ಶಾಕಿಂಗ್ | ಶಾಲಾ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಕಾಂಡೋಂ, ಗರ್ಭನಿರೋಧಕ ಮಾತ್ರೆ | ಶಾಲಾ ಸಿಬ್ಬಂದಿಗೆ ಶಾಕ್!!!
‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂಬ ಮಾತಿದೆ. ಆದರೆ ಈಗಿನ ಕಾಲ ಘಟ್ಟದ ಮಕ್ಕಳು ಹಾದಿ ತಪ್ಪುತ್ತಿದ್ದಾರೆಂದರೆ ತಪ್ಪಾಗಲಾರದು. ಏಕೆಂದರೆ ಪ್ರತಿಯೊಂದು ಮಗುವಿನ ಕೈಯಲ್ಲೂ ಮೊಬೈಲ್ ಎಂಬ ಮಾಯವಿ ಇದೆ. ಈ ಮೊಬೈಲ್ ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ಹಾನಿಕಾರ. ಈಗಂತೂ ಮೊಬೈಲ್ ನಲ್ಲಿ ಎಲ್ಲಾ ರೀತಿಯ ವಿಷಯಗಳು ಬಹುಬೇಗನೆ ದೊರೆಯುತ್ತದೆ. ಕೆಲವೊಂದು ಮಕ್ಕಳು ಮೆಚ್ಯೂರ್ಡ್ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೂ ಇದರ ಬಗ್ಗೆಯೇ ಮೊಬೈಲ್ ನಲ್ಲಿ ಹುಡುಕಿ ಅಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹಾದಿ ತಪ್ಪುತ್ತಿದ್ದಾರೆ.
ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದಾರೆಯೇ ಎಂದು ಪರಿಶೀಲಿಸಲು ಮುಂದಾದ ನಗರದ ಕೆಲವು ಶಾಲಾ ಸಿಬ್ಬಂದಿಗೆ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಕಂಡ ವಸ್ತುಗಳು ಅಚ್ಚರಿಯ ಜೊತೆಗೆ ಆಘಾತ ತಂದಿತ್ತು. ತರಗತಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ತರುತ್ತಾರೆ. ಎಂದು ಕೆಲವು ಶಿಕ್ಷಕರು ನೀಡಿದ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸಲು ಕೆಲವು ಶಾಲೆಗಳು ಆರಂಭಿಸಿವೆ. ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ಕೂಡ ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು.
ಇದರಂತೆ ಪರೀಶಿಲನೆ ನಡೆಸಿದಾಗ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಫೋನ್ ಅಷ್ಟೇ ಅಲ್ಲದೆ ನಗದು, ಕಾಂಡೋಮ್‌ಗಳು, ಗರ್ಭ ನಿರೋಧಕ ಮಾತ್ರೆಗಳು, ಲೈಟರ್, ಸಿಗರೇಟ್‌ಗಳು, ವೈಟ್‌ನರ್‌ಗಳು ಇರುವುದು ಕಂಡುಬಂದಿದೆ. 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಬ್ಯಾಗ್‌ನಲ್ಲಿ ಕಾಂಡೋಮ್ ಸಿಕ್ಕಿದೆ. ಒಂದು ಶಾಲೆಯ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಗರ್ಭ ನಿರೋಧಕ ಮಾತ್ರೆ (ಐ-ಪಿಲ್) ಹಾಗೂ ನೀರಿನ ಬಾಟಲಿಗಳಲ್ಲಿ ಆಲ್ಕೋಹಾಲ್ ಕಂಡುಬಂದಿವೆ.
ಕೆಲವು ಶಾಲೆಗಳು ಪೋಷಕ- ಶಿಕ್ಷಕರ ವಿಶೇಷ ಸಭೆಗಳನ್ನು ನಡೆಸುತ್ತಿವೆ. ಈ ವಿಷಯದ ಬಗ್ಗೆ ಪೋಷಕರ ಜೊತೆ ಚರ್ಚೆ ನಡೆಸಿದಾಗ ಇದನ್ನು ಕೇಳಿಯೇ ಅವರು ಆಘಾತಕ್ಕೆ ಒಳಗಾಗಿದ್ದಾರೆ. ತಮ್ಮ ಮಕ್ಕಳ ವರ್ತನೆಯಲ್ಲಿ ಇದ್ದಕ್ಕಿದ್ದಂತೆ ಆಗಿರುವ ಈ ದಿಢೀರ್ ಬದಲಾವಣೆಗಳ ಬಗ್ಗೆಯೂ ಕೆಲವು ಪೋಷಕರು ಹೇಳಿಕೊಂಡಿದ್ದಾರೆ. ಎಂದು ನಾಗರಬಾವಿಯಲ್ಲಿರುವ ಶಾಲೆಯೊಂದರ ಪ್ರಾಂಶುಪಾಲರು ಹೇಳಿದರು. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಲು ಮುಂದಾಗಿರುವ ಕೆಲವು ಶಾಲೆಗಳು, ವಿದ್ಯಾರ್ಥಿ ಗಳನ್ನು ಅಮಾನತುಗೊಳಿಸುವ ಬದಲು ಅವರಿಗೆ ಕೌನ್ಸೆಲಿಂಗ್ ಕೊಡಿಸುವಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ. ಅದಕ್ಕಾಗಿ ಒಂದು ವಾರದಿಂದ 10 ದಿನಗಳವರೆಗೆ ರಜೆಯನ್ನೂ ನೀಡಿದ್ದೇವೆ’ ಎಂದೂ ಪ್ರಾಂಶುಪಾಲರು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮನೋವೈದ್ಯ ಎ. ಜಗದೀಶ್ ಕೆಲವು ಮಕ್ಕಳೂ ಅಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಪ್ರಯೋಗ ಮಾಡಲು ಇಷ್ಟಪಡುವವರು ಇದ್ದಾರೆ. ಮಾದಕ ವ್ಯಸನ ಮತ್ತು ಅನ್ಯ ಲಿಂಗಿಯೊಂದಿಗೆ ಅತಿಯಾಗಿ ಬೆರೆಯುವುದು ದೈಹಿಕ ಸಂಪರ್ಕಕ್ಕೂ ಕಾರಣ ಆಗಬಹುದು. ಪೋಷಕರು ತಮ್ಮ ಮಕ್ಕಳೊಂದಿಗೆ ಕುಳಿತು ಮಾತನಾಡಬೇಕು. ಜೊತೆಗೆ ಮಾರ್ಗದರ್ಶನವನ್ನೂ ನೀಡಬೇಕು’ ಎಂದು ಸಲಹೆ ನೀಡಿದರು.