ದೈವ ನರ್ತಕರು ‘ಓಹೋ’ ಅಂತ ಚಿರಾಡುವುದು ದೇವರು ಬರುವುದರಿಂದ ಅಲ್ಲ | ದೈವ ನರ್ತಕರಿಗೆ ಸರಕಾರ ಎರಡು ಸಾವಿರ ರೂಪಾಯಿ ನೀಡಬಾರದಿತ್ತು – ಬಿ ಟಿ ಲಲಿತಾ ನಾಯಕ್
ಕಾಂತಾರ ಸಿನಿಮಾ ವಿಚಾರವಾಗಿ ನಟ ಚೇತನ್ ಸೇರಿದಂತೆ ಹಲವರು ವಿಭಿನ್ನ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಆದರೆ ವಿಚಾರವಾದಿ, ಸಾಹಿತಿ, ಕಾಂಗ್ರೆಸ್ ನ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಈ ಸಿನಿಮಾವನ್ನು ಮತ್ತೊಂದು ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ. ಅವರು ರಿಷಬ್ ಶೆಟ್ಟಿ ಅವರನ್ನು ವಿಚಾರವಾದಿ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ ದೈವ ನರ್ತಕರಿಗೆ ಸರ್ಕಾರ 2000 ರೂಪಾಯಿ ಮಾಸಾಶನ ನೀಡಬಾರದಿತ್ತು ಇದು ಸರಿಯಾದ ನಿರ್ಧಾರವಲ್ಲ ಎಂದು ಹೇಳಿದ್ದಾರೆ.
ರಿಷಬ್ ಶೆಟ್ಟಿ ಅವರು ಹಿಂದೂತ್ವವಾದಿ ಎಂದು ಒಂದು ಗುಂಪು ಮಾತನಾಡುತ್ತಿದ್ದರೆ, ಬಿ.ಟಿ ಲಲಿತಾ ನಾಯಕ್, ರಿಷಬ್ ಶೆಟ್ಟಿ ಅವರನ್ನು ವಿಚಾರವಾದಿ ಎಂದಿದ್ದಾರೆ. ಅದಲ್ಲದೆ, ಕಾಂತಾರ ಸಿನಿಮಾದ ಬಗ್ಗೆಯೂ ಮಾತನಾಡಿದ ಅವರು ‘ದೈವಾರಾಧನೆ ಸಂದರ್ಭದಲ್ಲಿ ದೇವರು ಅಥವಾ ದೈವ ನರ್ತಕರ ಮೈಮೇಲೆ ಪ್ರವೇಶ ಆಗುವುದು ಶುದ್ಧ ಸುಳ್ಳು. ಇದೊಂದು ಕೇವಲ ಕಾಲ್ಪನಿಕವಾಗಿದೆ. ದೈವ ನರ್ತಕರು ಓಹೋ ಅಂತ ಚಿರಾಡುವುದು, ಕುಣಿಯುವುದು, ದೇವರು ಮೈಮೇಲೆ ಬರುವುದರಿಂದ ಅಲ್ಲ. ಅದಕ್ಕೆ ಬೇರೆ ಕಾರಣವಿದೆ’ ಎಂದು ಹೇಳಿದ್ದಾರೆ.
ಹಾಗೇ ರಿಷಬ್ ಶೆಟ್ಟಿ ಬಗ್ಗೆ ಹೇಳಿರುವ ಲಲಿತಾ ನಾಯಕ್, ‘ರಿಷಬ್ ತನ್ನ ವಿಚಾರವನ್ನು ನೇರವಾಗಿ ಹೇಳಿ ಹೊಡಿಸಿಕೊಳ್ಳಲು ತಯಾರಿಲ್ಲ. ಹೀಗಾಗಿ ಈ ಮಾರ್ಗವನ್ನು ಅನುಸರಿಸಿದ್ದಾನೆ. ಆತ ತನ್ನ ವಿಚಾರವನ್ನು ನೇರವಾಗಿ ಹೇಳಿದ್ರೆ ಈ ಮೂರ್ಖ ಜನರು ಆತನನ್ನು ಹಿಡಿದು ಹೊಡೆಯುತ್ತಾರೆ. ಪರದೆಗೆ ಬೆಂಕಿ ಹಚ್ಚುತ್ತಾರೆ. ಕೆಲವು ಜನರ ತಲೆ ಅಷ್ಟರಮಟ್ಟಿಗೆ ಕೆಟ್ಟಿದೆ. ಸತ್ಯವನ್ನು ನೇರವಾಗಿ ಹೇಳಿದರೆ ಆತನನ್ನು ಕೊಂದ ಹಾಕುತ್ತಾರೆ. ಇದು ಆತನಿಗೆ ಬೇಕಿಲ್ಲ. ಆತ ಇನ್ನೂ ಬದುಕು ಬೇಕು ಅಂತ ಬಹಳಷ್ಟು ಬುದ್ದಿವಂತಿಕೆಯಿಂದ ಸಿನಿಮಾ ಮಾಡಿದ್ದಾನೆ’ ಎಂದಿದ್ದಾರೆ.
ಕಾಂತಾರ ಸಿನಿಮಾ ನೋಡಲು ಬಹಳಷ್ಟು ಬುದ್ಧಿವಂತಿಕೆ ಬೇಕು. ಕಾಂತಾರ ಸಿನಿಮಾ ಕಾಡಿನ ಜನರ ನೋವಿನ ಕಥೆಯಾಗಿದೆ. ಅವರನ್ನು ಜಮೀನ್ದಾರಿ ಪದ್ಧತಿಯ ಮೂಲಕ ಒಕ್ಕಲೆಬ್ಬಿಸಲು ನೋಡಿದರು. ಅವರಿಗೆ ಬಹಳಷ್ಟು ಚಿತ್ರಹಿಂಸೆ ನೀಡಿದರು. ಹೀಗಾಗಿ ಅವರು ತಮ್ಮ ಉಳಿವಿಗಾಗಿ ಪೊಲೀಸರ ಮತ್ತು ಸರ್ಕಾರದ ಮೊರೆ ಹೋದರು. ಅವರಿಂದ ನ್ಯಾಯ ಸಿಗದೆ ಚಿರಾಡಿ, ಕೂಗಾಡಿ ತಮ್ಮ ನೋವು ಹೊರಹಾಕಿದರು. ಅದನ್ನೇ ದೈವ ಅಂತ ನಂಬಲಾಗುತ್ತಿದೆ ಎಂದಿದ್ದಾರೆ. ಹೀಗೆಲ್ಲಾ ಹೇಳಿಕೆ ನೀಡಿರುವ ಬಿ.ಟಿ ಲಲಿತಾ ನಾಯಕ್ ಮಾತುಗಳಿಗೆ ಈಗ ವ್ಯಾಪಕ ಖಂಡನೆ ವ್ಯಕ್ತವಾಗಿದೆ.