Auto Sweep Account : ಉಳಿತಾಯ ಖಾತೆಯಲ್ಲಿ ಶೇ.8ರಷ್ಟು ಬಡ್ಡಿ ಪಡೆಯಬೇಕೆ? ಹಾಗಾದರೆ ಹೀಗೆ ಮಾಡಿ!
ಉಳಿತಾಯ ಖಾತೆಯಲ್ಲಿಯೂ ಶೇಕಡಾ 8ರಷ್ಟು ಬಡ್ಡಿ ಪಡೆಯಬಹುದಾಗಿದೆ. ಅದಕ್ಕಾಗಿ ನಾವು ಉಳಿತಾಯ ಖಾತೆಯನ್ನು ಆಟೋ ಸ್ವೀಪ್ ಖಾತೆ ಜೊತೆಗೆ ಲಿಂಕ್ ಮಾಡುವ ಮೂಲಕ ಅದರ ಪ್ರಯೋಜನವನ್ನು ಪಡೆಯಬಹುದು. ಇನ್ನು ಇದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಜನರು ದಿನಂಪ್ರತಿ ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನು ಹೆಚ್ಚು ಬಡ್ಡಿಗಾಗಿ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ (Invsetment) ಮಾಡುವುದು ಹೆಚ್ಚಾಗಿದೆ ಎಂದು ಹಣಕಾಸು ಸಂಸ್ಥೆಗಳು ನಡೆಸಿದ ಇತ್ತೀಚಿನ ಸಮೀಕ್ಷೆಯಿಂದ ತಿಳಿದುಬಂದಿದೆ. ಬ್ಯಾಂಕ್ಗಳಲ್ಲಿ ಸಿಗುವ ಕಡಿಮೆ ಬಡ್ಡಿ ದರವೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಮ್ಯೂಚುವಲ್ ಫಂಡ್ ಹೂಡಿಕೆದಾರರಲ್ಲಿ ಎಸ್ಐಪಿ (Systematic investment plan) ಬಹಳ ಜನಪ್ರಿಯವಾಗಿದೆ. ಬ್ಯಾಂಕ್ಗಳಲ್ಲಿ ಸ್ಥಿರ ಠೇವಣಿ (FD) ಇಟ್ಟರೂ ಶೇಕಡಾ 7-8 ರ ವರೆಗೆ ಬಡ್ಡಿ ದೊರೆಯುತ್ತದೆ. ಆದರೆ ಉಳಿತಾಯ ಖಾತೆಯಲ್ಲಿಯೂ ಶೇಕಡಾ 8ರ ವರೆಗೆ ಬಡ್ಡಿ ಪಡೆಯಬಹುದು. ಅದಕ್ಕಾಗಿ ಉಳಿತಾಯ ಖಾತೆಯನ್ನು ಆಟೋ ಸ್ವೀಪ್ ಖಾತೆ ಜತೆ ಲಿಂಕ್ ಮಾಡಿ ಅದರ ಪ್ರಯೋಜನವನ್ನು ಪಡೆಯಬೇಕು.
ಇನ್ನೂ ಈ ಆಟೋ ಸ್ವೀಪ್ ಖಾತೆ ಅಂದ್ರೆ ಏನು ಅಂತ ನೋಡೋಣ. ಆಟೋ ಸ್ವೀಪ್ ಖಾತೆಯು ಅತಿಹೆಚ್ಚು ಬಡ್ಡಿ ದರ ನೀಡುವ ಬ್ಯಾಂಕಿಂಗ್ ಸೌಲಭ್ಯವಾಗಿದೆ. ಈ ಖಾತೆಯು ಉಳಿತಾಯ ಖಾತೆ ಮತ್ತು ಸ್ಥಿರ ಠೇವಣಿ (fixed deposit) ಸಂಯೋಜನೆಗೊಂಡು ತೆರೆಯುವ ಖಾತೆಯಾಗಿದೆ. ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿನ ಹಣವನ್ನು ಉಳಿತಾಯ ಖಾತೆಯಲ್ಲಿ ಜಮೆ ಮಾಡಿದಾಗ ಅದು ಸ್ವಯಂಚಾಲಿತವಾಗಿ ಎಫ್ಡಿ ಖಾತೆಗೆ ಜಮೆಯಾಗುತ್ತದೆ. ವೈಯಕ್ತಿಕವಾಗಿಯೂ ಸಂಸ್ಥೆಗಳಿಗೆ ಈ ರೀತಿಯ (ಆಟೋ ಸ್ವೀಪ್) ಖಾತೆ ತೆರೆಯಲು ಬ್ಯಾಂಕ್ಗಳು ಅವಕಾಶ ನೀಡುತ್ತವೆ.
ಸೇವಿಂಗ್ಸ್ ಪ್ಲಸ್ ಅಕೌಂಟ್ ಮಾದರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಟೋ ಸ್ವೀಪ್ ಖಾತೆ ತೆರೆಯಲು ಗ್ರಾಹಕರಿಗೆ ಅವಕಾಶ ನೀಡಿದೆ. ಮೊದಲು ಬ್ಯಾಂಕ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಅಥವಾ ಆನ್ಲೈನ್ನಲ್ಲಿಯೂ ಈ ಆಟೋ ಸ್ವೀಪ್ ಸೇವಿಂಗ್ಸ್ ಪ್ಲಸ್ ಅಕೌಂಟ್ ಅನ್ನು ತೆರೆಯಬಹುದಾಗಿದೆ.
