ಕುತ್ತಾರು ಕೊರಗಜ್ಜನ ಆದಿಸ್ಥಳದ ಬುಡವನ್ನು ಜೆಸಿಬಿಯಿಂದ ಅಗೆತ | ಆತಂಕದಲ್ಲಿ ಭಕ್ತರು,ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಮನವಿ

ಮಂಗಳೂರು: ಕುತ್ತಾರು ಕೊರಗಜ್ಜನ ಏಳು ಸ್ಥಳಗಳಲ್ಲಿ ಒಂದಾಗಿರುವ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಎದುರುಗಡೆಯಿರುವ ಕೊರಗಜ್ಜನ ಆದಿಸ್ಥಳದ ಬುಡವನ್ನು ಜೆಸಿಬಿ ಮೂಲಕ ಅಗೆಯುವ ಕಾರ್ಯ ಆರಂಭಗೊಂಡಿದ್ದು, ಭಕ್ತಾದಿಗಳು ಆತಂಕಕ್ಕೀಡಾಗಿದ್ದು ಜಿಲ್ಲಾಡಳಿತ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

 

ಫಿಝಾ ಗ್ರೂಪ್ ಸಂಸ್ಥೆ ಹಲವು ಎಕ್ರೆ ಜಾಗವನ್ನು ದೇರಳಕಟ್ಟೆ ಭಾಗದಲ್ಲಿ ಖರೀದಿಸಿದ್ದು, ಇದನ್ನು ಸಮತಟ್ಟುಗೊಳಿಸುವ ಕಾರ್ಯ ಹಲವು ತಿಂಗಳುಗಳಿಂದ ನಡೆಯುತ್ತಿದೆ.

ಈ ನಡುವೆ ಕಾನೂನಿನ ತೊಡಕು ಉಂಟಾದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಕೊರಗಜ್ಜನ ಆದಿಸ್ಥಳದ ಜಾಗವನ್ನು ಬಿಟ್ಟು ಉಳಿದ ಜಾಗವನ್ನು ಈ ನಡುವೆ ಸಮತಟ್ಟುಗೊಳಿಸಲಾಗಿತ್ತು.

ಇದೀಗ ಮತ್ತೆ ಸಮತಟ್ಟು ಗೊಳಿಸಿ ಮಣ್ಣು ಸಾಗಾಟ ಕಾರ್ಯ ಬಿರುಸಿನಿಂದ ಆರಂಭಗೊಂಡಿದೆ. ಎರಡು ದಿನಗಳಲ್ಲಿ ಕೊರಗಜ್ಜನ ಕಟ್ಟೆಯ ಬುಡವನ್ನು ಅಗೆಯುವ ಕಾರ್ಯ ನಡೆಯುತ್ತಿದೆ. ಇಲ್ಲಿ ತಿಂಗಳಿಗೊಮ್ಮೆ ಕೋಲ ನಡೆಯುತ್ತಿರುತ್ತದೆ. ಜಾತಿಮತವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾ ಬಂದಿರುತ್ತಾರೆ. ಆದರೆ ಇದೀಗ ಅದರ ಬುಡಕ್ಕೆ ಪೆಟ್ಟು ಬಿದ್ದಿರುವುದರಿಂದ ಕಟ್ಟೆಯಲ್ಲಿ ಸೇರುವ ದೈವ ಭಕ್ತರಿಗೆ ಆತಂಕ ಎದುರಾಗಿದೆ.

ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಈ ಭಾಗದಲ್ಲಿ ಎದುರಾಗುವ ಅನಾಹುತವನ್ನು ತಪ್ಪಿಸಬೇಕಿದೆ ಎಂದು ಕ್ಷೇತ್ರದ ಭಕ್ತರು ಮನವಿ ಮಾಡಿದ್ದಾರೆ.

Leave A Reply

Your email address will not be published.