ವಿಚಿತ್ರ ಘಟನೆ : ತನ್ನ ಒಂದು ವರ್ಷದ ಕರುಳಬಳ್ಳಿಯನ್ನು ಮಾರಾಟ ಮಾಡಿದ ತಾಯಿ | ನಾಲ್ಕುವರೆ ವರ್ಷದ ನಂತರ ತಂದೆ ಮಡಿಲಿಗೆ !
ಕಾಲ ಬದಲಾಗಿದೆ ಪ್ರೀತಿ ವಾತ್ಸಲ್ಯ ಕರುಳು ಸಂಬಂಧ ಬಾಂಧವ್ಯಗಳಿಗೆ ಬೆಲೆ ಇಲ್ಲದಾಗಿದೆ. ತಾನು ತನ್ನದು ತನ್ನಿಂದ ಎಂದು ಜನರು ಮೆರೆದಾಡುತ್ತಿದ್ದಾರೆ. ಹೌದು ಇಲ್ಲೊಬ್ಬಳು ಹೆತ್ತ ತಾಯಿಯೇ ಮಗುವನ್ನು ತನ್ನ ಸ್ವಾರ್ಥಕ್ಕೋಸ್ಕರ ಇನ್ನೊಬ್ಬರಿಗೆ ಮಾರಾಟ ಮಾಡಿದ್ದಾಳೆ .
ಪತಿಯೊಂದಿಗೆ ಜಗಳವಾಡಿ ಪತ್ನಿಯೊಬ್ಬಳು ತನ್ನ ಒಂದುವರೆ ವರ್ಷದ ಮಗುವನ್ನು ಬೇರೆಯವರಿಗೆ ಮಾರಾಟ ಮಾಡಿದ್ದು, ನಾಲ್ಕುವರೆ ವರ್ಷದ ಬಳಿಕ ತಂದೆಗೆ ಸಿಕ್ಕಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಮಮತಾ ಹಾಗೂ ಬಾಲಮಣಿ 2012ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ನಂತರ ಬಳಿಕ ಆನೇಕಲ್ನಲ್ಲೇ ತನ್ನ ಪತಿಯೊಂದಿಗೆ ಮನೆ ಮಾಡಿಕೊಂಡು ವಾಸವಿದ್ದಳು. ಆದರೆ 2018ರಲ್ಲಿ ಗಂಡ – ಹೆಂಡತಿ ನಡುವೆ ಜಗಳ ಆಗಿತ್ತು. ಆ ವೇಳೆ ಬಾಲಮಣಿ ಬೆಂಗಳೂರಿನ ಜಯನಗರದ ನಿವಾಸಕ್ಕೆ ಹೋಗಿದ್ದಾನೆ.
ಈ ಘಟನೆ ಬಳಿಕ ಬಾಲಮಣಿ ಮತ್ತೇ 45 ದಿನಗಳ ನಂತರ ಮರಳಿ ಬಂದಾಗ ಮನೆಯಲ್ಲಿ ಹೆಣ್ಣು ಮಗು ಮಾತ್ರ ಇತ್ತು. ಗಂಡು ಮಗು ಇರಲಿಲ್ಲ. ಆಗ ಪತ್ನಿ ಮಮತಾಳನ್ನು ಪ್ರಶ್ನೆ ಮಾಡಿದಾಗ ಹಾಸ್ಟೆಲ್ನಲ್ಲಿ ಮಗು ಇರುವುದಾಗಿ ಹೇಳಿದ್ದಾಳೆ. ವಾರ ಕಳೆದರೂ ಕೂಡ ಮಗು ಎಲ್ಲಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿಯನ್ನು ಮಮತಾ ಪತಿ ಬಲಮಣಿಗೆ ನೀಡಲಿಲ್ಲ.