ಎಸ್ಬಿಐನಲ್ಲಿ ಠೇವಣಿಗಳ ಅವಧಿ 1ವರ್ಷದಿಂದ 5 ವರ್ಷ ಆಗಿದೆ. ಆಟೋ ಸ್ವೀಪ್ ಸೌಲಭ್ಯಕ್ಕಾಗಿ ಕನಿಷ್ಠ ತ್ರೆಶ್ಹೋಲ್ಡ್ (ಇದಕ್ಕಿಂತ ಮೇಲಿರುವ ಮೊತ್ತ ಆಟೋ ಸ್ವೀಪ್ ಆಗಿ ಪರಿವರ್ತನೆಯಾಗುತ್ತದೆ) ಮಿತಿ 35,000 ರೂ. ಹಾಗೂ ಉಳಿತಾಯ ಖಾತೆಯಲ್ಲಿ ಕನಿಷ್ಠ 25,000 ರೂ. ಇರಬೇಕು. ರಿಸಲ್ಟೇಂಟ್ಗಿಂತ ಕಡಿಮೆ ಮೊತ್ತ ಇದ್ದರೆ ಆಗ ಎಫ್ಡಿಯಿಂದ ಉಳಿತಾಯ ಖಾತೆಗೆ ಹಣ ರಿವರ್ಸ್ ಆಗುತ್ತದೆ. ಹೇಗೆಂದು ಎಸ್ಬಿಐ ಆಟೋ ಸ್ವೀಪ್ ಖಾತೆ ಲೆಕ್ಕಾಚಾರ ಇಲ್ಲಿದೆ.
ವ್ಯಕ್ತಿಯೊಬ್ಬರು ತಮ್ಮ ಸೇವಿಂಗ್ಸ್ ಪ್ಲಸ್ ಖಾತೆಯಲ್ಲಿ 50,000 ರೂ. ಹೊಂದಿದ್ದು, 25,000 ರೂ. ಅನ್ನು ತ್ರೆಶ್ಹೋಲ್ಡ್ ಮಿತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದಿಟ್ಟುಕೊಂಡರೆ, ಉಳಿದ 25,000 ರೂ. ಸ್ವಯಂಚಾಲಿತವಾಗಿ ಎಫ್ಡಿ ಆಗಿ ಪರಿವರ್ತನೆಗೊಳ್ಳುತ್ತದೆ. ಇದಕ್ಕೆ ಸುಮಾರು ಶೇಕಡಾ 7ರ ವರೆಗೆ ಬಡ್ಡಿ ದೊರೆಯುತ್ತದೆ. ಆಗ ಅವರ ಖಾತೆಯಲ್ಲಿ ಉಳಿದಿರುವ 25,000 ರೂ.ಗೆ ಉಳಿತಾಯದ ಬಡ್ಡಿಯಾಗಿ ಶೇಕಡಾ 3ರಿಂದ 4ರ ವರೆಗೆ ಸಿಗುತ್ತದೆ.
ಇನ್ನೂ ಈ ಆಟೋ ಸ್ವೀಪ್ ಹಣವನ್ನು ಯಾವಾಗ ಬೇಕಾದರೂ ವಿತ್ಡ್ರಾ ಮಾಡಬಹುದು. ಇದಕ್ಕೆ ಮಾಮೂಲಿ ಎಫ್ಡಿಗಳಂತೆ ಲಾಕ್ಇನ್ ಅವಧಿಯು ಇಲ್ಲ. ಈ ಆಟೋ ಸ್ವೀಪ್ ಅಕೌಂಟ್ ಯಾಕೆ ಉತ್ತಮವೆಂದರೆ, ಈ ಸೌಲಭ್ಯದ ಮೂಲಕ ಉಳಿತಾಯ ಖಾತೆಯಲ್ಲಿ ಪಡೆಯುವುದಕ್ಕಿಂತಲೂ ಅಧಿಕ ಬಡ್ಡಿಯನ್ನು ಪಡೆಯಬಹುದಾಗಿದೆ. ಲಾಕ್ ಇನ್ ಅವಧಿ ಇಲ್ಲದಿರುವುದರಿಂದ ಯಾವಾಗ ಬೇಕಿದ್ದರೂ ವಿತ್ಡ್ರಾ ಅಥವಾ ಹಣ ವರ್ಗಾವಣೆ ಮಾಡಬಹುದಾಗಿದೆ. ಮತ್ತು ಉಳಿತಾಯ ಖಾತೆಯಲ್ಲಿ ಮೊತ್ತ ಕಡಿಮೆಯಾದರೆ ಆಟೋ ಸ್ವೀಪ್ ಖಾತೆಯಿಂದ ಉಳಿತಾಯ ಖಾತೆಗೆ ಹಣ ರಿವರ್ಸ್ ಆಗುತ್ತದೆ. ಹೀಗಾಗಿ ಇದು ಉತ್ತಮವಾಗಿದೆ.