಗಸಂಪದದ ‘ತ್ರಿಶಂಕು’ ನಾಟಕದ ಮೂಲಕ ಅವರು ರಂಗಪ್ರವೇಶ ಮಾಡಿದ್ದರು. ‘ಹರಕೆಯ ಕುರಿ’, ‘ಮಹಾ ಚೈತ್ರ’, ‘ಒಡಲಾಳ’ ಮುಂತಾದ ನಾಟಕಗಳಲ್ಲಿ ನಟಿಸಿದ್ದರು. ‘ಜೈಸಿದನಾಯ್ಕ’, ‘ಸಂಗ್ಯಾಬಾಳ್ಯ’ ಸೇರಿ ಹಲವು ನಾಟಕಗಳನ್ನು ಅವರು ನಿರ್ದೇಶಿಸಿದ್ದರು. ಕೋಟ್ರಿಶಿಯ ಕನಸು, ಆರಂಭ, ಅಸಂಭವ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದರು. ರಾಮಮೂರ್ತಿಯವರು ಪತ್ನಿ ಹಾಗೂ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಇವರ ಪುತ್ರ ಅನುಪ್ ಉದಯೋನ್ಮುಖ ನಟ ಹಾಗೂ ನಿರ್ದೇಶಕರಾಗಿ ರೂಪುಗೊಳ್ಳುತ್ತಿದ್ದಾರೆ. ರಂಗಸಂಪದದ ಪದಾಧಿಕಾರಿಗಳು ಹಾಗೂ ರಂಗಭೂಮಿಯ ದಿಗ್ಗಜರು ಸೇರಿ ಅನೇಕ ಗಣ್ಯರು ರಾಮಮೂರ್ತಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.