ಪ್ರವೀಣ್ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿ ?

ಪುತ್ತೂರು : ಪ್ರವೀಣ್ ನೆಟ್ಟಾರು ಹತ್ಯೆ ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಹಂತಕರ ಪತ್ತೆಗೆ ತನಿಖಾ ತಂಡ ವಿಶೇಷ ತಂಡ ರೂಪಿಸಿ, ಆರೋಪಿಗಳನ್ನು ಪತ್ತೆ ಹಚ್ಚಲಾಗಿತ್ತು. ಈತನ್ಮಧ್ಯೆ ಹಂತಕರಿಗೆ ನೆರವು ನೀಡಿದ ಆರೋಪದಲ್ಲಿ ಎನ್‌ಐಎ ಲುಕೌಟ್ ನೋಟಿಸ್ ಕೂಡಾ ನೀಡಿತ್ತು. ಈ ಲುಕ್ ಔಟ್ ನೋಟಿಸ್ ಹೊರಡಿಸಿದ ನಾಲ್ವರು ಆರೋಪಿಗಳ ಪತ್ತೆಯಾಗಿಲ್ಲ ಎನ್ನುವುದು ಮಾತ್ರ ವಿಶೇಷ.

ದೇಶದ ನಾನಾ ಭಾಗಗಳಲ್ಲಿ ಎನ್ ಐಎ ತಂಡ, ಬೆಳ್ಳಾರೆ ನಿವಾಸಿಗಳಾದ ಮಹಮ್ಮದ್ ಮುಸ್ತಫಾ, ಸಿದ್ಧಿಕ್
ಯಾನೆ ಪೈಂಟರ್ ಸಿದ್ಧಿಕ್, ಸುಳ್ಯದ ಉಮ್ಮರ್ ಫಾರೂಕ್,
ಮಡಿಕೇರಿಯ ತುಫೈಲ್ ಎಂ.ಎಚ್. ಪತ್ತೆಗಾಗಿ ಹುಡುಕಾಟ ನಡೆಸುತ್ತಿದೆ.

ತಲೆಮರೆಸಿಕೊಂಡಿರುವ ಆರೋಪಿ ಗಳಲ್ಲಿ ಓರ್ವ ಮಡಿಕೇರಿ ನಗರದ ಗದ್ದಿಗೆ ಮಸೀದಿ ಹಿಂಭಾಗದ ನಿವಾಸಿ ತುಫೈಲ್ ಎಂ.ಎಚ್. ವಿದೇಶಕ್ಕೆ ಪರಾರಿ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಎನ್‌ಐಎ ಮಾಹಿತಿ ಕಲೆ ಹಾಕಿದೆ. ಉಳಿದ ಮೂವರು ಆರೋಪಿಗಳು ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆಯ ಬಗ್ಗೆ ಪಾಸ್‌ಪೋರ್ಟ್ ತಯಾರಿ ಸೈಬರ್ ಸೆಂಟರ್‌ಗಳಲ್ಲಿ ತನಿಖೆ ನಡೆಸಿದ್ದು ಆದರೆ ಈ ಬಗ್ಗೆ ಇನ್ನೂ ಮಹತ್ವದ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. ಹಾಗಾಗಿ ಈ ಮೂವರು ದೇಶ ಬಿಟ್ಟು ಹೋಗಿರಲಾರರು ಎಂಬ ಅಂಶ ಬೆಳಕಿಗೆ ಬಂದಿದೆ.

ಇದರ ಜೊತೆ ಜೊತೆಗೆ ಕುಕ್ಕರ್ ಪ್ರಕರಣದ ಆರೋಪಿ ತೀರ್ಥಹಳ್ಳಿಯ ಶಾರೀಕ್ ಮಡಿಕೇರಿ ಮೂಲಕ ಸುಳ್ಯ, ಪುತ್ತೂರಿಗೆ ಬಂದು ಅನಂತರ ಮಂಗಳೂರಿಗೆ ತೆರಳಿರುವ ಹಿನ್ನೆಲೆಯಲ್ಲಿ ಈ ಆರೋಪಿಗೆ ಪ್ರವೀಣ್ ಹಂತಕರ ಸಂಪರ್ಕ ಮೊದಲೇ ಇದ್ದಿತ್ತೇ ಎನ್ನುವ ಬಗ್ಗೆಯು ತನಿಖೆ ನಡೆಯುತ್ತಿದೆ.

