PPF 15 ವರ್ಷದ ನಂತರ ಏನಾಗುತ್ತೆ ? ಇಲ್ಲಿದೆ ಇಂಟೆರೆಸ್ಟಿಂಗ್ ಮಾಹಿತಿ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಲ್ಲಿ ಜನಪ್ರಿಯತೆ ಪಡೆದಿರುವಂತದ್ದಾಗಿದೆ. ವರ್ಷಕ್ಕೆ ಸುಮಾರು ಒಂದೂವರೆ ಲಕ್ಷ ರೂವರೆಗೂ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದಾಗಿದೆ. ಇನ್ನೂ 15 ವರ್ಷದವರೆಗೆ ಪಿಪಿಎಫ್ ಯೋಜನೆ ಇರುತ್ತದೆ. ಆ ನಂತರ ಪ್ರತೀ 5 ವರ್ಷಕ್ಕೊಮ್ಮೆ ಅವಧಿಯನ್ನು ವಿಸ್ತರಿಸಬಹುದು. ಆದರೆ ಪ್ರಶ್ನೆ ಏನೆಂದರೆ, ನಿಮ್ಮ ಪಿಪಿಎಫ್ ಖಾತೆ 15 ವರ್ಷ ಬಳಿಕ ಏನಾಗುತ್ತದೆ ಎಂಬುದು ಈ ಬಗ್ಗೆ ಮಾಹಿತಿ ಇಲ್ಲಿದೆ.
ಈ ಗೊಂದಲಕ್ಕೆ, ಸೆಬಿ ನೊಂದಾಯಿತ ಇನ್ವೆಸ್ಟ್‌ಮೆಂಟ್ ಅಡ್ವೈಸರ್, ಬೆಂಗಳೂರಿನ ಬಸವರಾಜ್ ತೋಣಗಟ್ಟಿ ಅವರು ಕೆಲವು ಮಾಹಿತಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಆ ಮಾಹಿತಿ ಏನೆಂದರೆ, ಸಾಮಾನ್ಯವಾಗಿ ಯಾವುದೇ ಪಾಲಿಸಿ ಅಥವಾ ಯೋಜನೆಯಾದರೆ ನಿರ್ದಿಷ್ಟ ಅವಧಿಯ ಬಳಿಕ ಪರಿಸಮಾಪ್ತಿ ಆಗುತ್ತದೆ. ಅಂದರೆ ನೀವು 15 ವರ್ಷದ ವಿಮೆ ಪಾಲಿಸಿಯನ್ನು 2004 ನವೆಂಬರ್ 24ರಂದು ಮಾಡಿಸಿದ್ದರೆ, ಪಾಲಿಸಿ 2019 ನವೆಂಬರ್ 24ರಂದು ಮೆಚ್ಯೂರ್ ಆಗುತ್ತದೆ. ಆದರೆ ಪಿಪಿಎಫ್ ಖಾತೆಯಲ್ಲಿ ಅದರ ನಿಗದಿತ ಅವಧಿ ಮುಗಿದ ನಂತರ ಅಂದರೆ 2020 ಏಪ್ರಿಲ್ 1ರಂದು ಅದು ಮೆಚ್ಯೂರ್ ಆಗುತ್ತದೆ.
ಇನ್ನೂ ಪಿಪಿಎಫ್ ಖಾತೆ 15 ವರ್ಷದ ಬಳಿಕ ಮೆಚ್ಯೂರ್ ಆದಾಗ ನೀವು ಖಾತೆಯನ್ನು ಮುಚ್ಚಬಹುದು. ಅಥವಾ ಪ್ರತೀ ಐದು ವರ್ಷ ಅದನ್ನು ವಿಸ್ತರಿಸುತ್ತಾ ಹೋಗಬಹುದು, ಆದರೆ ನೀವು ಮತ್ತೆ ಹಣವನ್ನು ಖಾತೆಗೆ ಜಮೆ ಮಾಡುವ ಅವಕಾಶ ಇರುವುದಿಲ್ಲ. ಅಥವಾ ಹೂಡಿಕೆಯ ಜೊತೆಯಾಗಿ 5 ವರ್ಷಕ್ಕೆ ಅದನ್ನು ವಿಸ್ತರಿಸಬಹುದು.