ಮಗುವಿನ ಬಗ್ಗೆ ಯಾವುದೇ ಸುಳಿವು ಸಿಗದೇ ಇದ್ದಾಗ ಮಮತಾ ಮಗುವನ್ನು ಏನೋ ಮಾಡಿದ್ದಾಳೆ ಎಂದು ಬಾಲಮಣಿ ಆತಂಕಕ್ಕೆ ಒಳಗಾಗಿ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಮಮತಾ ಹೊಸೂರು ಸಮೀಪದ ಸಿಪ್ಕಾಟ್ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಠಾಣೆಗೆ ಬಾಲಮಣಿಯನ್ನು ಕರೆದು ಬುದ್ಧಿವಾದ ಹೇಳಿದ್ದಾರೆ.
ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಂತರ ಮಮತಾ ತನ್ನ ಬಳಿ ಇದ್ದ ಹೆಣ್ಣು ಮಗುವನ್ನು ಸಹ ಪತಿ ಬಾಲಮಣಿ ಬಳಿಯಲ್ಲಿ ಬಿಟ್ಟು ಹೋಗಿದ್ದಳು.
ಸದ್ಯ ಬಾಲಮಣಿ ಆ ಹೆಣ್ಣು ಮಗುವನ್ನು ಹಾಸ್ಟೆಲ್ಗೆ ಸೇರಿಸಿ ವಿದ್ಯಾಭ್ಯಾಸ ನೀಡುತ್ತಾ, ಕಳೆದ ನಾಲ್ಕುವರೆ ವರ್ಷದಿಂದ ತನ್ನ ಮಗನಿಗಾಗಿ ತಮಿಳುನಾಡಿನ ಹಲವಡೆ ಹುಡುಕಾಟ ನಡೆಸಿದ್ದಾನೆ. ಮಗು ಇರುವುದು ಗೊತ್ತಾದರೂ ಸಹ ಪೊಲೀಸರೂ ಸಹ ಸಹಕಾರ ನೀಡದ ಹಿನ್ನೆಲೆ ಬಾಲಮಣಿಗೆ ತನ್ನ ಗಂಡು ಮಗುವನ್ನು ಕರೆದುಕೊಂಡು ಬರಲು ಸಹಾಯ ಆಗಿರಲಿಲ್ಲ.
ಎಲ್ಲಾ ಪ್ರಯತ್ನಗಳ ನಂತರ ಜಯನಗರದ ಆಮ್ ಆದ್ಮಿ ಪಾರ್ಟಿಯ ಸದಸ್ಯರಾದ ಭಾಸ್ಕರ್ ರಾವ್ ಮೂಲಕ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ತಿಳಿಸಿದ ಬಳಿಕ ಪೊಲೀಸರು ತಮಿಳುನಾಡಿನಿಂದ ಮಗುವನ್ನು ಅತ್ತಿಬೆಲೆ ಠಾಣೆಗೆ ಕರೆತಂದು ಮಗುವಿನ ತಂದೆಗೆ ಒಪ್ಪಿಸಿದ್ದಾರೆ.
ಸದ್ಯ ಮಗನನ್ನು ನೋಡಿದ ಬಾಲಮಣಿ ತಬ್ಬಿಕೊಂಡು ಮಗುವನ್ನು ಮುದ್ದಾಡಿದ್ದಾನೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ನಾಲ್ಕೈದು ಜನರ ಕೈ ಬದಲಾಗಿ ಹಳ್ಳಿಯೊಂದರಲ್ಲಿ ಸೇರಿದ್ದ ಮಗುವನ್ನು ಮರಳಿ ಸೇರಿಸಲು ಜೊತೆಗೆ ನಿಂತ ಆಮ್ ಆದ್ಮಿ ಪಾರ್ಟಿಯ ಸದಸ್ಯರು ಸಂತೋಷ ವ್ಯಕ್ತ ಪಡಿಸಿದ್ದಾರೆ.
ಕೊನೆಗೂ ಮಗು ಅನಾಥವಾಗಿ ಇರುವುದನ್ನು ತಪ್ಪಿಸಿ ಮಗುವನ್ನು ಶತ ಪ್ರಯತ್ನದಿಂದ ಹುಡುಕಾಡಿ ತನ್ನ ತಂದೆಗೆ ಒಪ್ಪಿಸಲಾಗಿದೆ.