ಘಟನೆಯ ಮಾಸ್ಟರ್ ಮೈಂಡ್ ಮತೀನ್ ತಾಹಾ ವಿದೇಶದಲ್ಲಿದ್ದುಕೊಂಡು ಉಗ್ರ ಕೃತ್ಯಗಳಿಗೆ ಯುವಕರನ್ನು ಸೆಳೆಯುತ್ತಿದ್ದು ಆತನೊಂದಿಗೆ ನೆಟ್ಟಾರು ಪ್ರಕರಣದ ಆರೋಪಿಗಳು ಸಂಪರ್ಕ ಹೊಂದಿರುವ ಬಗ್ಗೆಯೂ ಎನ್‌ಐಎ ತನಿಖೆ ನಡೆಸಲಿದೆ.

ಸ್ಥಳೀಯ ಪರಿಸರದಲ್ಲಿ ಮಾಹಿತಿದಾರರು ಇಲ್ಲದೆ ಕುಕ್ಕರ್ ಪ್ರಕರಣದ ಆರೋಪಿಗೆ ಆತ ಈ ಕೃತ್ಯ ಮಾಡಲು ಅಸಾಧ್ಯ ಎಂಬ ಅಂಶ ಕೂಡಾ ತನಿಖೆಗೆ ಪೂರಕವಾಗಿದೆ. ಅಷ್ಟು ಮಾತ್ರವಲ್ಲದೇ, ಪ್ರವೀಣ್ ನೆಟ್ಟಾರು ಹತ್ಯೆಕೋರರು ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದರು. ಈ ಆರೋಪಿಗಳಿಗೆ ರಕ್ಷಣೆ ನೀಡಲಾಗಿತ್ತು. ರಕ್ಷಣೆಯ ಹಿಂದೆ ಶಾರೀಕ್ ನಂಟಿನ ಬಗ್ಗೆಯು ಪರಿಶೀಲಿಸಲಾಗುತ್ತಿದೆ.

ನಿಷೇಧಿತ ಪಿಎಫ್‌ಐ ಸದಸ್ಯರಾಗಿರುವ ಮೊಹಮ್ಮದ್ ಮುಸ್ತಫಾ ಎಸ್., ತುಫೈಲ್ ಎಂ.ಎಚ್. ಪತ್ತೆಗೆ ತಲಾ 5 ಲಕ್ಷ ರೂ. ಹಾಗೂ ಉಮ್ಮರ್ ಫಾರೂಕ್, ಅಬೂಬಕ್ಕರ್ ಸಿದ್ದೀಕ್ ಇವರಿಗೆಲ್ಲ ಒಂದು ತಿಂಗಳ ಹಿಂದೆ ಆರೋಪಿಗಳ ಗುರುತು ಪತ್ತೆಗೆ ಲುಕೌಟ್ ನೋಟಿಸ್ ನೀಡಲಾಗಿತ್ತು.

ಇವರ ಪತ್ತೆಗೆ ತಲಾ 2 ಲಕ್ಷ ರೂ. ನಗದು ಬಹುಮಾನ ಈ ಮೊದಲೇ ಘೋಷಿಸಲಾಗಿದೆ. ಈ ನಾಲ್ವರು ಪ್ರವೀಣ್ ಹಂತಕರಿಗೆ ಅಡಗುತಾಣ, ಆರ್ಥಿಕ ಸಹಕಾರ ನೀಡಿದ ಆರೋಪ ಇದೆ.

Leave A Reply

Your email address will not be published.