ರೈಲಿನಲ್ಲಿ ಈ ಮೂರು ವಸ್ತುಗಳನ್ನು ಕೊಂಡೊಯ್ಯಬೇಡಿ!
ಎಲ್ಲೋ ದೂರದ ಊರಿಗೆ ಹೋಗಬೇಕಾದರೆ ಅಥವಾ ಪ್ರವಾಸಕ್ಕೆ ತೆರಳುವಾಗ ಅಗತ್ಯ ವಸ್ತುಗಳ ಜೊತೆಗೆ ಒಂದಿಷ್ಟು ವಸ್ತುಗಳು ಬ್ಯಾಗ್ ಸೇರುತ್ತವೆ. ಸ್ವಂತ ವಾಹನದಲ್ಲಿಯಾದರೆ ಬೇಕಾದಷ್ಟು ವಸ್ತುಗಳನ್ನು ಲಗೇಜ್ ನಲ್ಲಿ ತುಂಬಿಸಿಡುತ್ತೇವೆ. ಅದೇ ವಿಮಾನದಲ್ಲಿ ಪ್ರಯಾಣ ಎಂದಾಗ ಜನರು ಎಷ್ಟು ತೂಕದ ಲಗೇಜ್ ತೆಗೆದುಕೊಂಡು ಹೋಗಬಹುದು ಎಂಬುದನ್ನು ಪರಿಶೀಲಿಸಿ, ಅದಕ್ಕೆ ತಕ್ಕಂತೆ ಪ್ಯಾಕಿಂಗ್ ಮಾಡ್ತಾರೆ. ಇನ್ನೂ ಬಸ್ ಹಾಗೂ ಟ್ರೈನ್ ನಲ್ಲಿ ಜನರು ಆದರ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ರೈಲು ಪ್ರಯಾಣಕ್ಕೂ ಕೆಲವೊಂದು ನಿರ್ಬಂಧವಿದೆ. ಅದೇನೆಂದು ತಿಳಿಯೋಣ.
ರೈಲು ಪ್ರಯಾಣದಲ್ಲಿ ಕೂಡ ವಿಮಾನ ಪ್ರಯಾಣದಂತೆ ಹೆಚ್ಚುವರಿ ಲಗೇಜ್ ಗೆ ಹಣ ಪಾವತಿ ಮಾಡಬೇಕಾಗುತ್ತದೆ. ಮನೆಯಲ್ಲಿರುವ, ಅಗತ್ಯ ವಸ್ತುಗಳನ್ನೆಲ್ಲ ರೈಲು ಪ್ರಯಾಣದ ವೇಳೆ ತೆಗೆದುಕೊಂಡು ಹೋಗುವಂತಿಲ್ಲ. ಸದ್ಯ ರೈಲಿನಲ್ಲಿ ಕಟ್ಟುನಿಟ್ಟಾಗಿ ಕೆಲವು ವಸ್ತುಗಳಿಗೆ ನಿಷೇಧವಿದೆ.
ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಅಂದ್ರೆ ಅದೇನೋ ವಿಶೇಷವಾದ ನಂಟು. ಆ ದಿನ ಪಟಾಕಿ ಇಲ್ಲ ಅಂದ್ರೆ ಕೆಲವರಿಗೆ ಹಬ್ಬಕ್ಕೆ ಕಳೆಯೇ ಇರೋದಿಲ್ಲ. ಇನ್ನೂ ಎಲ್ಲೋ ಕೆಲಸದಲ್ಲಿದ್ದವರು ಹಬ್ಬಕ್ಕಾಗಿ ಊರಿಗೆ ಮರಳುವಾಗ ಪಟಾಕಿಯನ್ನು ತೆಗೆದುಕೊಂಡು ಹೋಗಲು ಮುಂದಾಗ್ತಾರೆ. ಆದರೆ ರೈಲಿನಲ್ಲಿ ನಿಮ್ಮೊಂದಿಗೆ ಪಟಾಕಿ ತೆಗೆದುಕೊಂಡು ಹೋಗುವಂತಿಲ್ಲ. ರೈಲಿನಲ್ಲಿ ಪಟಾಕಿ ನಿಷಿದ್ಧ. ಪಟಾಕಿ ಮಾತ್ರವಲ್ಲ ಸ್ಫೋಟಕ ವಸ್ತುಗಳನ್ನು ರೈಲಿನಲ್ಲಿ ಕೊಂಡೊಯ್ಯಬಾರದು.