ಒಂದು ವೇಳೆ ನಿಮ್ಮ ಪಿಪಿಎಫ್ ಖಾತೆ 15 ವರ್ಷಕ್ಕೆ ಮುಗಿದ ಬಳಿಕ ಅದನ್ನು ಮುಚ್ಚಿ ಹಣ ವಿತ್‌ಡ್ರಾ ಮಾಡಬೇಕಾದಲ್ಲಿ , ಖಾತೆ ಮುಗಿದ ದಿನದಿಂದ ಒಂದು ವರ್ಷದೊಳಗೆ ನಿರ್ಧರಿಸಿ ಖಾತೆ ಮುಚ್ಚಬೇಕು. ಹಾಗೇ ಉದಾಹರಣೆಗೆ, ನಿಮ್ಮ ಪಿಪಿಎಫ್ ಖಾತೆಯ ಅವಧಿ ನವೆಂಬರ್ 24ರಂದು ಮುಗಿಯುತ್ತದೆ ಎಂದಿಟ್ಟುಕೊಳ್ಳಿ. ನೀವು ಡಿಸೆಂಬರ್ 15ರಂದು ಖಾತೆ ಮುಚ್ಚುತ್ತೀರಿ ಎಂದಾದರೆ, ಆಗ ನಿಮಗೆ ನವೆಂಬರ್ 30ರವರೆಗಿನ ನಿಮ್ಮ ಪಿಪಿಎಫ್ ಯೋಜನೆಯ ಲಾಭ ಬಡ್ಡಿ ಸಮೇತ ಸಿಗುತ್ತದೆ. ಹಾಗೂ ನೀವು ಖಾತೆ ಮುಚ್ಚಿದಾಗ ಎಲ್ಲಾ ಹಣವನ್ನೂ ಒಂದೇ ಬಾರಿ ವಿತ್‌ಡ್ರಾ ಮಾಡಬಹುದು. ಅಥವಾ ಒಂದು ವರ್ಷದೊಳಗೆ ವಿವಿಧ ಕಂತುಗಳ ರೂಪದಲ್ಲಿ ಕೂಡ ಹಣವನ್ನು ಪಡೆಯಬಹುದಾಗಿದೆ.
ಕೆಲವೊಮ್ಮೆ ಯೋಜನೆ ಮೆಚ್ಯೂರ್ ಆದರೂ ಬಡ್ಡಿ ಸಿಗುತ್ತಿರುತ್ತದೆ ಎಂದು ಅದನ್ನು ಹಾಗೇ ಬಿಟ್ಟುಬಿಡಬಾರದು. ಪಾಲಿಸಿ ಅವಧಿಯ ಬಳಿಕ ಒಂದು ವರ್ಷದವರೆಗೆ ಕಾಲಾವಕಾಶ ಇರುತ್ತದೆ. ಒಂದು ವರ್ಷವಾದ ಬಳಿಕ ನೀವು ಏನೊಂದು ನಿರ್ಧಾರ ಕೈಗೊಳ್ಳದಿದ್ದರೆ ಆಗ ನಿಮ್ಮ ಪಿಪಿಎಫ್ ಖಾತೆ ಕೊಡುಗೆ ರಹಿತ 5 ವರ್ಷದ ಅವಧಿಗೆ ವಿಸ್ತರಣೆ ಆಗುತ್ತದೆ. ಆ ಐದು ವರ್ಷದ ಬಳಿಕ ಬೇಕಾದಲ್ಲಿ ಪ್ರತೀ ಐದು ವರ್ಷ ಅವಧಿಗೆ ವಿಸ್ತರಿಸುತ್ತಾ ಹೋಗಬಹುದು. ಇನ್ನೂ ಈ ವಿಸ್ತರಣಾ ಅವಧಿಯಲ್ಲಿ ನೀವು ನಿಮ್ಮ ಖಾತೆಗೆ ಹಣ ಜಮೆ ಮಾಡುವ ಅವಕಾಶ ಇರುವುದಿಲ್ಲ. ಆದರೆ ನಿಮ್ಮ ಖಾತೆಯಿಂದ ಒಂದು ವರ್ಷದಲ್ಲಿ ಒಮ್ಮೆ ವಿತ್‌ಡ್ರಾ ಮಾಡಬಹುದಾಗಿದೆ.
ಇನ್ನೂ ನೀವು ಕೊಡುಗೆಯ ಜೊತೆಗೆ ಖಾತೆಯ ಅವಧಿಯನ್ನು 5 ವರ್ಷದವರೆಗೆ ವಿಸ್ತರಣೆ ಮಾಡಬೇಕು ಎಂದಿದ್ದರೆ, ಪಾಲಿಸಿ ಅವಧಿ ಮುಗಿದು ಒಂದು ವರ್ಷದ ಒಳಗೆ ಆಯ್ಕೆ ಮಾಡಿಕೊಳ್ಳಬೇಕು. ನೀವೇನಾದರೂ ಪಾಲಿಸಿ ಯೋಜನೆ ಮುಂದುವರಿಸದೆ ಖಾತೆಗೆ ಹಣ ಜಮೆ ಮಾಡಿದರೆ, ಆ ಹೆಚ್ಚುವರಿ ಹಣಕ್ಕೆ ಯಾವ ಬಡ್ಡಿ ಸಹ ಸಿಗುವುದಿಲ್ಲ. ಅಷ್ಟೇ ಅಲ್ಲದೆ, ತೆರಿಗೆ ರಿಯಾಯಿತಿ ಕೂಡ ಸಿಗುವುದಿಲ್ಲ. ಆದರೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದು ಖಾತೆಯನ್ನು ರೆಗ್ಯುಲರೈಸ್ ಮಾಡಬಹುದಾಗಿದೆ. ಆದರೆ ಇಲ್ಲಿ ನೀವು ಐದು ವರ್ಷದ ಅವಧಿಯಲ್ಲಿ ಪೂರ್ಣ ಹಣವನ್ನು ವಿತ್‌ಡ್ರಾ ಮಾಡಲು ಸಾಧ್ಯವಿಲ್ಲ. ಶೇ. 60ರಷ್ಟು ಹಣ ಮಾತ್ರ ಪಡೆಯಬಹುದಾಗಿದೆ. ಹಾಗೂ ಉಳಿದ ಹಣ ಹಾಗೇ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.