ದೇವಸ್ಥಾನದ ಬೆಲೆಬಾಳುವ ವಸ್ತುಗಳ ಕಳವು | ಕೆಲವೇ ದಿನಗಳಲ್ಲಿ ಪತ್ರದ ಜೊತೆಗೆ ಹಿಂತಿರುಗಿಸಿದ ಕಳ್ಳ !ಇದರ ಹಿಂದಿನ ಕಾರಣವೇನಿರಬಹುದು?
ಕಳ್ಳರು ಕಳ್ಳತನ ಮಾಡಿ ಸಿಕ್ಕಿಬೀಳುವುದು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕಳ್ಳ ಪೋಲಿಸರು ಆತನನ್ನು ಹಿಡಿಯುವ ಮೊದಲೇ, ತಾನು ಕಳ್ಳತನ ಮಾಡಿರುವ ವಸ್ತುಗಳನ್ನು ಹಿಂತಿರುಗಿಸಿದ್ದಾನೆ. ಅಷ್ಟೇ ಅಲ್ಲದೆ ಅದರ ಜೊತೆಗೆ ಪತ್ರವನ್ನು ಇರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹಾಗಾದರೆ ಆ ಪತ್ರದಲ್ಲಿ ಏನಿದ್ದಿರಬಹುದು? ಕಳ್ಳ ವಸ್ತುಗಳನ್ನು ಯಾಕೆ ಹಿಂತಿರುಗಿಸಿದ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಈ ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ. ಕೆಲವು ದಿನಗಳ ಹಿಂದೆ ಕಳ್ಳನೊಬ್ಬ ದೇವಸ್ಥಾನದಿಂದ ಕದ್ದ ಬೆಳ್ಳಿ ಮತ್ತು ಹಿತ್ತಾಳೆ ಸೇರಿದಂತೆ ಕೆಲವು ಬೆಳೆಬಾಳುವ ವಸ್ತುಗಳನ್ನು ಪತ್ರದ ಮೂಲಕ ಕ್ಷಮೆಯಾಚಿಸಿ ಹಿಂದಿರುಗಿಸಿದ್ದಾನೆ.
ಪತ್ರದಲ್ಲಿ, ತಾನು ದೇವಸ್ಥಾನದ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ನನ್ನಿಂದ ತಪ್ಪಾಗಿದೆ ಕ್ಷಮಿಸಿ , ಕಳ್ಳತನ ಮಾಡಿದ ಎಲ್ಲಾ ವಸ್ತುಗಳನ್ನು ಹಿಂತಿರುಗಿಸುತ್ತಿದ್ದೇನೆ ಎಂದು ಬರೆಯಲಾಗಿತ್ತು.
ಕಳವು ಮಾಡಿದ ಬೆಲೆಬಾಳುವ ವಸ್ತುಗಳನ್ನೆಲ್ಲಾ ತಂದು ಊರಿನ ಗ್ರಾಮ ಪಂಚಾಯತ್ ಕಟ್ಟಡದ ಬಳಿ ಇರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕೆಲ ಸಮಯದ ನಂತರ ಆ ದಾರಿಯಲ್ಲಿ ಸಾಗುವ ವ್ಯಕ್ತಿಗಳು ಅಲ್ಲಿ ಇರಿಸಿದ್ದ ವಸ್ತುಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ದೇವಸ್ಥಾನದಲ್ಲಿ ಕದ್ದ ವಸ್ತುಗಳು ಎಂದು ತಿಳಿದು ಬಂದಿದೆ. ಅಲ್ಲದೆ ಅದರ ಜೊತೆಗೆ ಪತ್ರವೊಂದಿತ್ತು , ಪತ್ರವನ್ನು ಪರೀಕ್ಷಿಸಿದ ಪೋಲಿಸರು ದೇವಸ್ಥಾನದಲ್ಲಿ ಕಳವು ಮಾಡಿದ ಕಳ್ಳರೇ ಇದನ್ನು ಇಟ್ಟು ಹೋಗಿರುವುದೆಂದು ಧೃಡವಾಗಿದೆ.
ಕಳೆದ ಅಕ್ಟೋಬರ್ 24ರ ರಾತ್ರಿ ಬಜಾರ್ ಚೌಕ್‌ನಲ್ಲಿರುವ ಶಾಂತಿನಾಥ ದಿಗಂಬರ ಜೈನ ದೇವಸ್ಥಾನಕ್ಕೆ ನುಗ್ಗಿದ ಕಳ್ಳ ಅಲ್ಲಿದ್ದ ಒಂಬತ್ತು ಬೆಳ್ಳಿಯ ಛತ್ರಿಗಳು ಮತ್ತು ಮೂರು ಹಿತ್ತಾಳೆಯ ವಸ್ತುಗಳು ಸೇರಿದಂತೆ ದುಬಾರಿ ವಸ್ತುಗಳನ್ನು ಕಳವುಗೈದಿದ್ದ, ಈ ಬಗ್ಗೆ ಬಾಲಾಘಾಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು, ಕಳ್ಳರ ಪತ್ತೆಗೆ ವಿವಿಧ ತಂಡ ರಚಿಸಿ ಕಾರ್ಯಾಚರಣೆ ಕೂಡ ನಡೆಸಿದ್ದರು. ಇದನ್ನು ಅರಿತ ಕಳ್ಳ ತನಗಿನ್ನು ಉಳಿಗಾಲವಿಲ್ಲ, ಪೋಲಿಸರ ಕೈಗೆ ಸಿಕ್ಕಿದರೆ ಪುಡಿಯಾಗುತ್ತೇನೆ ಎಂದು ಹೆದರಿ ಪತ್ರ ಬರೆದು ಅದರ ಜೊತೆಗೆ ಕದ್ದ ವಸ್ತುಗಳನ್ನೆಲ್ಲಾ ಹಿಂತಿರುಗಿಸುವ ನಿರ್ಧಾರ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಳ್ಳನ ಹುಡುಕಾಟ ಮುಂದುವರೆಸಿದ್ದಾರೆ.