ಯಾಕೆಂದರೆ, ಈ ವಸ್ತುಗಳು ಸ್ಫೋಟಗೊಂಡು ಪ್ರಯಾಣಿಕರು ಮತ್ತು ರೈಲಿಗೆ ಹಾನಿಯುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೈಲಿನ ನಿಯಮ ಮೀರಿ ನೀವು ಪಟಾಕಿ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರೆ ನೀವು ಜೈಲು ಸೇರಬಹುದು.
ಇನ್ನೂ ಸಿಲಿಂಡರ್ ಮತ್ತು ಒಲೆ ಭಾರತದಲ್ಲಿ ರೈಲು ಜನರ ಉಸಿರು. ಯಾಕಂದ್ರೆ ದೂರದ ಊರುಗಳಿಗೆ ಜನರು ಹೆಚ್ಚಾಗಿ ರೈಲನ್ನು ಅವಲಂಬಿಸುತ್ತಾರೆ. ಒಂದು ಊರಿನಿಂದ ಇನ್ನೊಂದು ಊರಿಗೆ ರೈಲಿನ ಮೂಲಕವೇ ಮನೆ ಸಾಮಾನುಗಳನ್ನು ಸಾಗಿಸುತ್ತಾರೆ. ಅನೇಕರು ತಮ್ಮೊಂದಿಗೆ ಒಲೆ ಮತ್ತು ಸಿಲಿಂಡರ್ ಕೂಡ ತೆಗೆದುಕೊಂಡು ಹೋಗ್ತಾರೆ. ಆದರೆ ಈ ವಸ್ತುಗಳನ್ನು ರೈಲಿನಲ್ಲಿ ನಿಷೇಧಿಸಲಾಗಿದೆ. ಈ ವಸ್ತುಗಳನ್ನು ರಹಸ್ಯವಾಗಿ ರೈಲಿನಲ್ಲಿ ಸಾಗಿಸಿದರೆ, ಸಾಗಿಸಿ ಸಿಕ್ಕಿಬಿದ್ದರೆ ಜೈಲೂಟ ಗ್ಯಾರಂಟಿ.
ಹಾಗೇ ರೈಲು ಪ್ರಯಾಣದ ವೇಳೆ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯುವುದು ಅಪರಾಧವಾಗಿದೆ. ರೈಲು ಪ್ರಯಾಣದ ವೇಳೆ ಗ್ಯಾಸ್ ಸಿಲಿಂಡರ್ ಕೊಂಡೊಯ್ಯುವುದಾದರೆ ಅದಕ್ಕೆ ಪೂರ್ವಾನುಮತಿಯನ್ನು ಪಡೆಯಬೇಕು. ಒಪ್ಪಿಗೆ ಪಡೆದರೂ ಕೂಡ ನೀವು ತುಂಬಿದ ಸಿಲಿಂಡರ್ ಕೊಂಡೊಯ್ಯಲು ಸಾಧ್ಯವಿಲ್ಲ. ಖಾಲಿ ಸಿಲಿಂಡರ್ ಮಾತ್ರ ತೆಗೆದುಕೊಂಡು ಹೋಗಬಹುದಾಗಿದೆ.
ಇನ್ನೂ ಆಸಿಡ್ ಕೂಡ ರೈಲಿನಲ್ಲಿ ನಿಷೇಧಿಸಲ್ಪಟ್ಟ ವಸ್ತುಗಳಲ್ಲಿ ಒಂದಾಗಿದೆ. ಆಸಿಡ್ ತುಂಬಾ ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿರುವುದೇ. ಕೆಲವರು ಬಾಟಲಿಯಲ್ಲಿ ತುಂಬಿ ರಹಸ್ಯವಾಗಿ ಅದನ್ನು ಕೊಂಡೊಯ್ಯುವ ಪ್ರಯತ್ನ ನಡೆಸುತ್ತಾರೆ. ಆಸಿಡನ್ನು ರೈಲಿನಲ್ಲಿ ಕೊಂಡೊಯ್ದು ಸಿಕ್ಕಿ ಬಿದ್ದರೆ ಜೈಲೂಟವೇ ಗತಿ. ನಿಮ್ಮ ಮೇಲೆ ರೈಲು ಸಿಬ್ಬಂದಿ ದಂಡ ವಿಧಿಸುತ್ತಾರೆ. ಮತ್ತು ನಿಷೇಧಿತ ವಸ್ತುಗಳನ್ನು ಕೊಂಡೊಯ್ಯುವವರ ವಿರುದ್ಧ ರೈಲ್ವೆ ಕಾಯಿದೆಯ ಸೆಕ್ಷನ್ 164 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಶಿಕ್ಷೆ ವಿಧಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ 1 ಸಾವಿರ ರೂಪಾಯಿ ದಂಡ ಅಥವಾ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗುತ್ತದೆ.